ನವದೆಹಲಿ: ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವವು ಇಂದು ಉತ್ಸಾಹಭರಿತ ಪ್ರತಿಕ್ರಿಯೆಯೊಂದಿಗೆ ಪ್ರಾರಂಭವಾಯಿತು, ಇದು ಭಾರತದ ಸ್ವಾತಂತ್ರ್ಯಕ್ಕೆ ಮೂರು ದಿನಗಳ ರಾಷ್ಟ್ರವ್ಯಾಪಿ ಸಿನಿಮೀಯ ಗೌರವವಾಗಿದೆ. ಆಗಸ್ಟ್ 11–13, 2025 ರವರೆಗೆ ನಡೆಯುವ ಈ ಉತ್ಸವವನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಆಯೋಜಿಸಿದೆ.
ಈ ಉತ್ಸವವು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿದೆ, ಇದು ಪ್ರತಿಯೊಬ್ಬ ನಾಗರಿಕನಿಗೆ ರಾಷ್ಟ್ರೀಯ ಧ್ವಜದೊಂದಿಗಿನ ಭಾವನಾತ್ಮಕ ಬಾಂಧವ್ಯವನ್ನು ಗಾಢವಾಗಿಸಲು ಮತ್ತು ಏಕತೆ ಮತ್ತು ದೇಶಭಕ್ತಿಯ ಹೊಸ ಪ್ರಜ್ಞೆಯನ್ನು ತುಂಬಲು ಪ್ರಯತ್ನಿಸುತ್ತದೆ. ವಿಶೇಷವಾಗಿ ಆಯ್ಕೆ ಮಾಡಲಾದ ಚಲನಚಿತ್ರ ಪ್ರದರ್ಶನಗಳ ಮೂಲಕ, ಉತ್ಸವವು ಭಾರತ ಸ್ವಾತಂತ್ರ್ಯದ ಪ್ರಯಾಣವನ್ನು ಪ್ರೇಕ್ಷಕರಿಗೆ ನೆನಪಿಸುವ, ಅಸಂಖ್ಯಾತ ವೀರರ ತ್ಯಾಗಗಳನ್ನು ಆಚರಿಸುವ ಮತ್ತು ರಾಷ್ಟ್ರದ ಗುರುತನ್ನು ರೂಪಿಸಿದ ಕಥೆಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ದೆಹಲಿ ಎನ್ ಸಿ ಟಿ ಯ ಕಲೆ, ಸಂಸ್ಕೃತಿ ಮತ್ತು ಭಾಷಾ ಸಚಿವರಾದ ಕಪಿಲ್ ಮಿಶ್ರಾ ಮಾತನಾಡಿ, ಸಿನೆಮಾ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಅಮರಗೊಳಿಸುವ ಮತ್ತು ಪೀಳಿಗೆಗಳನ್ನು ಪ್ರೇರೇಪಿಸುವ ಶಕ್ತಿಯನ್ನು ಹೊಂದಿದೆ. ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವವು ಕೇವಲ ಸಿನೆಮಾದ ಆಚರಣೆಯಲ್ಲ, ಬದಲಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಪ್ರಯಾಣದ ಜ್ಞಾಪನೆಯಾಗಿದೆ ಎಂದು ಹೇಳಿದರು.
ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು, ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವವು ಸಿನಿಮಾ ಮಾಧ್ಯಮದ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಸಿನಿಮಾ ಒಂದು ದೃಶ್ಯ ಮಾಧ್ಯಮವಾಗಿರುವುದರಿಂದ ವೀಕ್ಷಕರ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಉತ್ಸವವು ಎಲ್ಲಾ ಭಾರತೀಯರಲ್ಲಿ ದೇಶಭಕ್ತಿಯ ಮನೋಭಾವವನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿದೆ ಎಂದು ಜಾಜು ಹೇಳಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಶ್ರಿಯಾ ಪಿಲ್ಗಾಂವ್ಕರ್ ಕೂಡ ಮಾತನಾಡಿದರು. ಈ ಉಪಕ್ರಮದ ಭಾಗವಾಗಿರುವುದು ತಮಗೆ ಗೌರವ ತಂದಿದೆ ಎಂದು ಅವರು ಹೇಳಿದರು. “ಈ ಚಲನಚಿತ್ರಗಳು ನಮ್ಮ ಜನರ ದೃಢತೆ ಮತ್ತು ಧೈರ್ಯವನ್ನು ನೆನಪಿಸುತ್ತವೆ ಮತ್ತು ನಾವು ಈ ಕಥೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವುದು ಮುಖ್ಯವಾಗಿದೆ” ಎಂದು ಅವರು ಹೇಳಿದರು.
