ಶಿವಮೊಗ್ಗ: ವಿದ್ಯಾರ್ಥಿಯ ಸಂಪೂರ್ಣ ವಿವರವುಳ್ಳ ‘ಅಪಾರ್’ ಯುನಿಕ್ ಗುರುತಿನ ಚೀಟಿ ಪಡೆಯಲು ಹಾಗೂ ಇತರೆ ಸೇವೆ-ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಆಧಾರ್ ಏಕರೂಪತೆ ಅತಿ ಅವಶ್ಯಕವಾಗಿರುವುದರಿಂದ ವಿದ್ಯಾರ್ಥಿಗಳ ಬೃಹತ್ ಆಧಾರ್ ತಿದ್ದುಪಡಿ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಸಿಇಓ ಹೇಮಂತ್ ಎನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಎಸ್‌ಸಿ ಸರ್ವೀಸಸ್ ಇಂಡಿಯಾ ಲಿಮಿಟೆಡ್, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಾಚಿನಕಟ್ಟೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಮಾಹಿತಿಯು ಶಾಲೆಗಳಲ್ಲಿ ಹಾಗೂ ಆಧಾರ್ ಕಾರ್ಡ್ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು, ತಂದೆ ಹೆಸರು, ಇತರೆ ಮಾಹಿತಿ ವ್ಯತ್ಯಾಸ ಇರಬಾರದು. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆಧಾರ್ ತಿದ್ದುಪಡಿ ಅನುಕೂಲಕಾರಿಯೂ ಆಗಿರುತ್ತದೆ.
ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಎಲ್ಲ ವಿವರಗಳುಳ್ಳ ಯುನಿಕ್ ಗುರುತಿನ ಚೀಟಿಯಾದ ‘ಅಪಾರ್’ ನ್ನು ನೀಡುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಸಕಲ ಮಾಹಿತಿ ಲಭ್ಯವಾಗಲಿದೆ. ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆ, ಬೇರೆ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವ ಸಂದರ್ಭ ಒದಗಿ ಬಂದಾಗ ಈ ಅಪಾರ್ ಕಾರ್ಡ್ ಅನುಕೂಲವಾಗುತ್ತದೆ. ಒಂದು ಬಾರಿ ಈ ಕಾರ್ಡ್ನಲ್ಲಿ ಶಾಲಾ ದಾಖಲಾತಿಗಳಾದ ವರ್ಗಾವಣೆ ಪ್ರಮಾಣ ಪತ್ರ, ಅಂಕಪಟ್ಟಿಗಳು ಅಪ್‌ಲೋಡ್ ಮಾಡಿದರೆ ಸಾಕು ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಂಡರೂ ಈ ಕಾರ್ಡ್ ಮೂಲಕ ಸುಲಭವಾಗಿ ತಮ್ಮ ಮೂಲ ದಾಖಲಾತಿಗಳು ಪಡೆಯಬಹುದು. ಈ ಅಪಾರ್ ನೋಂದಣಿ ಮಾಡಲು ಆಧಾರ್ ಮತ್ತು ಶಾಲಾ ದಾಖಲಾತಿ ಏಕರೂಪದಲ್ಲಿ ಇರಬೇಕು. ಹಾಗೂ ಸ್ಯಾಟ್ಸ್ ಸೇರಿದಂತೆ ಇತರೆ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಹಾಗೂ ಶಾಲಾ ಮಾಹಿತಿ ಏಕರೂಪದಲ್ಲಿರಬೇಕು. ಈ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮವಾಗಿ ಈ ಅಭಿಯಾನ ಆರಂಭಗೊAಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು.
