ಬೆಂಗಳೂರು: ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ, ಉದ್ಯೋಗ ನೀಡಲು ಉದ್ಯೋಗದಾತರು ಮುಂದಾಗಿದ್ದಾರೆ. ಸುಮಾರು 75 ಸಾವಿರಕ್ಕೂ ಹೆಚ್ಚು ಯುವ ಉದ್ಯೋಗ ಆಕಾಂಕ್ಷಿಗಳು ಯುವ ಸಮೃದ್ಧಿ ಬೃಹತ್ ಉದ್ಯೋಗ ಮೇಳ-2024 ಕ್ಕೆ ಆನ್‍ಲೈನ್‍ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಈ ಸಮ್ಮೇಳನದಲ್ಲಿ ಸುಮಾರು 600 ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ವತಿಯಿಂದ ಇಂದು ಅರಮನೆ ಮೈದಾನ, ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024ರ ಉದ್ಘಾಟನೆ ಹಾಗೂ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳದ ಲಾಂಛನ ಲೋಕಾರ್ಪಣೆ ಮಾಡಿ ಮಾತನಾಡಿದರು.
ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಫೆಬ್ರವರಿ 26 ಮತ್ತು 27 ರಂದು ಆಯೋಜಿಸಿದೆ. ನಿರುದ್ಯೋಗ ಒಂದು ದೊಡ್ಡ ಸಮಸ್ಯೆಯಾಗಿದ್ದು, ಪ್ರತಿ ವರ್ಷ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. 2014-15 ರಲ್ಲಿ ಶೇ.2.1 ರಷ್ಟಿದ್ದ ನಿರುದ್ಯೋಗ ಸಮಸ್ಯೆ ಇಂದು ಶೇ. 8.40ರಷ್ಟು ಹೆಚ್ಚಾಗಿದ್ದು, ಬೃಹದಾಕಾರದ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಇಂದು ಉದ್ಯೋಗ ಸೃಷ್ಟಿ ಮಾಡಿ, ಉದ್ಯೋಗ ಕೊಡದೆ ಇದ್ದರೆ, ಯುವಜನತೆ ಈ ದೇಶದಲ್ಲಿ ನಿರುದ್ಯೋಗಿಗಳಾಗುತ್ತಾರೆ. ದೇಶದ ಸಂಪತ್ತು ಉತ್ಪನ್ನ ಮಾಡುವ ಯುವ ಜನತೆ ನಿರುಪಯುಕ್ತರಾಗುತ್ತಾರೆ ಎಂದರು.
ಸರ್ಕಾರ ಉದ್ಯೋಗ ಸೃಜನೆ ಮಾಡಬೇಕು, ಉದ್ಯೋಗ ಬಯಸುವವರಿಗೆ ಉದ್ಯೋಗ ನೀಡಬೇಕು ಎನ್ನುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ವರ್ಷ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ಕಲಿಕೆ ಜೊತೆಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಭಾರತದ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಇಲಾಖೆ ಇರುವುದಿಲ್ಲ. 2016 ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಈ ಇಲಾಖೆಯನ್ನು ಪ್ರಾರಂಭಿಸಿ, ಮಾನವ ಸಂಪನ್ಮೂಲ ಒದಗಿಸುವುದರೊಂದಿಗೆ ಬೇಡಿಕೆ ಆಧಾರಿತ ಮಾನವ ಸಂಪನ್ಮೂಲವನ್ನು ಒದಗಿಸುವ ಕಾರ್ಯವ£ನ್ನು ಜಾರಿಗೊಳಿಸಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲ್ಯಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.
ಯುವ ಸಮೃದ್ಧಿ ಸಮ್ಮೇಳನದ ಮೂಲಕ ವಿಶೇಷ ಚೇತನರಿಗೂ ವಿಶೇಷವಾಗಿ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡಲಾಗುತ್ತಿದ್ದು, ಅವರಿಗೆ ಪ್ರತ್ಯೇಕ ಪ್ರವೇಶ ದ್ವಾರ, ಪ್ರತ್ಯೇಕ ಪಥ, ಶೌಚಾಲಯದ ವ್ಯವಸ್ಥೆ ಹಾಗೂ ವಿಶೇಷ ಸಾರಿಗೆ ವ್ಯವಸ್ಥೆ ಮತ್ತು ಉಪಹಾರ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಪಹಾರ ವ್ಯವಸ್ಥೆ ಮತ್ತು ಉದ್ಯೋಗ ಮೇಳ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಂಗಳೂರಿನ ನಿರ್ದಿಷ್ಟ ಬಸ್ ನಿಲ್ದಾಣದ ಪ್ರದೇಶಗಳಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಭ್ಯರ್ಥಿಗಳಿಗೆ ಯಾವುದೇ ನೊಂದಣಿ ಶುಲ್ಕವಿರುವುದಿಲ್ಲ. ಭಾಗವಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಜ್ಯದ ಯುವಜನರಿಗೆ ಬೆಂಬಲ ನೀಡಲು ಸರ್ಕಾರ ನಿಮ್ಮ ಜೊತೆ ಇದೆ. ಬಡ ಜನರಿಗೆ ಅರ್ಜಿ ಹಾಕಲು ಹಣವಿರುವುದಿಲ್ಲ ಎಂದು ಯುವ ನಿಧಿ ಯೋಜನೆ ಜಾರಿಗೊಳಿಸಲಾಗಿದೆ. 2022-23ರಲ್ಲಿ ತೇರ್ಗಡೆ ಹೊಂದಿರುವ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1,500 ಹಾಗೂ ಪದವೀಧರರಿಗೆ 3 ಸಾವಿರ ರೂ. ಗಳನ್ನು ಎರಡು ವರ್ಷದ ಅವಧಿಯವರೆಗೆ ಮಾಹೆಯಾನ ನೀಡಲಾಗುತ್ತಿದೆ. ಈ ವರೆಗೆ ನೊಂದಾಯಿಸಿರುವ ಸುಮಾರು 1 ಲಕ್ಷದ 40 ಸಾವಿರ ವಿದ್ಯಾರ್ಥಿಗಳಿಗೆ ಹಣ ಸಂದಾಯವಾಗುತ್ತಿದೆ ಎಂದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ ಅವರು ಪ್ರಾಸ್ತವಿಕ ಮಾತನಾಡಿ, ಯುವ ಪೀಳಿಗೆಗೆ ಭದ್ರತೆ ನೀಡಲು, ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸರ್ಕಾರ ನಿಮ್ಮ ಜೊತೆಗಿದ್ದು, ಈ ಯುವ ಸಮೃದ್ಧಿ ಉದ್ಯೋಗ ಮೇಳದ ಮೂಲಕ ಎಲ್ಲಾ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಒಳಗೊಂಡಂತೆ ಉದ್ಯೋಗವಕಾಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಉದ್ಯಮಿಗಳಿಂದಲೇ ನೇಮಕಾತಿ ಪ್ರಕ್ರಿಯೆಯು ನಡೆಯುವುದರಿಂದ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದರು.
ಉದ್ಯೋಗಕ್ಕಾಗಿ 5 ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗದವರಿಗೆ, ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಸಿಗುವವರೆಗೆ ನಿಮ್ಮ ಸಂಪರ್ಕದಲ್ಲಿರುತ್ತೇವೆ. ಬಜೆಟ್‍ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಆದ್ಯತರ ನೀಡಿದ್ದು, ರಾಜ್ಯದ ಯುವ ಜನರನ್ನು ಸದೃಢಗೊಳಿಸಲು ಸರ್ಕಾರ ನಿಮ್ಮ ಜೊತೆಗಿದೆ ಎಂದರು.
ಉದ್ಯೋಗಮೇಳಕ್ಕೆ ಸಂಬಂಧಿಸಿದಂತೆ https://udyogamela.skillconnect.kaushalkar.com ಎಂಬ ಪ್ರತ್ಯೇಕ ಪೋರ್ಟಲ್ ಸ್ಥಾಪಿಸಲಾಗಿದೆ. ಅಧಿಕೃತ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 18005999918 ನ್ನು ಸಂಪರ್ಕಿಸಬಹುದು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧ ಮತ್ತು ಪಂಚಾಶಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಉಮಾಮಹದೇವನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕನಗವಲ್ಲಿ, ಹಿರಿಯ ಅಧಿಕಾರಿಗಳು ಹಾಗೂ ಉದ್ಯೋಗಾಂಕ್ಷಿಗಳು ಉಪಸ್ಥಿತರಿದ್ದರು