ಬೆಂಗಳೂರು: ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಲಿಮಿಟೆಡ್‌ನ (ಟಿಕೆಎಂಎಲ್) ಇನೊವಾ ಹೈಕ್ರಾಸ್ ಕಾರಿನ ಬೇಡಿಕೆ ಪೂರೈಸಲು ಅಗತ್ಯವಾದ ಬಿಡಿಭಾಗಗಳನ್ನು ತಯಾರಿಸಲು ಬಿಡದಿಯಲ್ಲಿ ₹450 ಕೋಟಿ ವೆಚ್ಚದಲ್ಲಿ ಟೊಯೊಟೆಟ್ಸು ಇಂಡಿಯಾ ಆಟೊ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಘಟಕ ಸ್ಥಾಪಿಸಲು ಶನಿವಾರ ಇಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಒಪ್ಪಿಗೆ ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ₹2,280.52 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 20 ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಿಂದ ರಾಜ್ಯದಲ್ಲಿ 3,457 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
ʼಸಮಿತಿಯು ಅನುಮೋದಿಸಿದ ಯೋಜನೆಗಳಲ್ಲಿ ಮುಂಬೈನ ಐಎಲ್‌ವಿ ಸೌತ್ ವೇರ್‌ಹೌಸಿಂಗ್ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ₹423 ಕೋಟಿ ಮೊತ್ತದ ಕೈಗಾರಿಕಾ ಪಾರ್ಕ್, ಬೆಳಗಾವಿಯ ಮೃಣಾಲ್ ಷುಗರ್ಸ್ ಲಿಮಿಟೆಡ್ ಧಾರವಾಡ ಜಿಲ್ಲೆಯಲ್ಲಿ ₹386.86 ಕೋಟಿ ವೆಚ್ಚದ ಸಕ್ಕರೆ ಕಾರ್ಖಾನೆ ಸ್ಥಾಪನೆ, ಅಯೊಮಾ ಆಟೊಮೋಟಿವ್ ಫಾಸ್ಟನರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ₹ 210 ಕೋಟಿ ಮೊತ್ತದ ವಾಹನ ಬಿಡಿಭಾಗ ತಯಾರಿಕಾ ಘಟಕಗಳ ಸ್ಥಾಪನೆಯು ಪ್ರಮುಖವಾಗಿವೆ. ವೈಮಾಂತರಿಕ್ಷ ಜೋಡಣಾ ಘಟಕ, ಹಾಲು ಸಂಸ್ಕರಣಾ ಘಟಕಗಳೂ ಒಪ್ಪಿಗೆ ಪಡೆದ ಯೋಜನೆಗಳಲ್ಲಿ ಸೇರಿವೆ.
ರಾಮನಗರ, ಕೋಲಾರ, ಬೆಳಗಾವಿ, ತುಮಕೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲಿವೆʼ ಎಂದು ಸಚಿವ ಪಾಟೀಲ ಅವರು ಮಾಹಿತಿ ನೀಡಿದ್ದಾರೆ.
₹50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 6 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹2025.71 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 2,440 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
₹15 ಕೋಟಿಗಳಿಂದ ₹50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 13 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹ 214.81 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 1017 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ ಎಂದು ವಿವರಿಸಿದರು.
ಹೆಚ್ಚುವರಿ ಬಂಡವಾಳ ಹೂಡಿಕೆಯ 1 ಯೋಜನೆಗೆ ಸಭೆಯು ಅನುಮೋದಿಸಿದ್ದು ಇದರಿಂದ ₹40 ಕೋಟಿ ಬಂಡವಾಳ ಹೂಡಿಕೆ ಆಗಲಿದೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಐಟಿ-ಬಿಟಿ ಇಲಾಖೆಯ ನಿರ್ದೇಶಕ ದರ್ಶನ್ ಎಚ್. ವಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.
ಪ್ರಮುಖ ಯೋಜನೆಗಳ ವಿವರಗಳು ಹೀಗಿವೆ
ಕಂಪನಿ ಯೋಜನಾ ಸ್ಥಳ ಉದ್ದಿಮೆ / ಚಟುವಟಿಕೆ ಬಂಡವಾಳ ಹೂಡಿಕೆ (₹ ಕೋಟಿಗಳಲ್ಲಿ) ಉದ್ಯೋಗ ಅವಕಾಶ
ಟೊಯೊಟೆಟ್ಸು ಇಂಡಿಯಾ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ರಾಮನಗರ ಬಿಡದಿ, ರಾಮನಗರ ವಾಹನ ಬಿಡಿಭಾಗ ತಯಾರಿಕಾ ಘಟಕ 450 650
ಐಎಲ್‌ವಿ ಸೌತ್ ವೇರ್‌ಹೌಸಿಂಗ್ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್, ಮುಂಬೈ ಜಕ್ಕಸಂದ್ರ, ಮಾಲೂರು ತಾಲೂಕು ಕೋಲಾರ ಜಿಲ್ಲೆ ಕೈಗಾರಿಕಾ ಪಾರ್ಕ್ 423 500
ಮೃಣಾಲ್ ಷುಗರ್ಸ್ ಲಿಮಿಟೆಡ್, ಬೆಳಗಾವಿ ಯಾದವಾಡ, ಧಾರವಾಡ ಜಿಲ್ಲೆ ಸಕ್ಕರೆ ಕಾರ್ಖಾನೆ 386.86 255
ಅಯೊಯಮಾ ಆಟೊಮೋಟಿವ್ ಫಾಸ್ಟನರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಬೆಂಗಳೂರು ವಸಂತನರಸಾಪುರ, ತುಮಕೂರು ಜಿಲ್ಲೆ ವಾಹನ ಬಿಡಿಭಾಗ ತಯಾರಿಕಾ ಘಟಕ 210 190
ಡಿಎಫ್‌ಎಂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ವಸಂತನರಸಾಪುರ, ತುಮಕೂರು ಜಿಲ್ಲೆ ವೈಮಾಂತರಿಕ್ಷ ಜೋಡಣಾ ಘಟಕ 65.85 395
ಗೋವಿಂದ ಮಿಲ್ಕ್ ಆ್ಯಂಡ್ ಮಿಲ್ಕ್ ಪ್ರಾಡಕ್ಟ್ಸ್‌ಪ್ರೈವೇಟ್ ಲಿಮಿಟೆಡ್, ಮಹಾರಾಷ್ಟ್ರ ಮಮ್ಮಿಗಟ್ಟಿ, ಧಾರವಾಡ ಜಿಲ್ಲೆ ಹಾಲು ಸಂಸ್ಕರಣಾ ಘಟಕ 25 50
ಸಿಸಿಎಲ್ ಆಪ್ಟೊಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಮುಂಬೈ ಕಣಗಲ, ಬೆಳಗಾವಿ ಜಿಲ್ಲೆ ಫೈಬರ್ ಆಪ್ಟಿಕ್ಸ್ ಉತ್ಪನ್ನ 22 40
ಅಲ್ ಸಫಾ ಆಗ್ರೊ ಇಂಡಸ್ಟ್ರೀಸ್, ಬೀದರ್ ಕಪ್ನೂರ, ಕಲಬುರಗಿ ಜಿಲ್ಲೆ ಖಾದ್ಯೇತರ ತೈಲ ಹಿಂಡಿ ತಯಾರಿಕೆ 19 25
‘ಮಾಸ್ಟರ್ ಕಾರ್ಡ್’ ಉದ್ಯೋಗಿಗಳಿಗೆ ಬಿಗ್ ಶಾಕ್: ಶೇ.3ರಷ್ಟು ಉದ್ಯೋಗಿಗಳನ್ನು ವಜಾ | Mastercard Layoffs
ಫಾಕ್ಸ್ ಕಾನ್ ನಿಂದ ರಾಜ್ಯದಲ್ಲಿ 2ನೇ ಬೃಹತ್ iPhone ತಯಾರಿಕಾ ಘಟಕ ಆರಂಭ: 40 ಸಾವಿರ ಉದ್ಯೋಗ ಸೃಷ್ಠಿ