ಬೆಂಗಳೂರು: ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಘೋಷಿಸಿರುವ ‘ಋತುಚಕ್ರದ ರಜೆ’ಯ (Menstrual Leave) ಸಿಂಧುತ್ವವನ್ನು ಪ್ರಶ್ನಿಸಿ 17 ಮಂದಿ ಮಹಿಳೆಯರೇ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ, ಅವರ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಈ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಮಹಿಳೆಯರ ಗುಂಪೊಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಗುರುವಾರ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗಡೆ ಅವರಿದ್ದ ನ್ಯಾಯಪೀಠದ ಮುಂದೆ ಈ ಅರ್ಜಿಯು ವಿಚಾರಣೆಗೆ ಬಂದಿತ್ತು. ಪ್ರಾಥಮಿಕ ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.
ಅರ್ಜಿದಾರರ ಆಕ್ಷೇಪವೇನು?
ಅರ್ಜಿದಾರ ಮಹಿಳೆಯರು ಈ ರಜೆ ಸೌಲಭ್ಯದ ವಿರುದ್ಧ ಕೆಲವು ಗಂಭೀರ ಅಂಶಗಳನ್ನು ಎತ್ತಿದ್ದಾರೆ ಸರ್ಕಾರದ ಈ ಅಧಿಸೂಚನೆಯು ಸಂವಿಧಾನ ನೀಡಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ.ಇಂತಹ ರಜೆಗಳು ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯಕ್ಕೆ ಎಡೆಮಾಡಿಕೊಡುತ್ತವೆ.ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರು ಎಂಬ ತಪ್ಪು ಭಾವನೆ ಉದ್ಯೋಗದಾತರಲ್ಲಿ ಮೂಡಲು ಇದು ಕಾರಣವಾಗುತ್ತದೆ. ಪರೋಪಕಾರಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದರೂ, ಇದು ದೀರ್ಘಕಾಲದ ದೃಷ್ಟಿಯಲ್ಲಿ ಮಹಿಳೆಯರ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಅರ್ಜಿದಾರರ ಆತಂಕವಾಗಿದೆ.
ಅರ್ಜಿದಾರರ ಪ್ರಮುಖ ಆಕ್ಷೇಪಣೆಗಳು:
ನೇಮಕಾತಿಯಲ್ಲಿ ಹಿನ್ನಡೆ: ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳು ಇಂತಹ ಕಡ್ಡಾಯ ರಜೆ ನಿಯಮಗಳಿಂದಾಗಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು. ಇದು ಮಹಿಳೆಯರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ.
ಲಿಂಗ ತಾರತಮ್ಯ: ಋತುಚಕ್ರದ ಆಧಾರದ ಮೇಲೆ ಪ್ರತ್ಯೇಕ ರಜೆ ನೀಡುವುದು ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಪುರುಷರಿಗಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ, ಇದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ.
ಅಭಿಪ್ರಾಯದ ಕೊರತೆ: ಇಷ್ಟು ದೊಡ್ಡ ಮಟ್ಟದ ನೀತಿಯನ್ನು ರೂಪಿಸುವ ಮೊದಲು ಸರ್ಕಾರ ಮಹಿಳಾ ಉದ್ಯೋಗಿಗಳ ಅಥವಾ ಸಂಬಂಧಪಟ್ಟ ಪಾಲುದಾರರ ಯಾವುದೇ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ವೃತ್ತಿ ಬೆಳವಣಿಗೆಗೆ ಅಡ್ಡಿ: ಹೆಚ್ಚುವರಿ ರಜೆಗಳ ಕಾರಣದಿಂದಾಗಿ ಮಹಿಳೆಯರಿಗೆ ಬಡ್ತಿ ಮತ್ತು ದೊಡ್ಡ ಜವಾಬ್ದಾರಿಗಳನ್ನು ನೀಡಲು ಸಂಸ್ಥೆಗಳು ತಾರತಮ್ಯ ಮಾಡುವ ಭೀತಿ ಎದುರಾಗಿದೆ.
ಹಿನ್ನೆಲೆ: ಕರ್ನಾಟಕ ಸರ್ಕಾರವು ಇತ್ತೀಚೆಗೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ನೋಂದಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ‘ಋತುಚಕ್ರ ರಜೆ’ ಘೋಷಿಸಿ ಆದೇಶ ಹೊರಡಿಸಿತ್ತು.








