ಬೆಂಗಳೂರು: ಡಿಜಿಟಲ್ ಉಪಕರಣಗಳಿಂದ ಮಕ್ಕಳ ಮನಸ್ಸು ಕಲುಶಿತವಾಗದಂತೆ ಎಚ್ಚರವಹಿಸಿ, ಅವರಿಗೆ ಆರೋಗ್ಯಕರ ಭವಿಷ್ಯ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ತಿಳಿಸಿದರು.
ಅವರು ಇಂದು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚನ್ಯಾಯಾಲಯ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ “ಆನ್‍ಲೈನ್‍ನಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳು ಮತ್ತು ಮಕ್ಕಳ ಸಾಕ್ಷರತೆ’ ಕುರಿತು ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದರು.
ಪ್ರಸ್ತುತ ಮೊಬೈಲ್, ಇಂಟರ್‍ನೆಟ್‍ನಿಂದ ಮಕ್ಕಳು ಹೊರಜಗತ್ತಿಗೆ ಸುಲಭವಾಗಿ ಸಂಪರ್ಕ ಹೊಂದಬಲ್ಲವರಾಗಿದ್ದಾರೆ. ಅವರಿಗೆ ಈ ಡಿಜಿಟಲ್ ಉಪಕರಣಗಳ ಬಗ್ಗೆ ಕುತೂಹಲ, ಆಸಕ್ತಿ ಹಾಗೂ ಅವಲಂಬನೆ ಹೆಚ್ಚಾಗುತ್ತದೆ. ಅವುಗಳಲ್ಲಿ ಎಷ್ಟು ಸಕಾರಾತ್ಮಕ ಅಂಶಗಳಿವೆಯೋ ಅಷ್ಟೇ ನಕಾರಾತ್ಮಕ ಅಂಶಗಳು ಸಹ ನಮಗೆ ಕಾಣಸಿಗುತ್ತವೆ. ಅವು ನಮ್ಮ ಆಲೋಚನೆ, ಬುದ್ಧಿವಂತಿಕೆಯನ್ನು ಕೆಲವೊಮ್ಮೆ ಬೇರೆಡೆಗೆ ಕೊಂಡೊಯ್ಯುತ್ತದೆ. ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಜೀವನಶೈಲಿ ಬದಲಾಗಿ ಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸುವುದು ಸಹ ಕಡೆಮೆಯಾಗುತ್ತಿದೆ. ಕಲಿಕೆ ಕೇವಲ ಮಾಹಿತಿ ಪಡೆಯುವುದಲ್ಲ, ಇದಕ್ಕೆ ತನ್ನದೇ ಆದ ಸವಾಲುಗಳಿವೆ. ಮೊಬೈಲ್ ಬಳಕೆಯಲ್ಲಿ ಕೇವಲ ಕಲಿಕೆಗಷ್ಟೇ ಬಳಸಿಕೊಂಡರೆ ಮಕ್ಕಳ ಭವಿಷ್ಯ ಉತ್ತಮವಾಗುವುದು. ಬಿಡುವಿನ ವೇಳೆಯಲ್ಲಿ ಅವರು ಆಟ, ಸಹಪಾಠಿಗಳ ಒಡನಾಟ, ಪರಿಸರ, ಪ್ರಕೃತಿಯ ಬಾಂಧವ್ಯ ಇನ್ನಿತರ ಚಟುವಟಿಕೆಗಳನ್ನು ಇಟ್ಟುಕೊಂಡರೆ ಅವರು ಮನಸ್ಸು, ಆರೋಗ್ಯ ಉತ್ತಮವಾಗಿರುತ್ತದೆ. ಈ ಸ್ಮಾರ್ಟ್ ಫೋನ್‍ಗಳು ಅವರ ದಾಸರನ್ನಾಗಿ ಮಾಡುವುದನ್ನು ನಾವು ಆರಂಭದಲ್ಲೇ ತಪ್ಪಿಸಿ ಅವರಿಗೆ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆಯಲು ನಾವು ಪ್ರೋತ್ಸಾಹಿಬೇಕು ಎಂದರು.
