ಧಾರವಾಡ : ಬೆಂಗಳೂರಿನಲ್ಲಿ 10 ಸಾವಿರ ವಿದೇಶಿಗರು ವಾಸಿಸುತ್ತಿದ್ದು, ಆಫ್ರಿಕಾ ಪ್ರಜೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರಕಾರವು ಡ್ರಗ್ಸ ವಿರುದ್ಧ ಸಮರ ಸಾರಿದ್ದು ಸ್ವತಃ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಕಳೆದೊಂದು ವರ್ಷದಲ್ಲಿ 150 ಕೋಟಿ ರೂ. ಡ್ರಗ್ಸ ಬರುತ್ತಿದ್ದು ಸಾಕಷ್ಟು ಎಚ್ಚರದ ಕ್ರಮಗಳನ್ನು ವಹಿಸಲಾಗುತ್ತಿದೆ. ಈಗಾಗಲೇ ಹೈಡ್ರೊ ಗಾಂಜಾ ಎಲ್ಲೆಂದರಲ್ಲಿ ನಾಲ್ಕು ಕೋಣೆಗಳಲ್ಲಿ ಬೆಳೆಯಲಾಗುತ್ತಿದ್ದು ಇದನ್ನು ಕಂಡು ಹಿಡಿಯುವುದು ಸವಾಲಾಗಿದೆಯೆಂದರು. ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ವಿದೇಶಿಗರು ವಾಸಿಸುತ್ತಿದ್ದು ಆಫ್ರಿಕಾ ಪ್ರಜೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಕಳೆದೊಂದು ವರ್ಷದಲ್ಲಿ ಡ್ರಗ್ಸ ಧಂದೆಯಲ್ಲಿ ತೊಡಗಿದ ನೂರಾರು ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ವಾಪಸ್ ಕಳಸಲಾಗಿದೆಂದು ತಿಳಿಸಿದರು.
ನಂತರ ವಿಧಿ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಈ ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ವಿಫುಲ ಅವಕಾಶಗಳಿವೆ ಸೈಬರ್ ಫಾರೆನ್ಸಿಕ್‍ಗಳು, ಸೈಬರ್ ಕಮಾಂಡೋಗಳು, ಸೈವರ್ ಎಕ್ಸಪರ್ಟಗಳು ತಯಾರಿ ಮಾಡುವಲ್ಲಿ ವಿಧಿ ವಿಜ್ಞಾನ ಸಂಸ್ಥೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನಕ್ಕನುಗುಣವಾಗಿ ಅಪರಾಧ ಹಾಗೂ ಅಪರಾಧಿಗಳ ಚಟುವಟಿಕೆಗಳನ್ನು ಮೊದಲೇ ವಿಶ್ಲೇಷಿಸಲು ಸರಿಯಾದ ಉಪಕರಣಗಳ ಜೊತೆ ಪರಿಣಿತರು ಸಹ ಇರಲೇಬೇಕು. ಭಾರತೀಯ 3 ಹೊಸ ಕಾನೂನುಗಳ ಬೇಡಿಕೆಗೆ ಅನುಗುಣವಾಗಿ ಪ್ರಕರಣಗಳನ್ನು ತನಿಖೆ ಮಾಡುವಲ್ಲಿ ಅನುಕೂಲವಾಗುತ್ತದೆ. ಸೈಬರ್ ಪರಿಣಿತರರು ನೀಡುವ ವರದಿ ಹಾಗೂ ದಾಖಲೆಗಳು ಹೊಸ ಕಾನೂನಿನಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.
ಡಿಜಿಟಲ್ ವಿಧಿ ವಿಜ್ಞಾನ, ಜೌಷಧಿ ವಿಧಿ ವಿಜ್ಞಾನ, ಬಯೋಕೆಮಿಸ್ಟ್ರಿ ವಿಧಿ ವಿಜ್ಞಾನ, ಸೈಬರ್ ಸೆಕ್ಯೂರಿಟಿ ಹಾಗೂ ಪರಿಸರ ವಿಧಿ ವಿಜ್ಞಾನಗಳನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಘಾಟೆ ತಿಳಿಸಿದರು.
ಪ್ರಯೋಗಾಲಯ ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಚಿವರು ವೀಕ್ಷಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಬೆಳಗಾವಿ ವಿಭಾಗದ ಐಜಿಪಿ ವಿಕಾಸಕುಮಾರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಉಪಸ್ಥಿತರಿದ್ದರು.