ತಾಲ್ಲೂಕಿನ ಸುಮಾರು 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮಾಹಿತಿಯನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರದಿಂದ 5 ಜನರ ತಂಡ ಆಗಮಿಸಿದ್ದು ಈ ಕೆಲಸ ನಿರ್ವಹಿಸಲಿದೆ ಎಂದ ಅವರು ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳು ಈಗಿನಿಂದಲೇ ಪರಿಶ್ರಮದಿಂದ ಓದಿ, ಉತ್ತಮ ಅಂಕಗಳೊAದಿಗೆ ಉತ್ತಮ ಫಲಿತಾಂಶ ಪಡೆಯಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಮುಂದೆ ಬರಬೇಕೆಂದು ಹಾರೈಸಿದರು.
ಶಿವಮೊಗ್ಗ ಬಿಇಓ ರಮೇಶ್ ಸ್ವಾಗತಿಸಿ ಮಾತನಾಡಿ, ಶಿವಮೊಗ್ಗ ತಾಲ್ಲೂಕಿನಲ್ಲಿ ಸುಮಾರು 90 ಸಾವಿರ ವಿದ್ಯಾಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮಾಹಿತಿಯು ಶಾಲೆಗಳಲ್ಲಿ ಹಾಗೂ ಆಧಾರ್ ಕಾರ್ಡ್ನಲ್ಲಿ ಏಕರೂಪದಲ್ಲಿರುವುದು ಕಡ್ಡಾಯವಾಗಿದ್ದು ವಿದ್ಯಾರ್ಥಿಗಳ ಮಾಹಿತಿಯನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಇದರಿಂದ ವಿದ್ಯಾರ್ಥಿಗಳು ಅಪಾರ್ ಐಡಿ, ಇತರೆ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
ಆಂದೋಲನವನ್ನು ವೇಳಾಪಟ್ಟಿಯನ್ವಯ ತಾಲ್ಲೂಕಿನ 32 ಕ್ಲಸ್ಟರ್‌ವಾರು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಸಂಖ್ಯಾನುಸಾರ ಸಮೀಪದ ಶಾಲೆಗಳಲ್ಲಿ ತಿದ್ದುಪಡಿ ಮಾಡುವ ಕಾರ್ಯ ಯೋಜನೆ ರೂಪಿಸಲಾಗಿದೆ. ಆ ಮೂಲಕ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಮಾಡುವ ಗುರಿ ಹೊಂದಲಾಗಿದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳ ಆಧಾರ್‌ನ ಮಾಹಿತಿ ಶಾಲಾ ಮಾಹಿತಿಗಳು ಏಕರೂಪವಾಗಿಸುವ ಮೂಲಕ ಶಾಶ್ವತ ಪರಿಹಾರ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ. ಈ ಪ್ರಕ್ರಿಯೆಯಲ್ಲಿ ಶಾಲಾವಾರು ಅನ್ವಯಿಸಲ್ಪಡುವ ವಿದ್ಯಾರ್ಥಿಗಳ ಪೋಷಕರಿಂದ ಲಿಖಿತ ಅನುಮತಿ ಪಡೆಯುವ ಮೂಲಕ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಮಾಡಲಾಗುವುದು. ಆಧಾರ್ ತಿದ್ದುಪಡಿಗೆ ರೂ.100 ಮತ್ತು ಅಪ್ ಡೇಟ್ ಮಾಡಲು ರೂ.50 ಶುಲ್ಕವಿರುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಆಧಾರ್ ಮತ್ತು ಶಾಲಾ ಮಾಹಿತಿ ಏಕರೂಪಗೊಳಿಸಲು ಆಧಾರ್ ತಿದ್ದುಪಡಿ ಆಂದೋಲನ ಏರ್ಪಡಿಸಿದ್ದು ಅವಶ್ಯಕತೆ ಇರುವ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಸಿಎಸ್‌ಸಿ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಮಂಜುನಾಥ್ ರೋಣದ್, ಶಿಕ್ಷಣ ಅಧಿಕಾರಿ ನಿರಂಜನಮೂರ್ತಿ, ಕಾಚಿನಕಟ್ಟೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಂಡರಿನಾಥ್, ಸಹ ಶಿಕ್ಷಕರಾದ ಅಶೋಕ್, ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.