ಚಿತ್ರದುರ್ಗ : ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಇದುವರೆಗೂ 1 ಲಕ್ಷದ 10 ಸಾವಿರ ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ವ್ಯಯಿಸಿದೆ. ಹೊಳಲ್ಕೆರೆ ತಾಲೂಕಿಗೆ 293 ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡುವ ಮೂಲಕ ಜನತೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಳಿಗೆ ಹಣ ನೀಡುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಜೆಟ್ ನಲ್ಲಿ 1.36 ಲಕ್ಷ ಕೋಟಿ ರೂ.ಹಣವನ್ನು ಮೀಸಲಿಡುವ ಮುಲಕ ಅಭಿವೃದ್ಧಿ ಗ್ಯಾರಂಟಿಯನ್ನು ಸಹ ನೀಡುತ್ತಿದೆ ಎಂದರು.
ಕರ್ನಾಟಕದಲ್ಲಿ ಜಾರಿಗೆ ಬಂದ ಐದು ಗ್ಯಾರಂಟಿ ಯೋಜನೆಗಳು ರಾಜ್ಯಮಟ್ಟಕ್ಕೆ ಸೀಮಿತವಾಗದೆ, ಇಡೀ ದೇಶದ ರಾಜಕೀಯ–ಆಡಳಿತ ಚರ್ಚೆಯ ದಿಕ್ಕನ್ನೇ ಬದಲಿಸಿವೆ. ಬಡತನ ನಿವಾರಣೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಭದ್ರತೆ ಕುರಿತಂತೆ “ಗ್ಯಾರಂಟಿ ಮಾದರಿ” ರಾಷ್ಟ್ರಮಟ್ಟದಲ್ಲಿ ಹೊಸ ಇತಿಹಾಸ ಬರೆದಿದೆ ಎಂದು ಹೇಳಿದರು.
ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಗ್ಯಾರಂಟಿ ಯೋಜನೆಗಳು ಜನಕಲ್ಯಾಣದ ಕಲ್ಪನೆಯನ್ನು ಪುನರ್‌ವ್ಯಾಖ್ಯಾನ ಮಾಡಿವೆ. ಬಡವರು, ಮಹಿಳೆಯರು ಮತ್ತು ಯುವಕರನ್ನು ನೇರವಾಗಿ ಕೇಂದ್ರವಾಗಿಟ್ಟುಕೊಂಡ ಈ ಯೋಜನೆಗಳು, ಇತರ ರಾಜ್ಯಗಳು ಮತ್ತು ರಾಷ್ಟ್ರಮಟ್ಟದ ನೀತಿ ರೂಪಿಸುವವರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗಿವೆ. ವಿರೋಧಿಸುವವರು ಕೂಡ ಈ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ಈ ಯೋಜನೆಗಳ ಬಗ್ಗೆ ಗ್ರಾಪಂ ಮಟ್ಟದಲ್ಲಿ ಸಾಕಷ್ಟು ಪ್ರಚಾರ ಮಾಡಬೇಕಿದೆ ಎಂದು ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಹೇಳಿದರು. ಸಮಿತಿ ಸದಸ್ಯರು ಕೂಡ ಇದಕ್ಕೆ ದನಿಗೂಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮೈಲಾರಪ್ಪ, ತಾಲೂಕು ಅಧ್ಯಕ್ಷ ಹನುಮಂತಪ್ಪ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯ್ತಿಗಳಲ್ಲಿ ಪ್ರಚಾರ
ಹೊಳಲ್ಕೆರೆ ತಾಲೂಕಿನ 29 ಗ್ರಾಮ ಪಂಚಾಯತಿಗಳಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ಕಾರ್ಯಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ದಿನೇಶ್ ಗೂಳಿಗೌಡ ಅವರು ಸೂಚನೆ ನೀಡಿದರು. ಫಲಾನುಭವಿಗಳ ಸಂಖ್ಯೆ, ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಸಂಪೂರ್ಣ ಅಂಕಿಸಂಖ್ಯೆಗಳನ್ನು ಒಳಗೊಂಡ ಪ್ಲೆಕ್ಸ್ ಗಳನ್ನು ಅಳವಡಿಸಬೇಕೆಂದು ಸೂಚಿಸಿದರು.
ಗ್ಯಾರಂಟಿ ಅಂಕಿಸಂಖ್ಯೆ
ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ 51,393 ಫಲಾನುಭವಿಗಳು ನೋಂದಣಿಯಾಗಿದ್ದು 24 ಕಂತುಗಳ ಹಣ ಬಿಡುಗಡೆ ಆಗಿದೆ. ಇದುವರೆಗೂ 211.22 ಕೋಟಿ ರೂ. ಗೃಹಲಕ್ಷ್ಮಿ ಹಣ ಪಾವತಿಯಾಗಿದ್ದು, 98.14% ಪ್ರಗತಿ ಸಾಧಿಸಲಾಗಿದೆ. ಈ ಯೋಜನೆಯಲ್ಲಿ ನೋಂದಣಿಯಾದವರಲ್ಲಿ 373 ಮಂದಿ ಮೃತಪಟ್ಟಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ, 45,897 ಕುಟುಂಬಗಳು ಉಚಿತ ವಿದ್ಯುತ್ ಬಳಕೆ ಮಾಡಿದ್ದು ಇದಕ್ಕೆ ತಗುಲಿರುವ 19 ಕೋಟಿ ರೂ. ವೆಚ್ಚದ ಹಣವನ್ನು ಬೆಸ್ಕಾಂಗೆ ಸರ್ಕಾರ ಪಾವತಿಸಿದೆ. ಗೃಹಜ್ಯೋತಿ ಯೋಜನೆಯಡಿ 94.403% ಪ್ರಗತಿ ಸಾಧಿಸಲಾಗಿದೆ. ತಾಲೂಕಿನಲ್ಲಿ 33 ಸಾವಿರ ಕೃಷಿ ಪಂಪ್ ಸೆಟ್ ಗಳಿದ್ದು ಇವುಗಳಿಗೂ ಉಚಿತ ವಿದ್ಯುತ್ ನೀಡುವ ಮೂಲಕ ರೈತರಿಗೂ ನೆರವಾಗಿದೆ.
ಅನ್ನಭಾಗ್ಯ ಯೋಜನೆಯಡಿ 45,222 ಕುಟುಂಬಗಳಿಗೆ ಪ್ರತಿ ತಿಂಗಳು 2800 ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 600ಕ್ಕೂ ಅಧಿಕ ವಯೋವೃದ್ಧರು ಮತ್ತು ವಿಕಲಚೇತನರಿದ್ದು ಅವರ ಮನೆ ಬಾಗಿಲಿಗೆ ಪಡಿತರ ಪೂರೈಸಲಾಗುತ್ತಿದೆ. ತೂಕದಲ್ಲಿ ವ್ಯತ್ಯಾಸ ಆಗದಂತೆ ಸಕಾಲಕ್ಕೆ ಪಡಿತರ ವಿತರಣೆ ಮಾಡಲಾಗುತ್ತಿದೆ.
ಶಕ್ತಿ ಯೋಜನೆಯಡಿ 1.54 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ಇದರ ಮೌಲ್ಯ 59 ಕೋಟಿ ರೂ. ಮೊತ್ತವನ್ನು ರಾಜ್ಯ ಸರ್ಕಾರ ಸಾರಿಗೆ ನಿಗಮಕ್ಕೆ ಪಾವತಿಸಿದೆ.
ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ 1089 ಯುವಕ ಯುವತಿಯರು ನೋಂದಣಿಯಾಗಿದ್ದಾರೆ. 1065 ಪದವಿ, 24 ಡಿಪ್ಲೋಮಾದಾರರಿದ್ದಾರೆ. ಇದುವರೆಗೆ ಪದವಿದರರಿಗೆ 3.36 ಕೋಟಿ ರೂ. ಡಿಪ್ಲೋಮಾದಾರರಿಗೆ 3.51 ಲಕ್ಷ ರೂ. ಸೇರಿದಂತೆ ಒಟ್ಟು 3.07 ಕೋಟಿ ರೂ.ಹಣವನ್ನು ಪದವೀಧರ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಲಾಗಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ನೆನೆಯಬೇಕು
ಗೃಹಲಕ್ಷ್ಮಿ ಹಣದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಹಕಾರಿಯಾಗಿದೆ. ಇದುವರೆಗೆ ಬಂದಂತಹ ಹಣದಿಂದ ಹೊಲಿಗೆ ಯಂತ್ರ ಖರೀದಿಸಿ ಬಟ್ಟೆ ಹೊಲೆದು ಜೀವನ ನಿರ್ವಹಿಸಲು ಅನುಕೂಲವಾಗಿದೆ. ಇದರ ಜೊತೆಗೆ ಮಕ್ಕಳ ಶಾಲಾ ಶುಲ್ಕ ಕಟ್ಟಲು, ಪಠ್ಯ ಸಾಮಾಗ್ರಿ ಖರೀದಿಗೆ ಉಪಯುಕ್ತವಾಗಿದೆ ಎಂದು ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಗ್ರಾಮದ ಅನಿತಾ ತಮ್ಮ ಅನಿಸಿಕೆ ಹಂಚಿಕೊಂಡರು.
ಗುಂಡೇರಿ ಗ್ರಾಮದ ಮಾಲಾ ಎಂಬ ಫಲಾನುಭವಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಉಳ್ಳವರಿಗೆ ಗ್ಯಾರಂಟಿ ಬೇಡದಿರಬಹುದು ಆದರೆ ಇಲ್ಲದವರಿಗೆ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಅನುಕೂಲವಾಗಿದೆ. ಶಕ್ತಿ ಯೋಜನೆಯ ಉಚಿತ ಬಸ್ ಸೇವೆ ಕೆಲಸಕ್ಕೆ ಹೋಗುವವರಿಗೆ ಉಪಯೋಗವಾಗಿದ್ದರೆ, ಗೃಹಲಕ್ಷ್ಮಿ ಹಣದಿಂದ ಔಷಧಿ ಖರೀದಿಗೆ ಸಹಾಯವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲಬಾರದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ನಾವು ನೆನೆಯಬೇಕು ಎಂದು ಹೇಳಿದರು.
ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಬೇಕು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026ನೇ ಸಾಲಿನ ‘ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ’ಕ್ಕೆ ಆದೇಶ