ಉಚ್ಛ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಬಾಲ ನ್ಯಾಯ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕೆ.ಎಸ್. ಮುದಗಲ್ ಮಾತನಾಡಿ, ಎಲ್ಲರ ಜೀವನದಲ್ಲಿ ಸ್ಮಾರ್ಟ್ ಫೋನ್‍ಗಳು ಮುಖ್ಯ ಪಾತ್ರವಹಿಸುತ್ತಿವೆ. ಅದರಲ್ಲೂ ಹಲವು ಮಕ್ಕಳು ಇದರ ಬಳಕೆಯನ್ನು ಚಟವನ್ನಾಗಿಸಿಕೊಂಡಿದ್ದಾರೆ. ಮಕ್ಕಳಿಗೆ ಸುರಕ್ಷಿತ ಆನ್‍ಲೈನ್ ಪ್ರಪಂಚ ಸೃಷ್ಠಿಸುವುದು ನಮ್ಮೆಲ್ಲರ ಸವಾಲಾಗಿದೆ. ಇಂಟರ್‍ನೆಟ್‍ನಲ್ಲಿ ಅಪಾಯಕಾರಿ ಕ್ರೈಂ, ಅಶ್ಲೀಲ ವಿಷಯಗಳು ಸಹ ಇರುವುದುರಿಂದ ಇವುಗಳ ಬಳಕೆಯನ್ನು ಇತಿಮಿತಿಯನ್ನು ಮಾಡುವುದರ ಬಗ್ಗೆ ಮಕ್ಕಳಿಗೆ ನಾವು ತಿಳಿಹೇಳಬೇಕು.
2021-22 ರಲ್ಲಿ ಇಂಟರ್‍ನೆಟ್ ಬಳಕೆಯಿಂದ ಅಪರಾಧ ಪ್ರಕರಣಗಳು ಶೇ. 9 ರಷ್ಟು ಹೆಚ್ಚಿದೆ. ಮಕ್ಕಳಲ್ಲಿ ಸೈಬರ್ ಅಪರಾಧ ಸಹ ಹೆಚ್ಚುತ್ತಿದೆ. ಮಕ್ಕಳು ತಮ್ಮ ಕಲಿಕೆಯಲ್ಲಿ ಈ ಡಿಜಿಟಲ್ ಉಪಕರಣಗಳನ್ನು ಹೇಗೆ ಬಳಕೆ ಮಾಡಬೇಕೆಂದು ಅವರ ಕುಟುಂಬದವರು, ಶಿಕ್ಷಕರು ತಿಳಿಸಿಕೊಡಬೇಕು. ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ನಡೆಸಿ ಅವರನ್ನು ಸಶಕ್ತಗೊಳಿಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಮಾತನಾಡಿ, ಪರಿಸರ, ನೀರು ಮತ್ತು ಮಕ್ಕಳು ನಮ್ಮ ದೇಶದ ಆಸ್ತಿ. ಇತ್ತೀಚೆಗೆ ಮಕ್ಕಳು ಸೈಬರ್ ಅಪರಾಧ, ಡ್ರಗ್ಸ್ ಬಳಕೆ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಮೊಬೈಲ್ ದುಶ್ಚಟದಿಂದ ತಮ್ಮ ಭವಿಷ್ಯವನ್ನೇ ನಾಶ ಪಡಿಸಿಕೊಳ್ಳುತ್ತಿದ್ದಾರೆ. ಇವುಗಳ ಬಳಕೆಯು ಸಕಾರಾತ್ಮಕ ಅಂಶಗಳನ್ನು ನಾವು ಮಕ್ಕಳಿಗೆ ಕಲಿಸಬೇಕು. ಅವರನ್ನು ಮುಖ್ಯ ವಾಹಿನಿಗೆ ತರಲು ಉತ್ತೇಜಿಸಬೇಕು. ಮಕ್ಕಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಒಳ್ಳೆಯ ಪ್ರಜೆಯನ್ನಾಗಿಸುವುದು ನಮ್ಮ ಕರ್ತವ್ಯವೆಂದು ಅವರು ತಿಳಿಸಿದರು.
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇಂದು ನಾವು ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕರ್ನಾಟಕದಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ತರುವಲ್ಲಿ ಉತ್ತಮ ಬೆಳವಣಿಗೆಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಸಕ್ರಿಯರಾಗಿರುವುದು ಪ್ರಯೋಜನದಷ್ಟೇ ಅಪಾಯ ಸಹ ಕಾಣುತ್ತಿದೆ. ಮಕ್ಕಳು ಜಾಲತಾಣಗಳಲ್ಲಿ ನÀಕಾರಾತ್ಮಕ ಅಂಶಗಳಿಗೆ ಸ್ಪಂದಿಸಿದರೆ ಖಿನ್ನತೆ ಸಹ ಪ್ರಾರಂಭವಾಗುತ್ತದೆ. ಅವರಿಗೆ ಒಳ್ಳೆಯ ಶಿಕ್ಷಣ, ಸ್ಪರ್ಧಾ ಮನೋಭಾವ, ಚಿಂತನಾ ಜಗತ್ತಿಗೆ ಪರಿಚಯಿಸಿದರೆ ಉತ್ತಮ ಪ್ರಜೆಗಳಾಗುವುದರಲ್ಲಿ ಸಂದೇಹÀವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಪ್ರಕಾಶ್ ಜಿ.ಸಿ., ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಸೋಮಶೇಖರ್ ಉಪಸ್ಥಿತರಿದ್ದರು.