ತುಮಕೂರು: ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‍ಸೆಟ್‍ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡುವ ಕುಸುಮ್- ಸಿ ಯೋಜನೆಯ ಮೊದಲ ಹಂತದಲ್ಲಿ ಮಾರ್ಚ್ 15ರೊಳಗೆ 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಕುಸುಮ್-ಸಿ ಯೋಜನೆಯಡಿ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಾಂಗವರ ಬಳಿ ಮತ್ತು ಚಿಕ್ಕಬಾಣಗೆರೆ ಬಳಿ ನಿರ್ಮಿಸಿರುವ ಸೋಲಾರ್ ಪಾರ್ಕ್ ಗಳು ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನೀರಗುಂದ ಗೇಟ್ ಬಳಿ ಸ್ಥಾಪಿಸಿರುವ ಸೋಲಾರ್ ಪಾರ್ಕ್ ಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ಕುಸುಮ್-ಸಿ ಯೋಜನೆಯ ಮೊದಲ ಹಂತದಲ್ಲಿ ರಾಜ್ಯಾದ್ಯಂತ ವಿವಿಧ ಫೀಡರ್ ವ್ಯಾಪ್ತಿಗಳಲ್ಲಿ 3,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಈ ಪೈಕಿ ಮಾರ್ಚ್ 15ರೊಳಗೆ 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲಾಗುವುದು. ಕಾಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ”, ಎಂದು ಹೇಳಿದರು.
“ಕುಸುಮ್-ಬಿ ಯೋಜನೆಯಡಿ ರೈತರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸಲಾಗುತ್ತಿದೆ. ಕುಸುಮ್-ಸಿ ಯೋಜನೆಯಡಿ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪಸೆಟ್‌ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು. ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು”, ಎಂದು ಮಾಹಿತಿ ನೀಡಿದರು.
“ಫೀಡರ್ ಮಟ್ಟದ ಸೌರೀಕರಣಕ್ಕೆ ಸೋಲಾರ್ ಪಾರ್ಕ್ ಗಳನ್ನು ಸ್ಥಾಪಿಸಲು ಸರ್ಕಾರಿ ಭೂಮಿ ಇದ್ದರೆ ಅದನ್ನು ಉಚಿತವಾಗಿ ಇಂಧನ ಇಲಾಖೆಗೆ ಪಡೆದು ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಗುತ್ತಿಗೆದಾರರು ಪ್ರತಿ ಎಕರೆ ಭೂಮಿಗೆ ವಾರ್ಷಿಕ 25 ಸಾವಿರ ರೂ. ಪಾವತಿಸಬೇಕು. ಈ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಚರ್ಚಿಸಿ, ಈ ಹಣವನ್ನು ಸೋಲಾರ್ ಪಾರ್ಕ್ ಇರುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗೆ ವೆಚ್ಚ ಮಾಡಲಿದ್ದಾರೆ. ಸರ್ಕಾರಿ ಭೂಮಿ ಲಭ್ಯವಿಲ್ಲದೇ ಇದ್ದರೆ ಖಾಸಗಿ ಭೂಮಿ ಪಡೆಯಲಾಗುವುದು. ಈ ಭೂಮಿಗೆ ಪ್ರತಿ ಎಕರೆಗೆ 25,000 ರೂ.ಅನ್ನು ಗುತ್ತಿಗೆದಾರರು ಭೂಮಾಲೀಕರಿಗೆ ಪಾವತಿ ಮಾಡಲಿದ್ದಾರೆ”, ಎಂದು ಹೇಳಿದರು.
“ಹಗಲು ವೇಳೆ 7 ಗಂಟೆ ನಿರಂತರ ಗುಣಮಟ್ಟದ ವಿದ್ಯುತ್ ಲಭ್ಯವಾಗುವುದರಿಂದ ರೈತರು ಕುಸುಮ್-ಸಿ ಯೋಜನೆಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ. ಒಂದು ಫೀಡರ್ ಸೌರೀಕರಣವಾದರೆ ಸುತ್ತಲಿನ ಸುಮಾರು 1,000ಕ್ಕಿಂತ ಹೆಚ್ಚು ರೈತರಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ. ರೈತರಿಗೆ ಈ ಫೀಡರ್ ಗಳಿಂದ ವಿದ್ಯುತ್ ಪೂರೈಸುವ ಕಾರಣ, ಇತರೆ ಗ್ರಾಹಕರಿಗೆ ಎಸ್ಕಾಂಗಳಿಂದ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ”, ಎಂದು ತಿಳಿಸಿದರು.
“ಖಾಸಗಿಯವರೇ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಅದನ್ನು ಸರ್ಕಾರ ಖರೀದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸುತ್ತದೆ. ಪ್ರತಿ ಯೂನಿಟ್ ವಿದ್ಯುತ್ ಗೆ ಗುತ್ತಿಗೆದಾರಿಗೆ ಗರಿಷ್ಠ 3.17 ರೂ. ನಿಗದಿಪಡಿಸಲಾಗುತ್ತದೆ. ಚಾಂಗವರ ಬಳಿ ಸ್ಥಾಪಿಸಿರುವ ಸೋಲಾರ್ ಪಾರ್ಕ್ ನಲ್ಲಿ ಪ್ರತಿ ಯೂನಿಟ್ ವಿದ್ಯುತ್ತಿಗೆ 3.15 ರೂ. ದರ ನಿಗದಿಪಡಿಸಲಾಗಿದೆ”, ಎಂದು ಸಚಿವರು ಮಾಹಿತಿ ನೀಡಿದರು.
ಶೀಘ್ರದಲ್ಲೇ ಉದ್ಘಾಟನೆ
“ಈಗಾಗಲೇ ಪೂರ್ಣಗೊಂಡಿರುವ ಕುಸುಮ್-ಸಿ ಫೀಡರ್ ಮಟ್ಟದ ಸೋಲಾರ್ ಪಾರ್ಕ್ ಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಬೆಂಬಲ ನೀಡಿದ್ದು, ಎಲ್ಲಾ ರೀತಿಯ ಸಹಕಾರ ಕೊಡುತ್ತಿದ್ದಾರೆ. ಇದರ ಪರಿಣಾಮ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಶೀಘ್ರದಲ್ಲೇ ಮುಖ್ಯಮಂತ್ರಿಯವರಿಂದ ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು”, ಎಂದು ಸಚಿವರು ಹೇಳಿದರು.
ಈ ವೇಳೆ ದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯೂ ಆಗಿರುವ ಶಿರಾ ಕ್ಷೇತ್ರದ ಶಾಸಕಟಿ.ಬಿ.ಜಯಚಂದ್ರ, ಹೊಸದುರ್ಗದ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತಿತರರು ಇದ್ದರು.
BREAKING: ರಾಜ್ಯದಲ್ಲಿ ‘ನಕ್ಸಲ್ ಶರಣಾಗತಿ ನೀತಿ’ ಸರಳೀಕರಣ, ಮುಖ್ಯವಾಹಿನಿಗೆ ತರಲು ಬದ್ಧ: ಸಿಎಂ ಸಿದ್ಧರಾಮಯ್ಯ ಘೋಷಣೆ
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025