ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೂ ಅನ್ವಯ ಆಗುವಂತೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ ನೀಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಕಾರ್ಮಿಕ ಇಲಾಖೆಯ ಸರ್ಕಾರದ ಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961 ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಅಧಿಸೂಚನೆ ಹೊರಡಿಸುವ ಸಂಬಂಧ ಚರ್ಚಿಸಿ ವರದಿ ಸಲ್ಲಿಸಲು ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು, ತಜ್ಞವೈದ್ಯರು, ಕಾರ್ಮಿಕ ವರ್ಗಗಳ ಪ್ರತಿನಿಧಿಗಳು, ಕೈಗಾರಿಕಾ ಸಂಘದ ಪ್ರತಿನಿಧಿಗಳು, IT/ BT ಪ್ರತಿನಿಧಿ, ಗಾರ್ಮೆಂಟ್ಸ್ ಮಾಲೀಕರ ಪ್ರತಿನಿಧಿ, ಪ್ರಾಧ್ಯಾಪಕರು, ಸಮಾಜ ಸೇವಕರು, ಮಾಲೀಕ ವರ್ಗದ ಪ್ರತಿನಿಧಿಗಳು, ಇತರೆ ಸದಸ್ಯರುಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.
ಸದರಿ ತಜ್ಞರ ಸಮಿತಿಯು ವಿವಿಧ ಹಂತಗಳಲ್ಲಿ ಚರ್ಚಿಸಿ ಕಾರ್ಖಾನೆಗಳು, ಪ್ಲಾಂಟೇಷನ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಮೊದಲಾದವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಅವರ ಋತುಚಕ್ರದ ಸಮಯದಲ್ಲಿ ವಾರ್ಷಿಕ 6 ಋತುಸ್ರಾವ ರಜೆಗಳನ್ನು ಬಳಸಿಕೊಳ್ಳಲು “ಋತುಚಕ್ರ ರಜಾನೀತಿ” ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಮಹಿಳಾ ನೌಕರರಿಗೆ ವೇತನ ಸಹಿತ ಋತುಸ್ರಾವದ ರಜೆ ನೀಡುವ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಅನುಕೂಲವಾಗುವಂತೆ ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ಇತರೆ ಉದ್ದಿಮೆಗಳ ಮಾಲೀಕರು, ವಿವಿಧ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರ ಗಮನಕ್ಕಾಗಿ ಹಾಗೂ ಸಲಹೆ, ಸೂಚನೆ, ಆಕ್ಷೇಪಣೆ/ ಅಭಿಪ್ರಾಯ ಕೋರಿ ಇಲಾಖೆಯ ವೆಬ್‌ಸೈಟ್ karmikaspandana.gov.in ಸೇರಿದಂತೆ ದಿನಾಂಕ: 18-10-2025 ರಂದು ಪುಕಟಿಸಲಾಗಿರುತ್ತದೆ.
ಕಾರ್ಮಿಕರು, ಕಾರ್ಮಿಕ ಸಂಘಗಳು, ಮಾಲೀಕರು, ಮಾಲೀಕ ಸಂಘಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಸರ್ಕಾರಿ ನೌಕರರ ಒಕ್ಕೂಟ ಮೊದಲಾದವರಿಂದ ಪುಸ್ತಾಪಿತ ಋತುಚಕ್ರ ರಜಾನೀತಿಯ ಸಂಬಂಧ ಒಟ್ಟು 75 ಅಭಿಪ್ರಾಯಗಳು ಸ್ವೀಕೃತವಾಗಿದ್ದು, ಈ ಪೈಕಿ 56 ಅಭಿಪ್ರಾಯಗಳು ಪುಸ್ತಾಪಿತ ಋತುಚಕ್ರ ರಜಾನೀತಿಯ ಪರವಾಗಿರುತ್ತವೆ. ಉಳಿದಂತೆ 19 ಅಭಿಪ್ರಾಯಗಳು ವಿರುದ್ಧವಾಗಿರುತ್ತವೆ. ಉದ್ದೇಶಿತ ರಜಾನೀತಿಯನ್ನು ಬೆಂಬಲಿಸಿ ಸ್ವೀಕೃತವಾದ 56 ಅಭಿಪ್ರಾಯಗಳಲ್ಲಿ, 26 ಅಭಿಪ್ರಾಯಗಳು ಮಾಲೀಕ ವರ್ಗದವರು, 7 ಕಾರ್ಮಿಕ ಸಂಘಗಳು, 19 ನೌಕರರು, 1 ಸಾರ್ವಜನಿಕರು, 1 ಸರ್ಕಾರಿ ನೌಕರರ ಒಕ್ಕೂಟ, 2 ಮಹಿಳಾ ಸಂಘಗಳು ನೀಡಿರುತ್ತಾರೆ. ಅಲ್ಲದೇ ಪಸ್ತಾಪಿತ ಋತುಚಕ್ರ ರಜಾನೀತಿಯನ್ನು ಬೆಂಬಲಿಸಿರುವ ಕಾರ್ಮಿಕ/ ಕಾರ್ಮಿಕ ಸಂಘಟನೆ/ ಮಹಿಳಾ ಸಂಘಟನೆ/ ಆಡಳಿತ ವರ್ಗದವರ 56 ಅಭಿಪ್ರಾಯಗಳಲ್ಲಿ 10 (10 ಅಭಿಪ್ರಾಯಗಳಲ್ಲಿ 4 ಆಡಳಿತ ವರ್ಗದ ಅಭಿಪ್ರಾಯಗಳು) ಅಭಿಪ್ರಾಯಗಳು ಪ್ರಸ್ತಾಪಿಸಿರುವ ವಾರ್ಷಿಕ 6 ರಜೆಗಳಿಗೆ ಬದಲಾಗಿ 12 ರಜೆಗಳನ್ನು ನೀಡುವಂತೆ ಕೋರಲಾಗಿರುತ್ತವೆ.
ಪುಸ್ತಾಪಿತ ಋತುಚಕ ರಜಾನೀತಿಯ ಪರವಾಗಿ ಹೆಚ್ಚಿನ ಅಭಿಪ್ರಾಯಗಳು ಸ್ವೀಕೃತಗೊಂಡಿರುವುದರಿಂದ ಹಾಗೂ ಸದರಿ ರಜಾನೀತಿಯನ್ನು ರೂಪಿಸುವುದರಿಂದ ವಿವಿಧ ಉದ್ದಿಮೆಗಳಲ್ಲಿ ದುಡಿಯುವ ಮಹಿಳಾ ನೌಕರರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲ್ಪಟ್ಟು, ಅವರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದಾಗಿ ಉತ್ಪಾದನಾ ಚಟುವಟಿಕೆಗಳಲ್ಲಿ ಮಹಿಳಾ ನೌಕರರ ಭಾಗವಹಿಸುವಿಕೆ ಹೆಚ್ಚಿ ದೇಶದ ಉತ್ಪಾದನೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಹಾಗೂ ಋತುಚಕ್ರದ ರಜಾನೀತಿಯನ್ನು ರೂಪಿಸುವುದರಿಂದ ಮಹಿಳಾ ದುಡಿಮೆಗೆ ಸಂಬಂಧಿಸಿದಂತೆ ಕರ್ನಾಟಕವು ಒಂದು ಜಾಗತಿಕ ಉತ್ತಮ ಅಭ್ಯಾಸವನ್ನು ಹೊಂದಿದಂತಾಗುತ್ತದೆ ಎಂದು ಮೇಲೆ ಕ್ರ.ಸಂ.(2) ರಲ್ಲಿ ಆಯುಕ್ತರು, ಕಾರ್ಮಿಕ ಇಲಾಖೆ, ಇವರು ಪುಸ್ತಾವನೆ ಸಲ್ಲಿಸಿರುತ್ತಾರೆ.
ಸಚಿವ ಸಂಪುಟ ಟಿಪ್ಪಣಿಯಲ್ಲಿ “ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC ಗಳು, IT ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತುಚಕ್ರ ರಜೆ ನೀತಿ, 2025″ ಅನ್ನು ಜಾರಿಗೆ ತರಲು” ಸಚಿವ ಸಂಪುಟವು ಅನುಮೋದಿಸಿರುತ್ತದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಆರೋಗ್ಯ, ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ, ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಸಂಬಂಧಿಸಿದ ಉದ್ಯೋಗದಾತರು ಒದಗಿಸುವಂತೆ ಆದೇಶಿಸಿದೆ.
ಷರತ್ತುಗಳು:
1. ಮಹಿಳಾ ನೌಕರರು ಆಯಾ ತಿಂಗಳ “ಋತುಚಕ್ರ ರಜೆ” ಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ “ಋತುಚಕ್ರ ರಜೆ” ಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (carry over) ಅವಕಾಶವಿರುವುದಿಲ್ಲ.
2.ಪ್ರತಿ ತಿಂಗಳು ಒಂದು ದಿನ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಸಾಗರ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕಲ್ಮನೆಯಲ್ಲಿ ನಡೆಸಿದ ‘ಜನಸಂಪರ್ಕ ಸಭೆ’ಗೆ ಭರ್ಜರಿ ರೆಸ್ಪಾನ್ಸ್!








