ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ಭಾರತ್ ಮಂಟಪದಲ್ಲಿ ದೇಶದ ಅತಿದೊಡ್ಡ ಮತ್ತು ಮೊದಲ ರೀತಿಯ ‘ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2024’ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗುರುವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಇಡೀ ಸಾರಿಗೆ-ಸಂಪರ್ಕ ಮತ್ತು ವಾಹನ ಉದ್ಯಮವು ಮೌಲ್ಯ ಸರಪಳಿಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಪ್ರದರ್ಶನಗಳು, ಸಮ್ಮೇಳನಗಳು, ಖರೀದಿದಾರ-ಮಾರಾಟಗಾರರ ಸಭೆಗಳು, ರಾಜ್ಯ ಅಧಿವೇಶನಗಳು, ರಸ್ತೆ ಸುರಕ್ಷತಾ ಪೆವಿಲಿಯನ್ ಗಳು ಮತ್ತು ಗೋ-ಕಾರ್ಟಿಂಗ್ ನಂತಹ ಜನ ಕೇಂದ್ರಿತ ಆಕರ್ಷಣೆಗಳನ್ನು ಎಕ್ಸ್ ಪೋ ಒಳಗೊಂಡಿದೆ. 50 ಕ್ಕೂ ಹೆಚ್ಚು ದೇಶಗಳ 800 ಕ್ಕೂ ಹೆಚ್ಚು ಪ್ರದರ್ಶನ-ಸಂಘಟಕರನ್ನು ಹೊಂದಿರುವ ಎಕ್ಸ್ ಪೋ ಅತ್ಯಾಧುನಿಕ ತಂತ್ರಜ್ಞಾನಗಳು, ಸುಸ್ಥಿರ ಪರಿಹಾರಗಳು ಮತ್ತು ಸಾರಿಗೆಯ ಹೊಸ ತಂತ್ರಜ್ಞಾನಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ಎಕ್ಸ್ ಪೋದಲ್ಲಿ 600 ಕ್ಕೂ ಹೆಚ್ಚು ವಾಹನ ಬಿಡಿಭಾಗಗಳ ತಯಾರಕರ ಜೊತೆಗೆ 28 ಕ್ಕೂ ಹೆಚ್ಚು ವಾಹನ ತಯಾರಕರು ಭಾಗವಹಿಸಲಿದ್ದಾರೆ. 13 ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಗಳಿಂದ 1000 ಕ್ಕೂ ಹೆಚ್ಚು ಬ್ರಾಂಡ್ ಗಳು ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಸೇವೆಗಳ ಪೂರ್ಣ ಶ್ರೇಣಿಯನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿವೆ. ಈ ಕಾರ್ಯಕ್ರಮವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರದರ್ಶನಗಳು ಮತ್ತು ಸಮ್ಮೇಳನಗಳನ್ನು ಸಹ ಒಳಗೊಂಡಿರುತ್ತದೆ ಎಂದು ಅದು ಹೇಳಿದೆ.