ಬೆಳಗಾವಿ : ರಾಜ್ಯ ಸರ್ಕಾರದ 43 ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಉಳಿದಿವೆ. ಇವುಗಳಲ್ಲಿ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಅನುಮತಿಸಿದೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕೇಳಿದಂತ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರಲ್ಲಿ ಆರ್ಥಿಕ ಇಲಾಖೆಯು ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ತಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದಿಸಿದೆ ಎಂದಿದ್ದಾರೆ.
ಇವುಗಳಲ್ಲಿ 16,017 ಹುದ್ದೆಗಳು ಎ ದರ್ಜೆಯ ಹುದ್ದೆಗಳಾಗಿವೆ. 16,734 ಬಿ ದರ್ಜೆಯ ಹುದ್ದೆಗಳು, 1,66,021 ಸಿ ದರ್ಜೆಯ ಹುದ್ದೆಗಳು, 77,614 ಡಿ ದರ್ಜೆಯ ಹುದ್ದೆಗಳು ಖಾಲಿ ಉಳಿದಿವೆ.
ಶಿಕ್ಷಣ ಇಲಾಖೆಯಲ್ಲಿ 70727 ಹುದ್ದೆಗಳು ಖಾಲಿ ಇವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,572 ಹುದ್ದೆಗಳು ಖಾಲಿ ಇದ್ದು, ಒಳಾಡಳಿತ ಇಲಾಖೆಯಲ್ಲಿ 28,188, ಕಂದಾಯ ಇಲಾಖೆಯಲ್ಲಿ 10,867 ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,504 ಹುದ್ದೆಗಳು ಖಾಲಿ ಉಳಿದಿದೆ.
ಆರ್ಥಿಕ ಇಲಾಖೆಯಿಂದ ವಿವಿಧ ಇಲಾಖೆಯಲ್ಲಿ ಖಾಲಿ ಇರುವಂತ 24,300 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಆರ್ಥಿಕ ಇಲಾಖೆಯು ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಿರುತ್ತದೆ. ರಾಜ್ಯದಲ್ಲಿ ಅನೇಕ ವರ್ಷಗಳಿಂದ ನೇಮಕಾತಿಯಾಗದೇ ನಿರುದ್ಯೋಗಿ ಆಗಿರುವ ಬಿಪಿಎಡ್ ಪದವೀಧರರಿಗೂ ಬಿಎಡ್ ಪದವೀಧರರಂತೆ ವಾರ್ಡನ್ ಅಥವಾ ಪರ್ಯಾಯ ಹುದ್ದೆಗೆ ನೇಮಕಾತಿ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.









