ದುಬೈ:ಯೆಮೆನ್ ಬಂಡುಕೋರರು ನಡೆಸಿದ ಅಪರೂಪದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯರು ಮತ್ತು ಪಾಕಿಸ್ತಾನಿ ಸಾವನ್ನಪ್ಪಿದ ದಿನಗಳ ನಂತರ, ಯುಎಇ (UAE)ಸೋಮವಾರ ತನ್ನ ರಾಜಧಾನಿ ಅಬುಧಾಬಿಯತ್ತ ಹೌತಿ(houthi) ಭಯೋತ್ಪಾದಕ ಗುಂಪು ಹಾರಿಸಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದಾಳಿಯು ಯಾವುದೇ ಪ್ರಾಣಹಾನಿಗೆ ಕಾರಣವಾಗಲಿಲ್ಲ, ತಡೆಹಿಡಿದ ಮತ್ತು ನಾಶಪಡಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅವಶೇಷಗಳು ಅಬುಧಾಬಿಯ ಸುತ್ತಲಿನ ಪ್ರತ್ಯೇಕ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಅದು ಹೇಳಿದೆ. “ಭಯೋತ್ಪಾದಕ ಹೌತಿ ಗುಂಪು ಸೋಮವಾರ ದೇಶದ ಕಡೆಗೆ ಹಾರಿಸಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಾಯು ರಕ್ಷಣಾ ಪಡೆಗಳು ತಡೆಹಿಡಿದು ನಾಶಪಡಿಸಿವೆ” ಎಂದು ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಯಾವುದೇ ಬೆದರಿಕೆಗಳನ್ನು ಎದುರಿಸಲು ಯುಎಇ ಸಿದ್ಧವಾಗಿದೆ ಮತ್ತು ಎಲ್ಲಾ ದಾಳಿಗಳಿಂದ ದೇಶವನ್ನು ರಕ್ಷಿಸಲು ಪ್ರಾಧಿಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ ಎಂದು ಅಧಿಕೃತ WAM ಸುದ್ದಿ ಸಂಸ್ಥೆ ವರದಿ ಮಾಡಿದೆ.ದೇಶದ ಅಧಿಕೃತ ಸುದ್ದಿ ಮೂಲಗಳ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಸಚಿವಾಲಯ ಸಾರ್ವಜನಿಕರಿಗೆ ಕರೆ ನೀಡಿದೆ.ಯೆಮೆನ್‌ನ ಹೌತಿ ಬಂಡುಕೋರರು ಅಬುಧಾಬಿಯಲ್ಲಿನ ಇಂಧನ ಡಿಪೋ ಮತ್ತು ನಗರದ ಪ್ರಮುಖ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ತೈಲ ರಫ್ತು ಮಾಡುವ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ ಒಂದು ವಾರದ ನಂತರ ಈ ದಾಳಿ ನಡೆದಿದೆ.
ಜನವರಿ 17 ರ ಬೆಳಿಗ್ಗೆ, ಹೌತಿ ಬಂಡುಕೋರರು ಮುಸಾಫ್ಫಾ ICAD 3 ಪ್ರದೇಶ ಮತ್ತು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ನಿರ್ಮಾಣ ಪ್ರದೇಶವನ್ನು ಗುರಿಯಾಗಿಸಿಕೊಂಡರು, ಇವೆರಡೂ ನಾಗರಿಕ ಮೂಲಸೌಕರ್ಯಗಳಾಗಿವೆ.ಮೂರು ಪೆಟ್ರೋಲಿಯಂ ಟ್ಯಾಂಕರ್‌ಗಳ ಸ್ಫೋಟಕ್ಕೆ ಕಾರಣವಾದ ದಾಳಿಯಲ್ಲಿ ಇಬ್ಬರು ಭಾರತೀಯರು ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದರು ಮತ್ತು ಇತರ ಆರು ನಾಗರಿಕರು ಗಾಯಗೊಂಡರು.