ಮಸ್ಕತ್: ಒಮಾನ್ ಕರಾವಳಿಯ ಸಮುದ್ರದಲ್ಲಿ ಸೋಮವಾರ ಪಲಾವ್ ಧ್ವಜ ಹೊಂದಿರುವ ‘ಎಂಟಿ ಮಾರಿವೆಕ್ಸ್’ (MT Marivex) ಎಂಬ ಟ್ಯಾಂಕರ್ಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ಈ ಹಡಗಿನಲ್ಲಿದ್ದ 24 ಮಂದಿ ಭಾರತೀಯ ಸಿಬ್ಬಂದಿಯನ್ನು ಓಮನ್ ವಾಯುಪಡೆಯು ಆಪರೇಷನ್ ನಡೆಸಿ ಸುರಕ್ಷಿತವಾಗಿ ರಕ್ಷಿಸಿದೆ.
ಹಡಗು ಯಾವುದೇ ಸರಕನ್ನು ಸಾಗಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 1:30 ರ ಸುಮಾರಿಗೆ ಹಡಗಿನ ಇಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಿಬ್ಬಂದಿ ಮೊದಲಿಗೆ ಮಾಹಿತಿ ನೀಡಿದ್ದರು. ಈ ಘಟನೆಯು ಹಾರ್ಮುಜ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ನಡೆದಿದೆ. ಇದು ಪ್ರಸ್ತುತ ಪ್ರಾದೇಶಿಕ ಉದ್ವಿಗ್ನತೆಯಿಂದ ಕೂಡಿದ ಪ್ರಮುಖ ಸಮುದ್ರ ಮಾರ್ಗವಾಗಿದೆ.
ಸಿಬ್ಬಂದಿ ಕಳುಹಿಸಿದ ತುರ್ತು ಸಂದೇಶದ (SOS) ಆಡಿಯೋದಲ್ಲಿ, “ಅಮೆರಿಕದ ನೌಕಾಪಡೆಯು ನಮ್ಮ ಇಂಜಿನ್ ಕೋಣೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ” ಎಂದು ತಿಳಿಸಲಾಗಿದೆ. ದಾಳಿಯಿಂದಾಗಿ ಇಂಜಿನ್ ಕೋಣೆಗೆ ಹಾನಿಯಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಹಡಗಿಗೆ ಬೆಂಕಿ ತಗುಲಿದ ಕೆಲವು ಗಂಟೆಗಳ ನಂತರ, ಓಮನ್ ವಾಯುಪಡೆಯು ಹೆಲಿಕಾಪ್ಟರ್ಗಳ ಮೂಲಕ ಸಿಬ್ಬಂದಿಯನ್ನು ಏರ್ಲಿಫ್ಟ್ ಮಾಡಿದೆ. ಭಾರತೀಯ ರಾಯಭಾರ ಕಚೇರಿಯು ಈ ರಕ್ಷಣಾ ಕಾರ್ಯಾಚರಣೆಗಾಗಿ ಓಮನ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದೆ.
ಹಡಗಿನ ಈ ಘಟನೆಯ ಹಿಂದಿನ ಹಿನ್ನೆಲೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ, ಈ ಹಡಗು ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು (OFAC) ಉಲ್ಲಂಘಿಸಿ ಕಪ್ಪುಪಟ್ಟಿಗೆ ಸೇರಿತ್ತು. ಇರಾನ್ ಮತ್ತು ರಷ್ಯಾದ ತೈಲ ಮಾರಾಟದ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ಕಳ್ಳಸಾಗಣೆ ಮಾಡಲು ಈ ಹಡಗು ಪ್ರಯತ್ನಿಸುತ್ತಿತ್ತು ಎಂದು ಹೇಳಲಾಗಿದೆ.
ಕಳೆದ ಕೆಲವು ದಿನಗಳಿಂದ ಮಾರಿವೆಕ್ಸ್ ಹಡಗು ನಾಲ್ಕು ಬಾರಿ ಅಮೆರಿಕದ ದಿಗ್ಬಂಧನವನ್ನು ತಪ್ಪಿಸಲು ಪ್ರಯತ್ನಿಸಿತ್ತು. ಮೊದಲ ಮೂರು ಬಾರಿ ಅಮೆರಿಕ ನೌಕಾಪಡೆಯ ಎಚ್ಚರಿಕೆ ಬಳಿಕ ಹಡಗು ಹಿಂದಿರುಗಿದ್ದರೂ, ಸೋಮವಾರ ನಾಲ್ಕನೇ ಬಾರಿ ಓಮನ್ ಜಲಸೀಮೆಯನ್ನು ಬಳಸಿಕೊಂಡು ಅಮೆರಿಕದ ಕಣ್ಣು ತಪ್ಪಿಸಲು ಪ್ರಯತ್ನಿಸಿತ್ತು. ಸಿಗ್ನಲ್ ಸಾಧನಗಳನ್ನು (Tracking devices) ಆಫ್ ಮಾಡಿದ್ದರಿಂದ ಈ ಹಡಗಿನ ಉದ್ದೇಶ ಸರಿಯಾಗಿರಲಿಲ್ಲ ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಹಡಗು ಕರ್ನಾಟಕದ ಕಾರವಾರದಿಂದ ಓಮನ್ನ ದುಕ್ಮ್ಗೆ ಪ್ರಯಾಣಿಸುತ್ತಿತ್ತು. ಭಾರತೀಯ ನೌಕಾಪಡೆ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿವೆ.
’ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ (FSUI) ಈ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಮುದ್ರದಲ್ಲಿ ನಾವಿಕರ ಭದ್ರತೆಯನ್ನು ಕಾಪಾಡುವಂತೆ ಒತ್ತಾಯಿಸಿದೆ. ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಸಮುದ್ರ ಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರವು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.








