ಬೆಂಗಳೂರು: “ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷರಾದ ವಿ.ಆರ್ ಸುದರ್ಶನ್, ಮಾಜಿ ಸದಸ್ಯ ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರು ಸೋಮವಾರ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ರಾಮೋಜಿ ಗೌಡರು ಸ್ಪರ್ಧಿಸಿದ್ದಾರೆ. ಈ ಬಾರಿ ಅವರು ಮೊದಲ ಸ್ಥಾನ ಪಡೆಯುವ ವಿಶ್ವಾಸವಿದೆ. ವಿರೋಧ ಪಕ್ಷದವರಿಗೆ ಇದನ್ನು ಅರಗಿಸಿಕೊಳ್ಳಲಾಗದೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸಾಮಾನ್ಯವಾಗಿ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಿರಲಿಲ್ಲ. ಇತ್ತೀಚೆಗೆ ಮಧು ಮಾದೇಗೌಡರು, ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಈಗ ಮೂರು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಆರಕ್ಕೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಪ್ರಜ್ಞಾವಂತ ಪದವೀಧರರು ಹಾಗೂ ಶಿಕ್ಷಕರು ಈಗ ಕಾಂಗ್ರೆಸ್ ಪರವಾಗಿ ನಿಲ್ಲುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗೆ ಸ್ಪಂದಿಸದ ಕಾರಣ ಅವರು ಬಿಜೆಪಿಯಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಹೊಂದಿದ್ದು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ್ದೇವೆ. ಬಿಜೆಪಿ ಬುರುಡೆ ಪಕ್ಷ, ಸುಳ್ಳು ಹೇಳುತ್ತಾರೆ. ವಚನಭ್ರಷ್ಟರು ಎಂದು ಅವರಿಗೆ ಅರಿವಾಗಿದೆ. 2018ರಲ್ಲಿ ಬಿಜೆಪಿ 600 ಆಶ್ವಾಸನೆ ಕೊಟ್ಟು ಈಡೇರಿಸಿದ್ದು ಕೇವಲ 50 ಮಾತ್ರ ಎಂದು ಹೇಳಿದರು.
ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು, ಏನಾದರೂ ಮಾಡಿ ಕೆಟ್ಟಹೆಸರು ತರಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ರಾಮೋಜಿಗೌಡರ ಕುಟುಂಬ ಹಾಗೂ ಪೂರ್ವಜರು ನೂರಾರು ವರ್ಷಗಳಿಂದ ಕೋಲಾರದಲ್ಲೇ ಇದ್ದಾರೆ. ಕೈಲಾಗದವರ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು. ಅದನ್ನೇ ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ನಮ್ಮ ಪಕ್ಷ ಒಪಿಎಸ್, 7ನೇ ವೇತನ ಆಯೋಗದ ವಿಚಾರದಲ್ಲಿ ಸ್ಪಷ್ಟತೆ ಹೊಂದಿದೆ. ಹೀಗಾಗಿ ಪದವೀಧರರು ಹಾಗೂ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳಾದ ರಾಮೋಜಿಗೌಡರು, ಡಾ.ಕೆ.ಕೆ ಮಂಜುನಾಥ್ ಕುಮಾರ್, ಮರಿತಿಬ್ಬೇಗೌಡರು, ಶ್ರೀನಿವಾಸ್, ಆಯನೂರು ಮಂಜುನಾಥ್, ಚಂದ್ರಶೇಖರ್ ಪಾಟೀಲ್ ಅವರಿಗೆ ಮತ ಹಾಕಬೇಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು.
BREAKING : ಮಹಿಳೆ ಕಿಡ್ನಾಪ್ ಕೇಸ್ : ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ
BREAKING: ಮುಂಬೈ ಪೊಲೀಸರಿಗೆ ತಾಜ್ ಹೋಟೆಲ್, ವಿಮಾನ ನಿಲ್ದಾಣ ಸ್ಫೋಟಿಸೋದಾಗಿ ಬಾಂಬ್ ಬೆದರಿಕೆ ಕರೆ