ನವದೆಹಲಿ: ಜನವರಿ 21ರೊಳಗೆ ಬಿಲ್ಕಿಸ್ ಬಾನು ಪ್ರಕರಣದ ಶರಣಾಗುವಂತೆ ಎಲ್ಲ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಶರಣಾಗುವ ಸಮಯವನ್ನು ವಿಸ್ತರಿಸಲು ಭಾರತದ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅವರ ಅರ್ಜಿಯಲ್ಲಿ ಉಲ್ಲೇಖಿಸಲಾದ ಕಾರಣಗಳು ಎರಡು ವಾರಗಳಲ್ಲಿ ಶರಣಾಗುವಂತೆ ಜನವರಿ 8 ರ ಆದೇಶವನ್ನು ಅನುಸರಿಸಲು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪರಾಧಿಗಳು ಈಗ ಭಾನುವಾರದೊಳಗೆ ಶರಣಾಗಬೇಕಾಗುತ್ತದೆ. 2002ರಲ್ಲಿ ಗುಜರಾತ್ ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೋರಿ ಗುರುವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾದ್ದರು.
‘ಅನಾರೋಗ್ಯ’, ‘ಚಳಿಗಾಲದ ಬೆಳೆಗಳ ಕೊಯ್ಲು’ ಮತ್ತು ‘ಮಗನ ಮದುವೆ’ ಕಾರಣದಿಂದಾಗಿ ಅಪರಾಧಿಗಳು ಸಮಯವನ್ನು ವಿಸ್ತರಿಸಲು ಕೋರಿದ್ದರು. ಸಮಯವನ್ನು ವಿಸ್ತರಿಸುವಂತೆ ಕೋರಿದ ವಿಷಯವನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠದ ಮುಂದೆ ಗುರುವಾರ ಉಲ್ಲೇಖಿಸಲಾಯಿತು, ಅದು ಮನವಿಯನ್ನು ಸಿಜೆಐ ಮುಂದೆ ಇಡುವಂತೆ ರಿಜಿಸ್ಟ್ರಿಗೆ ಸೂಚಿಸಿತು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.