ಜೈಪುರ:ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿ ಬಸ್ ಹೆದ್ದಾರಿಯ ಬದಿಯಿಂದ ಕಣಿವೆಗೆ ಉರುಳಿದ ಪರಿಣಾಮ 8 ವರ್ಷದ ಬಾಲಕ ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ.
ಅಹ್ಮದಾಬಾದ್ನ ವಿಸ್ತೃತ ಕುಟುಂಬದ 44 ಸದಸ್ಯರನ್ನು ಹೊತ್ತ ಬಸ್ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾ ಕುಂಭದಿಂದ ಹಿಂದಿರುಗುತ್ತಿತ್ತು ಎಂದು ರಾಜಸ್ಥಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ೧೨.೧೫ ಕ್ಕೆ ಈ ಘಟನೆ ನಡೆದಿದೆ.
ಚಾರ್ಭುಜಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರೀತಿ ರತ್ನು ಮಾತನಾಡಿ, “ಈ ಘಟನೆಯು ‘ದೇಸುರಿ ಕಿ ನಾಲ್’ ನ ಘಾಟಿ (ಕಣಿವೆ) ಯಲ್ಲಿ ನಡೆದಿದೆ. ಬಸ್ ರಸ್ತೆಯಿಂದ ಬೀಳಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಅಪಘಾತದಲ್ಲಿ ಕನಿಷ್ಠ 21 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು 8 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ.” ಎಂದರು.
ಅರಾವಳಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ಕಣಿವೆಯು ಪಾಲಿ ಜಿಲ್ಲೆಯ ದೇಸುರಿ ತಾಲ್ಲೂಕಿನ ದೇಸುರಿ ಗ್ರಾಮ ಮತ್ತು ರಾಜ್ಸಮಂದ್ ಜಿಲ್ಲೆಯ ಕುಂಭಲ್ಗಡ್ ತಾಲ್ಲೂಕಿನ ಚಾರ್ಭುಜಾ ಗ್ರಾಮದ ನಡುವೆ ವಿಸ್ತರಿಸಿದೆ.
ಈ ರಸ್ತೆ ಗುಜರಾತ್ ವರೆಗೆ ವಿಸ್ತರಿಸಿದೆ ಮತ್ತು ಈ ಹಿಂದೆ ಹಲವಾರು ಅಪಘಾತಗಳನ್ನು ಕಂಡಿದೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ.
ಕುಟುಂಬ ಸದಸ್ಯರು ಬರುವ ಮೊದಲು ಪ್ರಯಾಣಿಕರಿಗೆ ಉದಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.