ಬೆಂಗಳೂರು: 151 ಮಂದಿ ಜಿಲ್ಲಾ ತಾಂತ್ರಿಕ ಬೆಂಬಲ ಸಿಬ್ಬಂದಿಗಳ ನೇಮಕಾತಿಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ.

“ರಾಜ್ಯದಾದ್ಯಂತ ನೀರಿನ ಲಭ್ಯತೆ, ಗುಣಮಟ್ಟ ಮತ್ತು ಸುಸ್ಥಿರತೆಯನ್ನು ಸುಧಾರಿಸಲು ಮತ್ತು 2024ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯತ್ತ ಸಾಗಲು ನೆರವಾಗುವ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ತಾಂತ್ರಿಕ ಬೆಂಬಲ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ  ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜಿಲ್ಲಾ ತಾಂತ್ರಿಕ ಬೆಂಬಲ ಸಿಬ್ಬಂದಿಗಳಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರು ಸೇವಾ ನಿಶ್ಚಯ ಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸುವ ಪ್ರಕ್ರಿಯೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ತಾಂತ್ರಿಕ ಬೆಂಬಲ ಸಿಬ್ಬಂದಿಗಳನ್ನು ನಿಯೋಜಿಸುತ್ತಿರುವುದು ನೇಮಕಾತಿಯು ಒಂದು ಪ್ರಮುಖ ಅಂಶವಾಗಿದೆ, 31 ಜಿಲ್ಲೆಗಳಲ್ಲಿ 155 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯೊಂದಿಗೆ ಈ ಪ್ರಕ್ರಿಯೆ ಅಕ್ಟೋಬರ್ 2023ರಲ್ಲಿ ಪ್ರಾರಂಭವಾಯಿತು, ಒಟ್ಟು 1770 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಯಿತಲ್ಲದೆ ತಾಂತ್ರಿಕ ಪರಿಣತಿ ಮತ್ತಿತರ ಕೌಶಲ್ಯಗಳಿಗೆ ಅನುಗುಣವಾಗಿ ನೇಮಕಾತಿಯನ್ನು ಅಂತಿಮಗೊಳಿಸಲಾಯಿತು ಎಂದು ತಿಳಿಸಿರುವ ಸಚಿವ ಖರ್ಗೆ ಅವರು ನಿಖರವಾದ ವಿಧಾನಗಳನ್ನು ಅಳವಡಿಸಿಕೊಂಡು ಕಟ್ಟುನಿಟ್ಟಾದ ನೇಮಕಾತಿ ಪ್ರಕ್ರಿಯೆ ಮೂಲಕ ಅರ್ಹ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ತಾಂತ್ರಿಕ ಬೆಂಬಲ ಘಟಕಗಳು ಗ್ರಾಮ ಪಂಚಾಯತಿಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಸಾಮರ್ಥ್ಯ ವೃದ್ಧಿ ಮತ್ತು ಆರ್ಥಿಕ ಸುಸ್ಥಿರತೆ ಸೇರಿದಂತೆ ಕಾರ್ಯಕ್ರಮ ಅನುಷ್ಠಾನವನ್ನು ಸಂಘಟಿಸಲು ಸಹಾಯ ಮಾಡುತ್ತವೆ. ಕಾರ್ಯಕ್ರಮದ ಅನುಷ್ಠಾನವನ್ನು ವೇಗಗೊಳಿಸಲು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಅವರು ಜಿಲ್ಲಾ ಪಂಚಾಯತಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ. ಈ ಕಾರ್ಯಕ್ರಮದ ಭಾಗವಾಗಿ, ಕರ್ನಾಟಕ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ವಾರ್ಷಿಕ 45 ಲಕ್ಷ ರೂ. ಖರ್ಚು ಮಾಡುತ್ತದೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಟ್ಟು 13.95 ಕೋಟಿ ರೂ. ವೆಚ್ಚ ಮಾಡಲಾಗುವುದು, ಈ ಕಾರ್ಯಕ್ರಮವು 2023ರಿಂದ 2028ರವರೆಗೆ ಐದು ವರ್ಷಗಳ ಕಾಲಮಿತಿಯಲ್ಲಿ ರಾಜ್ಯದ ಎಲ್ಲಾ ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಿದೆ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

2024ರ ವೇಳೆಗೆ ರಾಜ್ಯದ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕ ಸರ್ಕಾರದ ಬದ್ಧತಾಪೂರ್ಣ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಶ್ವಬ್ಯಾಂಕ್‌ನಿಂದ 2904 ಕೋಟಿ ರೂಪಾಯಿಗಳ ಗಣನೀಯ ಪ್ರಮಾಣದ ಹಣಕಾಸಿನ ನೆರವನ್ನು ಪಡೆದು ʼಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಯೋಜನೆʼ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ʼಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮವನ್ನು ಪ್ರೋಗ್ರಾಂ-ಫಾರ್-ರಿಜಲ್ಟ್ಸ್ (ಪಿ. ಎಫ್. ಆರ್. ಆರ್) ಫೈನಾನ್ಸಿಂಗ್ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಸೂಚಕಗಳ ಆಧಾರಿತ ಫಲಿತಾಂಶಗಳ ಮೇಲೆ ವಿಶ್ವಬ್ಯಾಂಕ್‌ ಹಣಕಾಸು ಬಿಡುಗಡೆ ಮಾಡುತ್ತದೆ ಎಂದೂ ಸಚಿವರು ತಿಳಿಸಿದ್ದಾರೆ.

ಮನೆ ನೀರಿಗಾಗಿ ಕೊಳಾಯಿ ಸಂಪರ್ಕಗಳನ್ನು ಒದಗಿಸುವುದು ಹಾಗೂ ನೀರನ್ನು ಪ್ರವೇಶಿಸುವ ವ್ಯವಸ್ಥೆಗಳು ವಿಶ್ವಾಸಾರ್ಹವೆಂದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಗುಣಾತ್ಮಕ ಹಾಗೂ ತಾಂತ್ರಿಕ ಸಂಗತಿಗಳನ್ನು ತಾಂತ್ರಿಕ ಬೆಂಬಲ ಸಿಬ್ಬಂದಿಗಳು ಗಮನಿಸುವರು.

BREAKING : ಭೂಪಾಲ್ ನ ‘ಟೆಂಟ್ ಹೌಸ್’ ಗೋದಾಮಿನಲ್ಲಿ ‘ಸಿಲಿಂಡರ್’ ಸ್ಫೋಟದಿಂದ ಭಾರಿ ಅಗ್ನಿ ಅವಘಡ

ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ

Share.
Exit mobile version