ಬೆಂಗಳೂರು: ‘ಸಕಾಲ’ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಭವಿಲ್ಲದೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರದಂದು ನಡೆದ “ಸಕಾಲ ಪ್ರಗತಿ ಪರಿಶೀಲನಾ ಸಭೆ”ಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ಸರ್ಕಾರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಲು ಇರುವ ಏಕೈಕ ಮಾರ್ಗ ಸಕಾಲ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು, ಜನರಿಗೆ ವಿಳಂಭವಿಲ್ಲದೆ ಎಲ್ಲಾ ಸೇವೆಗಳೂ ಲಭ್ಯವಾಗುವಂತಿರಬೇಕು ಎಂಬುದೇ ಸರ್ಕಾರ ಉದ್ದೇಶ. ಆದರೆ, ಕೆಲವು ಸೇವೆಗಳು ವಿಳಂಭವಾಗುತ್ತಿರುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.
ಮುಂದುವರೆದು, “ಸಕಾಲ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಸುಧಾರಣೆಯಾಗಬೇಕಾದ್ದು ಇನ್ನೂ ಬಹಳಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಭವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ವರ ಕೊಟ್ಟು ಇಲ್ಲಿ ಕೂರಿಸಿದವರನ್ನೇ ಮನೆಯ ಹೊರಗೆ ಕೂರಿಸಿ ಸತಾಯಿಸುವ ಕೆಲಸ ಆಗಬಾರದು. ಸಕಾಲ ಸೇವೆಯನ್ನು ಅಧಿಕಾರಿಗಳು ನಾಮಕಾವಸ್ತೆಯಂತೆ ಹಗುರವಾಗಿ ತೆಗೆದುಕೊಳ್ಳಬಾರದು” ಎಂದು ಕಿವಿಮಾತು ಹೇಳಿದರು.
“ಸರ್ಕಾರಿ ಸೇವೆ ಒದಗಿಸುವುದು ನಮ್ಮ ಕರ್ತವ್ಯ, ಸೇವೆಯನ್ನು ಪಡೆಯುವುದು ಜನರ ಮೂಲಭೂತ ಹಕ್ಕು. ಹೀಗಾಗಿ ಅಧಿಕಾರಿಗಳು ಸಕಾಲ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸಬೇಕು. ಸರ್ಕಾರದ ಜೊತೆ ಕೈಜೋಡಿಸಿ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು” ಎಂದು ಅವರು ಕಿವಿಮಾತು ಹೇಳಿದರು.
ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ| ಶಾಲಿನಿ ರಜನೀಶ್ ಮಾತನಾಡಿ, “ಸಕಾಲ ಕಾಯ್ದೆಯ ಅಡಿಯಲ್ಲಿ 100 ಇಲಾಖೆಗಳಿಂದ ಒಟ್ಟು 1201 ಸೇವೆಗಳನ್ನು ಜನರಿಗೆ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 29 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ಶೇ.5 ರಷ್ಟು ಸೇವೆಗಳನ್ನು ವಿಳಂಭವಾಗಿ ನೀಡಲಾಗಿದೆ. ಶೇ.07 ರಷ್ಟು ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ. ಸಕಾಲ ಕಾಯ್ದೆ 5(2) ರ ಪ್ರಕಾರ ಯಾವುದೇ ಅರ್ಜಿಯನ್ನು ತಿರಸ್ಕರಿಸಬೇಕಾದರೆ ಸೂಕ್ತ ಕಾರಣವನ್ನು ನಮೂದಿಸಬೇಕು. ಆದರೆ, ಅನೇಕರು ಈ ನಿಯಮವನ್ನು ಪಾಲಿಸಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಸಭೆಯಲ್ಲಿ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಸೇರಿದಂತೆ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳೂ ಹಾಜರಿದ್ದರು.
‘ಸಕಾಲ’ ಸೇವೆಯೂ ಡಿಜಿಟಲ್
ಸಭೆಯಲ್ಲಿ ಸಕಾಲ ಸೇವೆಯನ್ನೂ ಡಿಜಿಟಲೀಕರಣಗೊಳಿಸುವ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಈಗಾಗಲೇ ಎಲ್ಲಾ ಸೇವೆಯನ್ನೂ ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಸಕಾಲ ಸೇವೆಯನ್ನೂ ಏಕೆ ಆನ್‌ಲೈನ್ ಮೂಲಕ ನೀಡಬಾರದು? ಎಂದು ಪ್ರಶ್ನಿಸಿದ ಸಚಿವರು, ಸಮಾಜದಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚುತ್ತಿದೆ. ಹೀಗಾಗಿ ಆನ್ಲೈನ್ ಸೇವೆ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಸುಳ್ಳು ಹೇಳಿಕೆ. ಕಂದಾಯ ಇಲಾಖೆಯಲ್ಲೇ ಇದು ಸಾಧ್ಯವಾಗಿದೆ ಎಂದ ಮೇಲೆ ಉಳಿದ ಕಡೆ ಏಕೆ ಸಾಧ್ಯವಿಲ್ಲ. ಇನ್ಮುಂದೆ ಸಕಾಲ ಅರ್ಜಿಯನ್ನೂ ಆನ್‌ಲೈನ್ ಮೂಲಕವೇ ಸ್ವೀಕರಿಸಿ ಎಂದು ಸಲಹೆ ನೀಡಿದರು.
“ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ತಾಣಗಳಿವೆ. ಸರ್ಕಾರದ ಗ್ರಾಮ-1 ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್‌ಗೂ ನೀಡುವ ಉದ್ದೇಶ ಸರ್ಕಾರಕ್ಕಿದೆ. ಇದು ಸಾಧ್ಯವಾದರೆ ಜನ ಮೊಬೈಲ್ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು. ಸಕಾಲ ಸೇವೆ ಡಿಜಿಟಲೀಕರಣಗೊಂಡರೆ ಡಿಜಿಟಲ್ ಹೆಜ್ಜೆ ಗುರುತಿನ (ಫುಟ್ ಪ್ರಿಂಟ್) ಮೂಲಕ ಅರ್ಜಿ ಎಲ್ಲಿದೆ? ವಿಳಂಭಕ್ಕೆ ಕಾರಣವೇನು? ಎಂಬ ಕುರಿತ ಮಾಹಿತಿ ನಮಗೂ ಲಭ್ಯವಾಗುತ್ತದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಸಕಾಲ ಸಂಪೂರ್ಣ ಡಿಜಿಟಲ್ ಆಗಬೇಕು” ಎಂದು ಸೂಚಿಸಿದರು.