ಬೆಂಗಳೂರು : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆ ಉಪ ವಿಭಾಗಾಧಿಕಾರಿಗಳ (ಎಸಿ) ವ್ಯಾಪ್ತಿಯಲ್ಲಿ ನ್ಯಾಯಾಲಯ ಪ್ರಕರಣಗಳು ಅತಿಹೆಚ್ಚು ಸಂಖ್ಯೆಯಲ್ಲಿ ಬಾಕಿ ಇದ್ದು, ಶೀಘ್ರ ವಿಲೇವಾರಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಬುಧವಾರ ವಿಕಾಸಸೌಧದಲ್ಲಿ ನಡೆದ ಉಪ ವಿಭಾಗಾಧಿಕಾರಿಗಳ ಕೋರ್ಟ್ ಕೇಸ್ ಸಂಬಂಧಿಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಅವರು, “ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರಾಜ್ಯಾದ್ಯಂತ ಒಟ್ಟು 19,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಸುಮಾರು 13,000 ಪ್ರಕರಣಗಳು ಬೆಂ.ನಗರ, ಬೆಂ.ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲೇ ಬಾಕಿ ಇವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೇ ಹೆಚ್ಚು ಸಂಖ್ಯೆಯಲ್ಲಿ ನ್ಯಾಯಾಲಯ ಪ್ರಕರಣಗಳು ಬಾಕಿ ಇದ್ದರೆ, ರಾಜ್ಯದ ಇತರ ಭಾಗಗಳ ಅಧಿಕಾರಿಗಳೊಂದಿಗೆ ಏನೆಂದು ಸಭೆ ನಡೆಸಲಿ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೇವಲ 6,000 ಪ್ರಕರಣಗಳು ಮಾತ್ರ ಬಾಕಿ ಇದ್ದು, ಈ ನಾಲ್ಕು ಜಿಲ್ಲೆಗಳ ಅಧಿಕಾರಿಗಳು ತಮ್ಮ ಕೆಲಸಕ್ಕೆ ವೇಗ ನೀಡಿದರೆ ಮಾತ್ರ ರಾಜ್ಯಮಟ್ಟದಲ್ಲಿ ಪ್ರಶ್ನಿಸಲು ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಾಲ್ಕೂ ಜಿಲ್ಲೆಗಳ ಪ್ರಗತಿಯ ವಿವರಗಳನ್ನು ಪರಿಶೀಲಿಸಿದ ಸಚಿವರು, “ಕಳೆದ ಅಕ್ಟೋಬರ್ನಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ 15,364 ಪ್ರಕರಣಗಳು ಬಾಕಿ ಇದ್ದದ್ದು ಈಗ 13,610ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಆದರೂ, ಮಿಸ್ಸಿಂಗ್ ರೆಕಾರ್ಡ್ಗಳು, ಆರ್ಸಿಸಿಎಂಎಸ್ನಲ್ಲಿ ವಿಲೇವಾರಿ ಆಗದ ಪ್ರಕರಣಗಳು ಹಾಗೂ ಅನರ್ಹ (ಅನ್ಫಿಟ್) ಪ್ರಕರಣಗಳು ಹಾಗೂ ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಜನವರಿ ಅಂತ್ಯದೊಳಗೆ ಮುಗಿಸಿದರೆ ಈ ಸಂಖ್ಯೆ ಮತ್ತಷ್ಟು ಸುಧಾರಿಸುತ್ತದೆ” ಎಂದು ಸಲಹೆ ನೀಡಿದರು.
“ಉಪ ವಿಭಾಗಾಧಿಕಾರಿಗಳಿಗೆ ತಮ್ಮ ಮುಂದಿರುವ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಅರಿವಿದೆ. ಹೀಗಾಗಿ ಸುಲಭವಾಗಿ ಇತ್ಯರ್ಥಗೊಳಿಸಬಹುದಾದ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಿ. ಮಾರ್ಚ್ ಅಂತ್ಯದೊಳಗೆ ಆರು ತಿಂಗಳು ಮೀರಿದ ಎಲ್ಲಾ ಕೇಸ್ಗಳನ್ನು ಕಡ್ಡಾಯವಾಗಿ ಮುಗಿಸಿ. ಫೆಬ್ರವರಿ ಮೊದಲ ವಾರದಲ್ಲಿ ಈ ನಾಲ್ಕು ಜಿಲ್ಲೆಗಳ ಮತ್ತೊಂದು ಸಭೆ ನಡೆಸಿ, ಅದರ ಆಧಾರದಲ್ಲಿ ರಾಜ್ಯಾದ್ಯಂತದ ಎಲ್ಲಾ ಎಸಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು” ಎಂದು ತಿಳಿಸಿದರು.
ಈ ಜಿಲ್ಲೆಗಳಲ್ಲಿ ಸುಧಾರಣೆ ಕಾಣದಿದ್ದರೆ, ಇಡೀ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಸಭೆ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರತಿ ಶನಿವಾರ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಮೇಲ್ವಿಚಾರಣೆ ನಡೆಸುವಂತೆ ನೂತನ ಕಂದಾಯ ಆಯುಕ್ತರಾದ ಶ್ರೀಮತಿ ಮೀನಾ ನಾಗರಾಜ್ ಸಿ.ಎನ್. ಅವರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








