ತುಮಕೂರು: ಪುರುಷ ಪ್ರಧಾನ ಸಂಪ್ರದಾಯಗಳಿಗೆ ಸೆಡ್ಡು ಹೊಡೆದು 6ನೇ ತರಗತಿ ಓದುತ್ತಿರುವ ಹೆಣ್ಣು ಮಗುವೊಂದು ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿ, ವಿಧಾನಗಳನ್ನು ನೆರವೇರಿಸುವ ಮೂಲಕ ವೈಜ್ಞಾನಿಕ ಆಲೋಚನೆಗೆ ನಾಂದಿ ಹಾಡಿದ್ದಾರೆ. ತುಮಕೂರು ನಗರಕ್ಕೆ ಸಮೀಪದ ಪೆಮ್ಮನಹಳ್ಳಿ ಗ್ರಾಮದಲ್ಲಿ 6ನೇ ತರಗತಿ ಓದುತ್ತಿರುವ 11ನೇ ವರ್ಷದ ಮೋನಿಷ ಎಂಬ ಹೆಣ್ಣು ಮಗುವೊಂದು ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಿ ನಾಗರೀಕರಿಗೆ ಒಂದು ಮಾದರಿಯಾಗಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ತನ್ನ ತಂದೆಯಾದ ಕೆಂಪರಾಜು ಎಂಬುವವರು (48 ವರ್ಷ) ಕ್ಯಾನ್ಸರ್ ಖಾಯಿಲೆಯಿಂದ ಸಾವನ್ನಪ್ಪಿದ್ದರು. ಮೂಲತಃ ಆಟೋ ಚಾಲಕರಾಗಿದ್ದ ತನ್ನ ತಂದೆ ಬಡತನದಿಂದಲೇ ಜೀವನ ನಡೆಸುತ್ತಿದ್ದರು, ಆತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಾದ ಮೋನಿಷ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಿ, ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಗಂಡು ಮಕ್ಕಳೇ ಮಾಡಬೇಕೆಂಬ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಈಕೆಯ ಕಾರ್ಯಕ್ಕೆ ಗ್ರಾಮಸ್ಥರು ಸಹ ಬೆಂಬಲಿಸಿದ್ದು, ಹಲವಾರು ಜನರಿಗೆ ಮಾದರಿಯಾಗಿದ್ದಾಳೆ, ಇನ್ನು ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ.