ಬೆಂಗಳೂರು : ಹಠಾತ್ ಹೃದಯಾಘಾತ ತಡೆಯಲು ಜಾರಿಗೆ ತಂದಿರುವ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ ಅಡಿ ಸುಮಾರು 11 ಸಾವಿರ ಜನರಲ್ಲಿ ಗಂಭೀರವಾಗಿರುವ ಸಮಸ್ಯೆ ಪತ್ತೆ ಮಾಡಲಾಗಿದ್ದು, ನಾಲ್ಕು ತಿಂಗಳಲ್ಲಿ ಅಮೂಲ್ಯ ಸಮಯದಲ್ಲಿ 10 ಜೀವ ರಕ್ಷಣೆ ಮಾಡಲಾಗಿದೆ.
ಈ ಯೋಜನೆಯನ್ನು ಹಬ್ ಮತ್ತು ಸ್ಟೋಕ್ ಮಾದರಿಯಲ್ಲಿ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರ್ಕಾರಿ ಆಸ್ಪತ್ರೆಗಳನ್ನು ಸ್ಟೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಎದೆನೋವು ಕಾಣಿಸಿಕೊಂಡವರು ಸ್ಟೋಕ್ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ 6 ನಿಮಷದೊಳಗೆ ಅವರ ಸ್ಥಿತಿ ಹೇಗಿದೆ ಎಂಬುದನ್ನು ಎಐ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುವುದು. ಎದೆನೋವು ಕಾಣಿಸಿಕೊಂಡವರಿಗೆ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮುನ್ಸೂಚನೆ ಇದ್ದರೆ ತಕ್ಷಣ ಮಾಹಿತಿ ನೀಡಿ ಚಿಕಿತ್ಸೆಗೆ ನೆರವಾಗುತ್ತಾರೆ.
25,000 ರೂಪಾಯಿ ವೆಚ್ಚದ ಈ ಇಂಜೆಕ್ಷನ್ ಹೃದಯಾಘಾತದ ಸಮಯದಲ್ಲಿ ಅತ್ಯಮೂಲ್ಯವಾಗಿದ್ದು ಇದನ್ನು ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡಲಾಗುತ್ತಿದೆ. ಇಷ್ಟಲ್ಲದೆ ಈ ವರೆಗೆ ಸುಮಾರು 11,000 ಜನರಲ್ಲಿ ಗಂಭೀರ ಹೃದಯ ರೋಗಗಳನ್ನು ಪತ್ತೆ ಹಚ್ಚಲಾಗಿದೆ.
ಈ ಯೋಜನೆಯು 2 ಹಂತಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು ಒಟ್ಟು 16 ಜಿಲ್ಲೆಗಳ 70 ತಾಲೂಕು ಆಸ್ಪತ್ರೆಗಳಲ್ಲಿ ಜಾರಿಯಾಗಿದೆ. ಇನ್ನು 3 ಮತ್ತು 4 ನೇ ಹಂತಗಳಲ್ಲಿ ಉಳಿದ 15 ಜಿಲ್ಲೆಗಳ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.