ಬೆಂಗಳೂರು: ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಅಗ್ನಿವೀರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಅಗ್ನಿಪಥ ಯೋಜನೆಯಡಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ, 2027ರಲ್ಲಿ ನಿವೃತ್ತರಾಗಲಿರುವ ಅಗ್ನಿವೀರರಿಗೆ ಈ ಮೀಸಲಾತಿ ಸೌಲಭ್ಯ ದೊರೆಯಲಿದೆ.
ಯಾವ ಹುದ್ದೆಗಳು?
ಅರಣ್ಯ ರಕ್ಷಕರು, ಗಣಿಗಾರಿಕೆ ರಕ್ಷಕರು, ಪೊಲೀಸ್ ಕಾನ್ಸ್ಟೇಬಲ್‌ಗಳು, ಅಗ್ನಿಶಾಮಕ ಸಿಬ್ಬಂದಿ, ಅಶ್ವಾರೋಹಿ ಪೊಲೀಸರು, ಜೈಲು ವಾರ್ಡನ್‌ಗಳು, ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯಂತಹ ಪ್ರಮುಖ ಇಲಾಖೆಗಳಲ್ಲಿ ಈ ಮೀಸಲಾತಿ ಕಲ್ಪಿಸಲು ಸೂಚಿಸಲಾಗಿದೆ.ಕೇಂದ್ರದ ಈ ಸೂಚನೆಯನ್ನು ಪುರಸ್ಕರಿಸಿದ ದೇಶದ ಮೊದಲ ರಾಜ್ಯವಾಗಿ ಹಿಮಾಚಲ ಪ್ರದೇಶ ಹೊರಹೊಮ್ಮಿದೆ.ಹಿಮಾಚಲ ಪ್ರದೇಶದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಕೂಡ ಅಗ್ನಿವೀರರಿಗೆ ಶೇ. 20ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.
ಅಗ್ನಿವೀರರ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಇತರ ರಾಜ್ಯಗಳೂ ಈ ನೀತಿಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ.








