ನವದೆಹಲಿ: ಉತ್ತರ ಪ್ರದೇಶದ ಪ್ರತಿಷ್ಠಿತ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟರನ್ನು ಜೈಲಿಗೆ ಹಾಕಬೇಕು ಎಂದು ಬಿಜೆಪಿ ಹೇಳುತ್ತಿದ್ದರೂ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಯಕರು ಕೇಸರಿ ಪಕ್ಷಕ್ಕೆ ಸೇರಿದಾಗ, ಅವರನ್ನು ತೊಡೆಯ ಮೇಲೆ ಕೂರಿಸಿಕೊಂಡು ರಾಜ್ಯಸಭಾ ಅಥವಾ ವಿಧಾನಸಭೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

“ನೀವು ಇನ್ನೂ ಕೆಲವು ದಿನ ಕಾಯಬೇಕು… ಜನರಿಂದ ನನ್ನ ಬಳಿಗೆ ಅಭ್ಯರ್ಥಿಗಳ ಹೆಸರುಗಳು ಬಂದಾಗ ಮತ್ತು ನಾನು ಅಧಿಸೂಚನೆಗೆ ಸಹಿ ಹಾಕಿದಾಗ, ಅದನ್ನು ಘೋಷಿಸಲಾಗುವುದು” ಎಂದು ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕೇಳಿದಾಗ ಅವರು ಹೇಳಿದರು.

ಅಮೇಥಿಯ ಬದಲು ಕೇರಳದ ವಯನಾಡ್ ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದ ಬಗ್ಗೆ ಕೇಳಿದಾಗ, “ಕ್ಷೇತ್ರಗಳನ್ನು ಬದಲಾಯಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸುವವರು ವಾಜಪೇಯಿ ಮತ್ತು ಅಡ್ವಾಣಿ ಎಷ್ಟು ಬಾರಿ ತಮ್ಮ ಸ್ಥಾನಗಳನ್ನು ಬದಲಾಯಿಸಿದ್ದಾರೆ ಎಂಬುದನ್ನು ನನಗೆ ತಿಳಿಸಬೇಕು” ಎಂದು ಖರ್ಗೆ ಹೇಳಿದರು.

ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಯಾರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

Share.
Exit mobile version