ಬೆಂಗಳೂರು: ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿಲ್ಲ. ಇದನ್ನು ಮನಗಂಡು, ನಾನು ಅರಣ್ಯ ಸಚಿವನಾದ ಬಳಿಕ ಅರಣ್ಯ ವಿಸ್ತರಣೆಗೆ ಕ್ರಮ ವಹಿಸಿದ್ದು, 2 ವರ್ಷದಲ್ಲಿ 15000 ಎಕರೆಗೂ ಹೆಚ್ಚು ಭೂಮಿಯನ್ನು ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕಾಡಿನಿಂದ ನಾಡಿಗೆ ಕಾಡಾನೆಗಳು ಬಾರದಂತೆ ತಡೆಯಲು ಆನೆ ಕಂದಕ, ಸೌರ ತಂತಿ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ನಾನು ಅರಣ್ಯ ಸಚಿವನಾಗುವವರೆಗೆ ಅಂದರೆ 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 193 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.
ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ರೈಲ್ವೆ ಬ್ಯಾರಿಕೇಡ್ ಗೆ ಹೊಂದಿಕೊಂಡಂತೆ ಬಿದಿರು ಮತ್ತು ಕತ್ತಾಳೆ ಬೆಳೆಸಿದರೆ ಅದು ಜೈವಿಕ ಮತ್ತು ಸ್ವಾಭಾವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅರಣ್ಯ ಒತ್ತುವರಿಯನ್ನೂ ತಡೆಯುತ್ತದೆ. ಜೊತೆಗೆ ಆನೆಗಳಿಗೆ ಆಹಾರವೂ ಆಗುತ್ತದೆ. ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಮತ್ತು ಚಿರತೆಗಳನ್ನು ಸೆರೆ ಹಿಡಿಯಲು ಕಳೆದ 2 ವರ್ಷದಲ್ಲಿ ಹೊಸದಾಗಿ 2 ಆನೆ ಕಾರ್ಯಪಡೆ ಹಾಗೂ 1 ಚಿರತೆ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎಂದು ತಿಳಿಸಿದರು.
ಹಾಸನ, ಚಿಕ್ಕಮಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ ಎಂದರು.
ಸೆರೆ ಹಿಡಿದ ಆನೆಗಳಿಗೆ ಅಳವಡಿಸಲು ಇಷ್ಟು ದಿನ ವಿದೇಶದಿಂದ ಭಾರವಾದ ರೆಡಿಯೋ ಕಾಲರ್ ಖರೀದಿಸಲಾಗುತ್ತಿತ್ತು. ಈಗ ದೇಶೀಯವಾಗಿ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಲಾಗಿದ್ದು, ಇವುಗಳ ಅಳವಡಿಕೆ ಮಾಡಲಾಗುತ್ತಿದೆ.
ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನಿಗೆ ಬಳ್ಳೆ ಶಿಬಿರದಲ್ಲಿ ಮತ್ತು ಯಸಳೂರು ಬಳಿ ಸ್ಮಾರಕ ನಿರ್ಮಿಸಲು ಕ್ರಮವಹಿಸಲಾಗಿದ್ದು, ಸ್ಮಾರಕ ಸಿದ್ಧವಾಗಿದೆ. ಮುಂದಿನ ತಿಂಗಳು ಇದರ ಲೋಕಾರ್ಪಣೆ ನೆರವೇರಲಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಹಾಗೂ ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಸಿಬ್ಬಂದಿ ಸೇವೆ ಅತಿ ಮುಖ್ಯವಾಗಿದ್ದು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ.