ನವದೆಹಲಿ: 60 ನ್ಯಾಯಬೆಲೆ ಅಂಗಡಿಗಳನ್ನು (ಎಫ್ಪಿಎಸ್) ಅಥವಾ ಪಡಿತರ ಅಂಗಡಿಗಳನ್ನು ‘ಜನ ಪೋಷಣ್ ಕೇಂದ್ರಗಳಾಗಿ’ ಮೇಲ್ದರ್ಜೆಗೇರಿಸುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಚಾಲನೆ ನೀಡಿದರು.
ಮುಂದಿನ 6 ತಿಂಗಳಲ್ಲಿ ಕನಿಷ್ಠ 1,000 ಮತ್ತು ವರ್ಷದಲ್ಲಿ 40,000-50,000 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸಚಿವಾಲಯ ಯೋಜಿಸಿದೆ. ಭಾರತದಾದ್ಯಂತ ಸರಿಸುಮಾರು 5.38 ಲಕ್ಷ ಎಫ್ಪಿಎಸ್ ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಾಯೋಗಿಕ ಅನುಷ್ಠಾನವು ಪಡಿತರ ಅಂಗಡಿ ಜಾಲದ ರಾಷ್ಟ್ರವ್ಯಾಪಿ ಪರಿವರ್ತನೆಗೆ ದಾರಿ ಮಾಡಿಕೊಡುತ್ತದೆ ಎಂದು ಜೋಶಿ ಹೇಳಿದರು.
ಪ್ರಾಯೋಗಿಕ ಯೋಜನೆಯು ಎಫ್ಪಿಎಸ್ ವಿತರಕರಿಗೆ ಸಬ್ಸಿಡಿ ಧಾನ್ಯಗಳನ್ನು ಮೀರಿ ತಮ್ಮ ದಾಸ್ತಾನುಗಳನ್ನು ವೈವಿಧ್ಯಗೊಳಿಸಲು ಮತ್ತು ಇದನ್ನು ಪೌಷ್ಠಿಕಾಂಶದ ಕೇಂದ್ರವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ನವೀಕರಿಸಿದ ಅಂಗಡಿಗಳು ಈಗ ರಾಗಿ, ಬೇಳೆಕಾಳುಗಳು, ಡೈರಿ ಉತ್ಪನ್ನಗಳು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಬಹುದು, ಇದು ವಿತರಕರಿಗೆ ಹೊಸ ಆದಾಯದ ಹರಿವನ್ನು ತೆರೆಯುತ್ತದೆ ಎನ್ನಲಾಗಿದೆ.
ಇದರೊಂದಿಗೆ, ಜೋಶಿ ‘ಮೇರಾ ರೇಷನ್’ ಅಪ್ಲಿಕೇಶನ್ನ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದರು ಮತ್ತು ಗುಣಮಟ್ಟದ ಕೈಪಿಡಿ, ಭಾರತೀಯ ಆಹಾರ ನಿಗಮದ (ಎಫ್ಸಿಐ) ಗುತ್ತಿಗೆ ಕೈಪಿಡಿ, ಡಿಜಿಟಲ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ಪ್ರಯೋಗಾಲಯಗಳ ಎನ್ಎಬಿಎಲ್ ಮಾನ್ಯತೆಯನ್ನು ಅನಾವರಣಗೊಳಿಸಿದರು.