ಬೆಂಗಳೂರು: ರಾಜ್ಯದ ಆಯ್ದ 100 ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ನೀಡಲು ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಪ್ರತಿ ಜಿಲ್ಲೆಯಿಂದ ಆಯ್ದ 3 ಗ್ರಾಮ ಪಂಚಾಯತಿಗಳಂತೆ ಒಟ್ಟು 29 ಜಿಲ್ಲೆಗಳಿಂದ 87 ಕೇಂದ್ರಗಳು ಹಾಗೂ ಬೆಳಗಾವಿ ಜಿಲ್ಲೆಯಿಂದ 7 ಮತ್ತು ತುಮಕೂರು ಜಿಲ್ಲೆಯಲ್ಲಿ 6 ಕೇಂದ್ರಗಳಂತೆ ಒಟ್ಟು 100 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು, ಪ್ರಾಯೋಗಿಕವಾಗಿ 100 ಗ್ರಾಮ ಪಂಚಾಯತಿಗಳಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ-ಮಹಿಳಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಕೇಂದ್ರಗಳಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರತಿ ಕೇಂದ್ರದಲ್ಲಿ ಸ್ವ-ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮ, ರುಡ್ಸೆಟಿ-ಆರ್ಸೆಟಿ ಸರ್ಕಾರೇತರ ಬೆಂಬಲ ಸಂಸ್ಥೆಗಳ (TSA) ಮೂಲಕ ತರಬೇತಿ ನೀಡಿ, ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ, ಅನುಸರಣೆ ಮತ್ತು ಬೆಂಬಲ ನೀಡುವ ಮೂಲಕ 30,000 ಮಹಿಳೆಯರಿಗೆ ಸ್ವ-ಉದ್ಯೋಗ ಪ್ರಾರಂಭಿಸುವಂತೆ ಪ್ರೇರೆಪಿಸಲಾಗುವುದು, ಪ್ರತಿ ತರಬೇತಿ ಕೇಂದ್ರದಿಂದ 300 ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿಯಿಂದ ಹೆಚ್ಚಿನ ಲಾಭಪಡೆಯಲಾಗದೇ, ಆದಾಯ ಗಳಿಕೆಗಾಗಿ ಪರ್ಯಾಯ ವ್ಯವಸ್ಥೆ ಹುಡುಕುತ್ತಿರುವುದರಿಂದ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗ ಒದಗಿಸಬಲ್ಲ ಕೌಶಲ್ಯ ತರಬೇತಿಗಳ ಕೊರತೆ ಇರುವುದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಅವಶ್ಯಕತೆ ಇರುವುದನ್ನು ಗಮನಿಸಿ, ಆಯ-ವ್ಯಯದಲ್ಲಿ ಘೋಷಿಸಿರುವಂತೆ ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಇದರಿಂದಾಗಿ ಮಹಿಳೆಯರಲ್ಲಿ ಅಡಗಿರುವ ಸಾಮರ್ಥ್ಯ ವೃದ್ಧಿಗೊಳ್ಳುವುದಲ್ಲದೆ ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದರ ಜೊತೆಗೆ ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
BREAKING: ಮೇ.9ರಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