ಬೆಳಗಾವಿ : ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ದುರುಪಯೋಗವಾಗುತ್ತಿದ್ದು, ಸುಮಾರು 24.55 ಲಕ್ಷ ಅನುಮಾನಾಸ್ಪದ ವ್ಯಕ್ತಿಗಳು ಫಲಾನುಭವಿಗಳಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ 32,000 ರು. ನಿಗದಿಗೊಳಿಸಲಾಗಿದೆ. ನಿಖರ ಆದಾಯ ಅಂದಾಜು ಮಾಡುವುದೇ ಸವಾಲಾಗಿದೆ. ಉದಾಹರಣೆಗೆ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ವಾರ್ಷಿಕ 24 ಸಾವಿರ ರು. ಹೋಗುತ್ತದೆ. ಬೇರೆ ಸವಲತ್ತೂ ಸಿಗುತ್ತಿದೆ. ಕೆಳ ಹಂತ ಅಧಿಕಾರಿಗಳು ಕುಳಿತಲ್ಲೇ ತಮಗೆ ತೋಚಿದಷ್ಟು ಆದಾಯ ನಿಗದಿಪಡಿಸಿ ಆದಾಯ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಸಂದರ್ಭದಲ್ಲಿ ನಿಗದಿಪಡಿಸಿದ ವಯೋಮಿತಿಗೂ ಕಡಿಮೆ ವಯಸ್ಸಿನವರು ಸೌಲಭ್ಯ ಪಡೆಯುತ್ತಿದ್ದಾರೆ. ಆಧಾರ್ ಕಾರ್ಡ್ ಪ್ರಕಾರ 60 ವರ್ಷ ಆಗಿರುವುದಿಲ್ಲ. ಸುಳ್ಳು ದಾಖಲೆ ಕೊಟ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಚ್‌ಎಂಆರ್‌ಎಸ್‌ನಲ್ಲಿ ಮಾಹಿತಿ ಇರುವ ಸರ್ಕಾರಿ ನೌಕರರು ಕೂಡಾ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಫಲಾನುಭವಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








