ಬೆಂಗಳೂರು : ರಾಜ್ಯಕ್ಕೆ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ದೊಡ್ಡಬಳ್ಳಾಪುರ ಬಳಿ 25,000 ಕೋಟಿ ರೂ. ಹೂಡಿಕೆ ಮೂಲಕ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, ಇದರ ಅಡಿಯಲ್ಲಿ 40,000 ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತೈವಾನ್ ಮೂಲದ ಆಪಲ್ ಫೋನ್ ಕಂಪೆನಿ ಫಾಕ್ಸ್ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು ಅವರ ಜೊತೆ ಸಮಾಲೋಚನೆ ನಡೆಸಿ, ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು – ಸುವ್ಯವಸ್ಥೆ ಉತ್ತಮವಾಗಿದೆ, ಫಾಕ್ಸ್ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂಬ ಭರವಸೆ ನೀಡಿದರು.
ಯಂಗ್ ಲಿಯು ಮಾತನಾಡಿ, ಕರ್ನಾಟಕದಲ್ಲಿ ಸದ್ಯದಲ್ಲಿಯೇ ಘಟಕ ಕಾರ್ಯಾಚರಣೆ ಆರಂಭಿಸಲಿದೆ. ಚೀನಾದ ನಂತರ ಎರಡನೇ ಅತ್ಯಂತ ಬೃಹತ್ ಘಟಕ ಇದಾಗಿದ್ದು, 40,000 ಮಧ್ಯಮ ಸ್ತರದ ವಿದ್ಯಾವಂತರಿಗೆ ಉದ್ಯೋಗಾವಕಾಶ ಸಿಗಲಿದೆ. ಮುಂದಿನ ದಿನಗಳಲ್ಲಿ ಹೂಡಿಕೆ ಮತ್ತಷ್ಟು ಹೆಚ್ಚಿಸಲಾಗುವುದು. ಉದ್ಯೋಗಿಗಳಿಗೆ ಗುಣಮಟ್ಟದ ಮನರಂಜನೆ, ಜಿಮ್, ವಸತಿ ಸೌಲಭ್ಯ, ಆಹಾರ ಸೇರಿ ಅನೇಕ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಫಾಕ್ಸ್ ಕಾನ್ ಅಧ್ಯಕ್ಷರೊಂದಿಗೆ ಸಮಾಲೋಚನೆ
ಆಪಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಯಲ್ಲಿ ಜಾಗತಿಕ ಮನ್ನಣೆಗಳಿಸಿರುವ ಫಾಕ್ಸ್ ಕಾನ್ ನ ಸಿಇಒ ಮತ್ತು ಅಧ್ಯಕ್ಷರಾದ ಶ್ರೀ ಯಂಗ್ ಲಿಯು ಅವರನ್ನು ಮುಖ್ಯಮಂತ್ರಿ ಶ್ರೀ @siddaramaiah ಅವರೊಂದಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದೆವು.
ನವೋದ್ಯಮಗಳು, ಹೈಟೆಕ್ ಉದ್ಯಮಗಳು… pic.twitter.com/lIO4zj1Gff
— M B Patil (@MBPatil) August 16, 2024