ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಐವಾನ್ ಡಿ’ಸೋಜ, ಕೆ.ಗೋವಿಂದರಾಜು, ಜಗದೇವ ಗುತ್ತೇದಾರ್, ಶ್ರೀಮತಿ ಬಲ್ಕೀಸ್ ಬಾನು, ಎನ್.ಎಸ್.ಬೋಸರಾಜು, ಡಾ.ಯತೀಂದ್ರ ಎಸ್ ಹಾಗೂ ಎ.ವಸಂತ್‍ಕುಮಾರ್, ಭಾರತೀಯ ಜನತಾ ಪಕ್ಷದಿಂದ ಮೂಳೆ ಮಾರುತಿರಾವ್, ಸಿ.ಟಿ.ರವಿ ಮತ್ತು ರವಿಕುಮಾರ್.ಎನ್ ಹಾಗೂ ಜಾತ್ಯಾತೀತ ಜನತಾದಳದಿಂದ ಟಿ.ಎನ್.ಜವರಾಯಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ದ್ವೈವಾರ್ಷಿಕ ಚುನಾವಣೆಯನ್ನು ಜೂನ್ 13 ರಂದು ನಿಗಧಿಪಡಿಸಲಾಗಿತ್ತು. ಮೇ 27 ರಿಂದ ಮೇ 3 ರವರೆಗೆ ನಾಮಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಒಟ್ಟು 12 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಜೂನ್ 4 ರಂದು ನಾಮಪತ್ರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಪರಿಶೀಲನೆಯ ಸಂದರ್ಭದಲ್ಲಿ ಆಸಿಫ್ ಪಾಷ ಆರ್.ಎಂ. ಎಂಬವರ ನಾಮಪತ್ರವು ಸೂಚಕರಿಲ್ಲದ ಕಾರಣ ತಿರಸ್ಕøತಗೊಂಡಿದ್ದು, ಉಳುದ 11 ಜನಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದವು. ಜೂನ್ 6 ಮಧ್ಯಾಹ್ನ 3 ಗಂಟೆಯವರಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು, ಯಾರೂ ನಾಮಪತ್ರಗಳನ್ನು ಹಿಂಪಡೆದಿರುವುದಿಲ್ಲ. ಭರ್ತಿ ಮಾಡಬೇಕಾದ 11 ಸ್ಥಾನಗಳಿಗೆ 11 ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಕಣದಲ್ಲಿರುತ್ತಾರೆ ಎಂದು ಕರ್ನಾಟಕ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆ -2024ರ ಚುನಾವಣಾಧಿಕಾರಿಗಳು ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.