ನಾಲ್ಕು ನಗರಗಳಲ್ಲಿ ಭವ್ಯ ಉದ್ಘಾಟನೆ
- ನವದೆಹಲಿ: ಎನ್ ಎಫ್ ಡಿ ಸಿ–ಸಿರಿ ಫೋರ್ಟ್ ಸಭಾಂಗಣದಲ್ಲಿ ಈ ಉತ್ಸವವನ್ನು ದೆಹಲಿ ಎನ್ ಸಿ ಟಿ ಯ ಕಲೆ, ಸಂಸ್ಕೃತಿ ಮತ್ತು ಭಾಷಾ ಸಚಿವ ಕಪಿಲ್ ಮಿಶ್ರಾ ಅವರು ಉದ್ಘಾಟಿಸಿದರು. ಅವರೊಂದಿಗೆ ಹೆಚ್ಚುವರಿ ಕಾರ್ಯದರ್ಶಿ (ಐ & ಬಿ) ಶ್ರೀ ಪ್ರಭಾತ್; ಪ್ರಧಾನ ಮಹಾನಿರ್ದೇಶಕ (ಡಿಪಿಡಿ) ಭೂಪೇಂದ್ರ ಕೈಂಥೋಲಾ; ಮತ್ತು ಪ್ರಧಾನ ಮಹಾನಿರ್ದೇಶಕ (ಮಾಧ್ಯಮ ಮತ್ತು ಸಂವಹನ) ಧೀರೇಂದ್ರ ಓಝಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
- ಮುಂಬೈ: ಎನ್ ಎಫ್ ಡಿ ಸಿ–ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾ (ಎನ್ ಎಂ ಐ ಸಿ) ಸಂಕೀರ್ಣದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಮತ್ತು ಖ್ಯಾತ ನಟಿ ಶ್ರಿಯಾ ಪಿಲ್ಗಾಂವ್ಕರ್ ಅವರು ಚಿತ್ರೋತ್ಸವವನ್ನು ಉದ್ಘಾಟಿಸಿದರು, ಶ್ರಿಯಾ ಪಿಲ್ಗಾಂವ್ಕರ್ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಿತು. ಹಿರಿಯ ಅಧಿಕಾರಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾ ಪ್ರೇಮಿಗಳು ಭಾಗವಹಿಸಿದ್ದರು, ಮೂರು ದಿನಗಳ ಸ್ಪೂರ್ತಿದಾಯಕ ಚಲನಚಿತ್ರ ಪ್ರದರ್ಶನಗಳಿಗೆ ಮೆರುಗು ನೀಡಿದರು.
- ಚೆನ್ನೈ: ಟ್ಯಾಗೋರ್ ಚಲನಚಿತ್ರ ಕೇಂದ್ರವು ಉದ್ಘಾಟನೆಯನ್ನು ಆಯೋಜಿಸಿತ್ತು. ಸಿನಿಮಾ ಮೂಲಕ ದೇಶಭಕ್ತಿಯ ಬಗ್ಗೆ ಒಳನೋಟವುಳ್ಳ ನಿರ್ದೇಶಕ ವಸಂತ್; ರಾಷ್ಟ್ರೀಯ ಹೆಮ್ಮೆಯಲ್ಲಿ ಕಲೆಯ ಪಾತ್ರವನ್ನು ಎತ್ತಿ ತೋರಿಸಿದ ನೃತ್ಯ ಸಂಯೋಜಕಿ ಕಲಾ ಮಾಸ್ಟರ್; ಬೆಂಬಲ ಮತ್ತು ಪ್ರೋತ್ಸಾಹ ನೀಡುವ ತಮಿಳು ವಾಣಿಜ್ಯ ಮಂಡಳಿಯ ಅಧ್ಯಕ್ಕ್ಷ ಶ್ರೀ ಚೋಳ ನಾಚಿಯಾರ್; ತಮ್ಮ ಸೌಜನ್ಯಯುತ ಉಪಸ್ಥಿತಿ ಮತ್ತು ದೇಶಭಕ್ತಿಯ ಪ್ರತಿಬಿಂಬವಾದ ನಟಿ ನಮಿತಾ; ಸಂಸ್ಕೃತಿ, ಸಂಪ್ರದಾಯ ಮತ್ತು ಯುವ ಪ್ರತಿಭೆಗಳಿಗೆ ಸೇತುವೆಯಾದ ತಮಿಳುನಾಡು ಸಂಗೀತ ಕಾಲೇಜಿನ ಪ್ರಾಂಶುಪಾಲ ಡಾ. ಎವಿಎಸ್ ಶಿವಕುಮಾರ್; ಮತ್ತು ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀ ವೀರಾ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
- ಪುಣೆ: ಪ್ರೇಕ್ಷಕರು ಎನ್ ಎಫ್ ಡಿ ಸಿ–ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (NFAI) ದಲ್ಲಿ ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ಉದ್ಘಾಟನಾ ಸಮಾರಂಭಗಳ ನೇರ ಪ್ರಸಾರವನ್ನು ಆನಂದಿಸಿದ ನಂತರ ಪುಣೆಯಲ್ಲಿ ಚಲನಚಿತ್ರ ಪ್ರದರ್ಶನಗಳು ಪ್ರಾರಂಭವಾದವು. ಇದು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಗೆ ಏಕತೆ ಮತ್ತು ಹಂಚಿಕೆಯ ಆಚರಣೆಯ ಮನೋಭಾವವನ್ನು ತಂದಿತು.
ವೈವಿಧ್ಯಮಯ ಮತ್ತು ಸ್ಪೂರ್ತಿದಾಯಕ ಚಲನಚಿತ್ರಗಳು
ವೈವಿಧ್ಯಮಯ ಚಲನಚಿತ್ರ ಶ್ರೇಣಿಯು ಹೆಸರಾಂತ ದೇಶಭಕ್ತಿಯ ಚಲನಚಿತ್ರಗಳನ್ನು ಒಳಗೊಂಡಿದೆ, ಅವುಗಳೆಂದರೆ:
- ಶಹೀದ್ (1965) – ಶಹೀದ್ ಭಗತ್ ಸಿಂಗ್ ಮತ್ತು ಅವರ ಅಪ್ರತಿಮ ತ್ಯಾಗದ ರೋಮಾಂಚಕಾರಿ ಕಥೆ.
- ಸ್ವಾತಂತ್ರ್ಯ ವೀರ ಸಾವರ್ಕರ್ (2024) – ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಜೀವನ ಮತ್ತು ಸಿದ್ಧಾಂತವನ್ನು ವಿವರಿಸುತ್ತದೆ.
- ಉರಿ: ದಿ ಸರ್ಜಿಕಲ್ ಸ್ಟ್ರೈಕ್ (2019) – 2016 ರ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಕುರಿತ ಚಿತ್ರ
- ಆರ್ ಆರ್ ಆರ್ (2022) – ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಿತವಾದ ಆಕ್ಷನ್ ಡ್ರಾಮಾ.
- ತನ್ಹಾಜಿ (2020) – ಮರಾಠಾ ಯೋಧ ತನ್ಹಾಜಿ ಮಲುಸಾರೆ ಅವರ ಶೌರ್ಯದ ಕಥೆ.
ಇತರ ಗಮನಾರ್ಹ ಪ್ರದರ್ಶನಗಳು
-
- ಮೇಜರ್ (2022)– 26/11 ಮುಂಬೈ ದಾಳಿಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಶೌರ್ಯಕ್ಕೆ ಗೌರವ.
- ನೇತಾಜಿ ಸುಭಾಷ್ ಚಂದ್ರ ಬೋಸ್ – ದಾರ್ಶನಿಕ ರಾಷ್ಟ್ರೀಯವಾದಿ ನಾಯಕನ ಪರಂಪರೆಯನ್ನು ಸೆರೆಹಿಡಿಯುವ ಕಿರು ಸಾಕ್ಷ್ಯಚಿತ್ರ.
- ವೀರಪಾಂಡ್ಯ ಕಟ್ಟಬೊಮ್ಮನ್ (1959) – ದಕ್ಷಿಣ ಭಾರತದ ದಂತಕಥೆ ಸ್ವಾತಂತ್ರ್ಯ ಹೋರಾಟಗಾರನ ಕುರಿತಾದ ತಮಿಳು ಕ್ಲಾಸಿಕ್.
- ಕ್ರಾಂತಿ (1981) – ವಸಾಹತುಶಾಹಿ ಆಡಳಿತದ ವಿರುದ್ಧದ ದಂಗೆಯ ಭವ್ಯ ಕಥೆ.
- ಹಕೀಕತ್ (1964) – 1962 ರ ಇಂಡೋ-ಚೀನಾ ಸಂಘರ್ಷದಿಂದ ಪ್ರೇರಿತವಾದ ಒಂದು ಹೃದಯಸ್ಪರ್ಶಿ ಯುದ್ಧ ಚಿತ್ರ.
- ಪರಾಸಕ್ತಿ (1952) – ಬಲವಾದ ಸಾಮಾಜಿಕ ಮತ್ತು ರಾಷ್ಟ್ರೀಯತಾವಾದಿ ವಿಷಯಗಳನ್ನು ಹೊಂದಿರುವ ಒಂದು ಮಹತ್ವದ ತಮಿಳು ಚಲನಚಿತ್ರ.
- ಸಾತ್ ಹಿಂದೂಸ್ತಾನಿ (1969) – ಗೋವಾದ ವಿಮೋಚನೆಗಾಗಿ ಹೋರಾಡುವ ಏಳು ಭಾರತೀಯರ ಕಥೆ.
ಇದರ ಜೊತೆಗೆ, ಉತ್ಸವವು ಐತಿಹಾಸಿಕ ಸಂದರ್ಭವನ್ನು ಒದಗಿಸುವ ಮತ್ತು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಶೈಕ್ಷಣಿಕ ಸಾಕ್ಷ್ಯ ಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ:
-
- ಅವರ್ ಫ್ಲಾಗ್ – ತಿರಂಗಾದ ಸಾಂಕೇತಿಕತೆ ಮತ್ತು ಇತಿಹಾಸವನ್ನು ಅನ್ವೇಷಿಸುವುದು.
- ಲೋಕಮಾನ್ಯ ತಿಲಕ್ – ಬಾಲಗಂಗಾಧರ ತಿಲಕ್ ಅವರ ಜೀವನ ಮತ್ತು ರಾಜಕೀಯ ಜಾಗೃತಿಯನ್ನು ವಿವರಿಸುವುದು.
- ತಿಲಕ್ – ತಿಲಕ್ ಅವರ ರಾಷ್ಟ್ರೀಯತಾವಾದಿ ದೃಷ್ಟಿಕೋನದ ನಿಕಟ ಚಿತ್ರಣ.
- ಶಹಾದತ್ – ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗದ ಕಾರ್ಯಗಳನ್ನು ಎತ್ತಿ ತೋರಿಸುತ್ತದೆ.
ಎನ್ ಎಫ್ ಎ ಐ ಮರುಸ್ಥಾಪಿಸಿರುವ ಕ್ಲಾಸಿಕ್ ಗಳು – ಭೂತಕಾಲಕ್ಕೆ ಜೀವ ತುಂಬಿವೆ
ಚಲನಚಿತ್ರೋತ್ಸವದಲ್ಲಿ ನಾಲ್ಕು ಹೆಗ್ಗುರುತು ಚಲನಚಿತ್ರಗಳಾದ – ಕ್ರಾಂತಿ (1981), ಹಕೀಕತ್ (1964), ಸಾತ್ ಹಿಂದೂಸ್ತಾನಿ (1969) ಮತ್ತು ಶಹೀದ್ (1965) – ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯದ (ಎನ್ ಎಫ್ ಎ ಐ) ಶ್ರಮದಾಯಕ ಸಂರಕ್ಷಣಾ ಪ್ರಯತ್ನಗಳಿಂದಾಗಿ ಅವುಗಳನ್ನು ಡಿಜಿಟಲ್ ಮರುಸ್ಥಾಪಿತ ಆವೃತ್ತಿಗಳಲ್ಲಿ ಪ್ರಸ್ತುತಪಡಿಸಲಾಗಿದೆ.
-
- ಕ್ರಾಂತಿ (1981) – 19 ನೇ ಶತಮಾನದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಭಾರತದ ಹೋರಾಟದ ಒಂದು ಸಮಗ್ರ ಕಥೆ, ಮನೋಜ್ ಕುಮಾರ್, ದಿಲೀಪ್ ಕುಮಾರ್ ಮತ್ತು ಹೇಮಾ ಮಾಲಿನಿಯವರ ಪಾತ್ರವರ್ಗ.
- ಹಕೀಕತ್ (1964) – ಚೇತನ್ ಆನಂದ್ ನಿರ್ದೇಶಿಸಿದ ಈ ಯುದ್ಧ ಚಿತ್ರವು 1962 ರ ಇಂಡೋ-ಚೀನಾ ಸಂಘರ್ಷದ ಭಾವನಾತ್ಮಕ ಮತ್ತು ಕಾರ್ಯತಂತ್ರದ ಸವಾಲುಗಳನ್ನು ಸೆರೆಹಿಡಿಯುತ್ತದೆ.
- ಸಾತ್ ಹಿಂದೂಸ್ತಾನಿ (1969) – ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಏಳು ಭಾರತೀಯರು, ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸಲು ಒಂದಾಗುವ ಉತ್ಸಾಹಭರಿತ ಕಥೆ – ಇದು ಅಮಿತಾಬ್ ಬಚ್ಚನ್ ಅವರ ಚೊಚ್ಚಲ ಚಿತ್ರ ಎಂಬುದು ಗಮನಾರ್ಹವಾಗಿದೆ.
- ಶಹೀದ್ (1965) – ಭಗತ್ ಸಿಂಗ್ ಅವರ ಕ್ರಾಂತಿಕಾರಿ ಹೋರಾಟ ಮತ್ತು ತ್ಯಾಗದ ಮನೋಜ್ ಕುಮಾರ್ ಅವರ ಪ್ರಬಲ ಚಿತ್ರಣ.
ಮರುಸ್ಥಾಪನೆಯಲ್ಲಿ ಎನ್ ಎಫ್ ಎ ಐ ಪಾತ್ರ:
ಎನ್ ಎಫ್ ಎ ಐ ನ ಒಂದು ವಿಭಾಗವಾದ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ, ಚಲನಚಿತ್ರ ಸಂರಕ್ಷಣೆ ಮತ್ತು ಮರುಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ, ಭಾರತದ ಸಿನಿಮಾ ಪರಂಪರೆಯು ಕಾಲಕ್ರಮೇಣ ಕಳೆದುಹೋಗದಂತೆ ನೋಡಿಕೊಳ್ಳುತ್ತದೆ. ಸುಧಾರಿತ ಡಿಜಿಟಲೀಕರಣ ತಂತ್ರಗಳು, ಬಣ್ಣ ಶ್ರೇಣೀಕರಣ ಮತ್ತು ಧ್ವನಿ ವರ್ಧನೆಯ ಮೂಲಕ, ಎನ್ ಎಫ್ ಎ ಐ ದುರ್ಬಲವಾದ ಸೆಲ್ಯುಲಾಯ್ಡ್ ಮುದ್ರಣಗಳನ್ನು ಬಹುತೇಕ ಮೂಲ ಗುಣಮಟ್ಟಕ್ಕೆ ಮರುಸ್ಥಾಪಿಸುತ್ತದೆ, ಹೊಸ ಪ್ರೇಕ್ಷಕರು ಈ ಕ್ಲಾಸಿಕ್ ಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವದಲ್ಲಿ ಈ ಮರುಸ್ಥಾಪಿಸಲಾದ ಆವೃತ್ತಿಗಳನ್ನು ಸೇರಿಸುವುದು ಚಲನಚಿತ್ರ ನಿರ್ಮಾಪಕರಿಗೆ ಗೌರವ ಮತ್ತು ಭಾರತದ ಚಲನಚಿತ್ರ ಪರಂಪರೆಯನ್ನು ಕಾಪಾಡುವ ಎನ್ ಎಫ್ ಎ ಐ ನ ಬದ್ಧತೆಯ ಪುನರುಚ್ಚರಣೆಯಾಗಿದೆ.