ಗುರುಗ್ರಾಮದ ಹಿಮಾಂಶು ಜಂಗ್ರಾ ಎಂಬ ಯುವಕನೇ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿ ಕೆಲಸ ಕಳೆದುಕೊಂಡ ದುರ್ದೈವಿ.
ವಿವಾದಕ್ಕೆ ಕಾರಣವಾದ ಹೇಳಿಕೆ ಏನು?
ಕಾಮಿಡಿ ಶೋವೊಂದರಲ್ಲಿ ತನ್ನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದ ಹಿಮಾಂಶು, “ನಾನು ಇತ್ತೀಚೆಗೆ ಹುಡುಗಿಯೊಬ್ಬಳ ಜೊತೆ ಡೇಟ್‌ಗೆ ಹೋಗಿದ್ದೆ. ಅಲ್ಲಿ ಆಕೆಗೆ 370 ರೂಪಾಯಿ ನೀಡಿ ಚಿಕನ್ ಬಿರಿಯಾನಿ ಕೊಡಿಸಿದ್ದೆ. ಬಳಿಕ ಆಕೆ ತನ್ನನ್ನು ಮನೆಗೆ ಡ್ರಾಪ್ ಮಾಡಲು ಕೇಳಿಕೊಂಡಳು. ಇದು ನನಗೆ ಆಶ್ಚರ್ಯ ತಂದಿತು,” ಎಂದು ಹೇಳಿದ್ದ.
ಇಷ್ಟಕ್ಕೇ ನಿಲ್ಲಿಸದ ಆತ, “ನಾನು ಆಕೆಗಾಗಿ 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ಹೇಗಾದರೂ ಮಾಡಿ ವಸೂಲಿ ಮಾಡಲೇಬೇಕು” ಎಂಬ ಅರ್ಥ ಬರುವಂತೆ ಮಾತನಾಡಿದ್ದ. ಅಂದರೆ, ಹುಡುಗಿಗೆ ಬಿರಿಯಾನಿ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದುವ ನಿರೀಕ್ಷೆ ಇತ್ತು ಎಂಬ ಧಾಟಿಯಲ್ಲಿ ಆತ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ತೀವ್ರ ಆಕ್ರೋಶ:
ಈ ಕಾಮಿಡಿ ಶೋನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಿಮಾಂಶು ವಿರುದ್ಧ ಮುಗಿಬಿದ್ದಿದ್ದಾರೆ. ಆತನ ಮಾತುಗಳು ಮಹಿಳೆಯರ ಬಗ್ಗೆ ಇರುವ ಅತ್ಯಂತ ಕೀಳು ಮಟ್ಟದ ಮತ್ತು ಅಸಮಂಜಸ ಮನೋಭಾವವನ್ನು ತೋರಿಸುತ್ತದೆ ಎಂದು ಹಲವರು ಟೀಕಿಸಿದ್ದಾರೆ. ಮಹಿಳೆಯರು ಮಾತ್ರವಲ್ಲದೆ, ನೂರಾರು ಪುರುಷರೂ ಸಹ ಈ ಹೇಳಿಕೆಯನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಹಿಮಾಂಶು ಜಂಗ್ರಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಲ್ಲದೆ, ಸೋಷಿಯಲ್ ಮೀಡಿಯಾ ದಾಳಿಗೆ ಹೆದರಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಡೀಆ್ಯಕ್ಟಿವೇಟ್ ಮಾಡಿಕೊಂಡಿದ್ದ.
ಕೆಲಸದಿಂದ ವಜಾಗೊಳಿಸಿದ ಸಂಸ್ಥೆ:
ಆದರೆ, ಹಿಮಾಂಶು ಕ್ಷಮೆ ಕೇಳಿದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಪ್ರಸಿದ್ಧ ‘ಸಾತ್ವಿಕ್ ಡಿಸೈನ್’ (Satvik Design) ಸಂಸ್ಥೆ ಆತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಿದೆ.
ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸಂಸ್ಥೆಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮಾ, “ನಮ್ಮ ಸಂಸ್ಥೆಯು ಮಹಿಳೆಯರ ಗೌರವ ಮತ್ತು ಸಮಾನತೆಗೆ ಮೊದಲ ಆದ್ಯತೆ ನೀಡುತ್ತದೆ. ಇಂತಹ ಬೇಜವಾಬ್ದಾರಿ ಹಾಗೂ ಮಹಿಳಾ ವಿರೋಧಿ ಮನಸ್ಥಿತಿಯನ್ನು ಸಹಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ:
ಕಂಪನಿಯ ಈ ದಿಟ್ಟ ಕ್ರಮದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಈಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
-
ಒಂದು ವರ್ಗದ ಜನರ ವಾದ: “ಕಂಪನಿಯ ನಿರ್ಧಾರ ಸೂಕ್ತವಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರನ್ನು ಇಷ್ಟು ಕೀಳಾಗಿ ಬಿಂಬಿಸುವವರಿಗೆ ಇಂತಹ ಶಿಕ್ಷೆಯಾಗಲೇಬೇಕು,” ಎಂದು ಕಂಪನಿಯ ಕ್ರಮವನ್ನು ಸಮರ್ಥಿಸಿದ್ದಾರೆ.
-
ಮತ್ತೊಂದು ವರ್ಗದ ವಾದ: “ಆತ ಮಾಡಿದ್ದು ತಪ್ಪು ನಿಜ. ಆದರೆ ಈಗಾಗಲೇ ಸಾರ್ವಜನಿಕವಾಗಿ ಕ್ಷಮೆ ಕೇಳಿರುವುದರಿಂದ, ಆತನಿಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕಿತ್ತು. ನೇರವಾಗಿ ಕೆಲಸದಿಂದ ತೆಗೆದು ಜೀವನೋಪಾಯಕ್ಕೆ ಹೊಡೆತ ನೀಡುವುದು ಸರಿಯಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಕಾಮಿಡಿ ಹೆಸರಲ್ಲಿ ಸಿದ್ದಪಡಿಸಿದ ಕೀಳು ಮಟ್ಟದ ಜೋಕ್ ಯುವಕನೊಬ್ಬನ ವೃತ್ತಿಜೀವನಕ್ಕೆ ಕೊಳ್ಳಿ ಇಟ್ಟಿರುವುದಂತೂ ಸತ್ಯ.








