ಕೆಎನ್‌ಎನ್‌ಸಿನಿಮಾಡೆಸ್ಕ್‌: ಪ್ರಪಂಚದಲ್ಲಿ ಅದೆಷ್ಟೇ ಬಾರಿ ಡ್ರಗ್ಸ್ ವಿಚಾರದಲ್ಲಿ ಧ್ವನಿ ಎತ್ತಿದರು, ಪೊಲೀಸರು ಅದೆಷ್ಟೇ ಸೀರಿಯಸ್ ಆಗಿ ಅದರ ಬೆನ್ನು ಬಿದ್ದರು, ಆ ಕರಾಳ ಪ್ರಪಂಚದೊಳಗೆ ನುಸುಳುವಂತೆ ಮಾಡಿ ಬಿಡುತ್ತದೆ. ಒಂದೊಂದೇ ದಾರಿಯನ್ನು ಬಂದ್ ಮಾಡಿದರೂ, ಇನ್ಯಾವುದೋ ದಾರಿಯನ್ನು ತೆರೆದು ಬಿಡುತ್ತಾರೆ. ಇದೀಗ ಅದೇ ರೀತಿಯ ಕಥಾಹಂದರವನ್ನಿಟ್ಟುಕೊಂಡು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ ಯೆಲ್ಲೋ ಗ್ಯಾಂಗ್ಸ್.

ಹೆಸರಿನಲ್ಲಿಯೇ ಯಾವುದೋ ಮಾಫಿಯಾ ಕಥೆಯನ್ನು ಹೇಳಿದಂತಿದೆ. ಡ್ರಗ್ಸ್ ಮತ್ತು ಹಣ ಈ ಎರಡರ ಸುತ್ತ ಸುತ್ತುವ ಪ್ರಪಂಚವನ್ನು ಅತ್ಯದ್ಭುತವಾಗಿ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಸಂಪೂರ್ಣ ಮಾಡಿರುವುದಾಗಿ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಹೇಳಿದ್ದಾರೆ. ಒಳ್ಳೆ ಕಥೆಯನ್ನು ಒಡಲೊಳಗಿಟ್ಟುಕೊಂಡಿರುವ ಯೆಲ್ಲೋ ಗ್ಯಾಂಗ್ಸ್ ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಡ್ರಗ್ಸ್ ದಂಧೆ ಅಂದರೇನೆ ಹಾಗೇ. ಬಲಿಯಾಗಲು ಬಯಸದವರು ಬಲಿಯಾಗುತ್ತಾರೆ. ಸಂಬಂಧ ಪಡದವರು ಈ ಸುಳಿಯಲ್ಲಿ ಸಿಲುಕುತ್ತಾರೆ. ಅದರೊಂದಿಗೆ ಕಾಳಧನದ ವಿಚಾರವನ್ನಿಟ್ಟುಕೊಂಡು ಕ್ರೈಂ ಥ್ರಿಲ್ಲರ್ ಮಾದರಿಯಲ್ಲಿಯೇ ಸಿನಿಮಾವನ್ನು ಹೆಣೆಯಲಾಗಿದೆ. ಆದರೂ ಸಿನಿಮಾವನ್ನು ರೂಪಿಸಿರುವ ರೀತಿ ವಿಭಿನ್ನವಾಗಿದೆ. ಸಿನಿಮಾ ಪ್ರತಿ ಹಂತದಲ್ಲಿಯೂ ಕುತೂಹಲವನ್ನು ನೀಡುತ್ತಾ ಸಾಗುತ್ತದೆ. ಈ ಮೂಲಕ ಪಕ್ಕಾ ರಾ ಕಥೆ ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಸಿನಿಮಾದ ಎಳೆ ಎಳೆಯೂ ಪ್ರೇಕ್ಷಕನನ್ನು ಕಾಡುತ್ತಾ, ಕೊನೆವರೆಗೂ ನೋಡುವಂತೆ ಮಾಡುವ ಸ್ಟ್ರಾಂಗ್ ಎಲಿಮಿನೆಂಟ್ಸ್ ಯೆಲ್ಲೋ ಗ್ಯಾಂಗ್ ನಲ್ಲಿದೆ.

ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿವೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿಕೊಂಡಿರುವ ರವೀಂದ್ರ ಪರಮೇಶ್ವರಪ್ಪ ಯೆಲ್ಲೋ ಗ್ಯಾಂಗ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.

Share.
Exit mobile version