ಬೆಳಗಾವಿ ಸುವರ್ಣಸೌಧ : ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ನಿಯಮಗಳ ಸಡಿಲಿಕೆ ಕುರಿತು ಸದಸ್ಯರ ಮನವಿಗೆ ಸ್ಪಂದಿಸಿದ ಸರಕಾರ ಸದನ ಸಮಿತಿ ರಚಿಸಲು ನಿರ್ಧರಿಸಿದೆ.
ನವೀಕರಣ ನಿಯಮಗಳ ಸಡಿಲಿಕೆ ಕುರಿತಂತೆ ಸದರಿ ಸದನ ಸಮಿತಿ ನೀಡುವ ವರದಿ ಆಧರಿಸಿ ಶೀಘ್ರ ತಿರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸದನ ಸಮಿತಿ ರಚಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಪುಟ್ಟಣ್ಣ, ಶಶೀಲ್ ಜಿ. ನಮೋಶಿ, ಎಸ್.ವಿ. ಸಂಕನೂರ ಮತ್ತು ಎಸ್.ಎಲ್. ಭೋಜೇಗೌಡ ಅವರು ನಿಯಮ 330ರ ಮೇರೆಗೆ ಪ್ರಸ್ತಾಪಿಸಿದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ವಿಷಯದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವರು, ಪರಿಷತ್ತಿನ ಸದಸ್ಯರು ಪ್ರಸ್ತಾಪಿಸಿದಂತೆ, ಸದನ ಸಮಿತಿ ರಚಿಸಿ ಅನುಷ್ಠಾನಗೊಳಿಸುವವರೆಗೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು. ಕೂಡಲೇ ಸದನ ಸಮಿತಿ ರಚಿಸಿ, ಸಮಿತಿಯಿಂದ ಅಭಿಪ್ರಾಯ ಪಡೆದು ಅನುಷ್ಠಾನ ಮಾಡುವುದಾಗಿ ಸಚಿವರು ಹೇಳಿದರು.
ಶಾಲೆಗಳ ಮಾನ್ಯತೆ ನವೀಕರಣ ಆದೇಶದ ಮೇಲೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಇನ್ನೀತರರು ಹಣ ವಸೂಲಿಗೆ ಇಳಿದಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನಲೈನ್ ಮೂಲಕ ನಡೆಸಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಅದಾಗಿಯೂ ಈ ಆದೇಶದ ಮೇಲೆ ಯಾರಾದರೂ ಹಣ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಶಿಸ್ತುಕ್ರಮ ಜರುಗಿಸಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುತ್ತೇವೆ. ಭ್ರಷ್ಟಾಚಾರಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಸಚಿವರು ತಿಳಿಸಿದರು.
ಮಾನ್ಯತೆ ನವೀಕರಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಈಗ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಬೇಕು. ಕೂಡಲೇ ಸದನ ಸಮಿತಿ ರಚಿಸಿ ಪರಿಹಾರ ಕಲ್ಪಿಸಬೇಕು ಎಂದು ಪರಿಷತ್ ಸದಸ್ಯರಾದ ಪುಟ್ಟಣ್ಣ, ಶಶೀಲ್ ಜಿ. ನಮೋಶಿ, ಎಸ್.ವಿ. ಸಂಕನೂರ ಮತ್ತು ಎಸ್.ಎಲ್. ಭೋಜೇಗೌಡ ಇನ್ನೀತರರು ತಿಳಿಸಿದರು.
ಪರಿಷತ್ ಶಾಸಕರಾದ ರಾಮೋಜಿಗೌಡ, ರಮೇಶಬಾಬು, ನಿರಾಣಿ ಹನುಮಂತಪ್ಪ ರುದ್ರಪ್ಪ, ಕೆ ಅಬ್ದುಲ್ ಜಬ್ಬಾರ್, ಹೇಮಲತಾ ನಾಯಕ, ಡಾ.ಧನಂಜಯ ಸರ್ಜಿ, ಬಲ್ಕಿಸ್ ಬಾನು ಅವರು ಚರ್ಚೆಯಲ್ಲಿ ಭಾಗಿಯಾಗಿ ಸದನ ಸಮಿತಿ ರಚಿಸಲು ಒತ್ತಾಯ ಮಾಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಖಾಸಗೀಕರಣ ಇಲ್ಲ; ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಮಕ್ಕಳಿಗೆ ಭಗವದ್ಗೀತೆ ಕಲಿಸಿ ಎನ್ನುವುದು ಮಹಾನ್ ಅಪರಾಧವೇ?: ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು








