ಸುಭಾಷಿತ :

Saturday, February 29 , 2020 6:19 PM

ತುಮಕೂರು ಜಿಲ್ಲೆಗೆ ‘ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ’ ಅನುಷ್ಠಾನದಲ್ಲಿ ನಂಬರ್ 1 ಸ್ಥಾನ


Thursday, January 9th, 2020 5:46 pm


ತುಮಕೂರು : ಗರ್ಭಿಣಿ/ಬಾಣಂತಿಯರ ಆರೋಗ್ಯ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆಯು ನಂಬರ್ 1 ಸ್ಥಾನ ಪಡೆದುಕೊಂಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯ ಪ್ರಯೋಜನವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 1965 ಪರಿಶಿಷ್ಟ ಜಾತಿ, 954 ಪರಿಶಿಷ್ಟ ಪಂಗಡ ಹಾಗೂ 8225 ಇತರೆ ವರ್ಗದ ಫಲಾಭವಿಗಳು ಸೇರಿದಂತೆ 11144 ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಇದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ 856, ಗುಬ್ಬಿ-1197, ಕೊರಟಗೆರೆ-655, ಕುಣಿಗಲ್-998, ಮಧುಗಿರಿ-1313, ಪಾವಗಡ-1066, ಸಿರಾ-1241, ತಿಪಟೂರು-853, ತುಮಕೂರು ಗ್ರಾಮಾಂತರ-1068, ತುಮಕೂರು ನಗರ-1197 ಹಾಗೂ ತುರುವೇಕೆರೆ ತಾಲೂಕಿನ 700 ಫಲಾನುಭವಿಗಳು ಒಳಗೊಂಡಿದ್ದಾರೆ.

ಯೋಜನಾನುಷ್ಠಾನದಲ್ಲಿ ರಾಜ್ಯದ ಉಳಿದ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆಯು ಕಳೆದ 4 ತಿಂಗಳಿಂದ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರತಿ ತಿಂಗಳಿಗೆ 1033 ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವ ಗುರಿಯಿದೆ. ಆದರೆ ಪ್ರತಿ ತಿಂಗಳೂ 1300ಕ್ಕೂ ಹೆಚ್ಚು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಿರುವುದರಿಂದ ಜಿಲ್ಲೆಗೆ ಈ ಮೊದಲ ಸ್ಥಾನ ದೊರೆತಿದೆ. ಕಳೆದ ಅಕ್ಟೋಬರ್‌ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲೆಯು ಪ್ರಥಮ ಸ್ಥಾನ ಗಳಿಸಿರುವ ಬಗ್ಗೆ ಘೋಷಿಸಿ ಅಭಿನಂದಿಸಿದ್ದಾರೆ.

ಏನಿದು ಧಾನ ಮಂತ್ರಿ ಮಾತೃವಂದನಾ ಯೋಜನೆ.?

ಗರ್ಭಿಣಿ/ಬಾಣಂತಿಯರ ಆರೋಗ್ಯ ಸುಧಾರಣೆ/ ಆಂಶಿಕ ವಿಶ್ರಾಂತಿ/ ವೇತನ ಅಥವಾ ಕೂಲಿ ನಷ್ಟ/ ತಪಾಸಣೆ/ ಚಿಕಿತ್ಸೆ/ ಸಾಂದರ್ಭಿಕ ವಿಶ್ರಾಂತಿಯ ಸದುದ್ದೇಶದಿಂದ ಸರ್ಕಾರ ಮಾತೃವಂದನಾ ಯೋಜನೆಯನ್ನು ಜಾರಿಗೆ ತಂದಿದೆ. ಗರ್ಭಧಾರಣೆ ಹಾಗೂ ಬಾಣಂತಿ ಸಂದರ್ಭದಲ್ಲಿ ಕೂಲಿ-ನಾಲಿ ಮಾಡಲು ದೇಹ ಸ್ಪಂದಿಸುವುದಿಲ್ಲವಾದ್ದರಿಂದ ಬಡತನದ ಬೇಗೆಯಲ್ಲಿರುವ ಹಾಗೂ ಹೊಟ್ಟೆ ಪಾಡಿಗಾಗಿ ಕೂಲಿ ಮಾಡುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ಈ ಯೋಜನೆ ವರದಾನವಾಗಿದೆ. ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತ ಹೀನತೆ, ಅಪೌಷ್ಟಿಕತೆ ನಿಯಂತ್ರಿಸಲು, ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ತಪ್ಪಿಸುವುದು, ಚುಚ್ಚುಮದ್ದನ್ನು ಕಡ್ಡಾಯಗೊಳಿಸುವುದು, ಮಕ್ಕಳ ತೂಕವನ್ನು ಹೆಚ್ಚಿಸುವುದು, ಪೌಷ್ಟಿಕ ಆಹಾರವನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಧಾನ ಮಂತ್ರಿ ಮಾತೃವಂದನಾ ಯೋಜನೆಯಿಂದ 5 ಸಾವಿರ ಪ್ರೋತ್ಸಾಹಧನ

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ೩ ಕಂತುಗಳಲ್ಲಿ ಒಟ್ಟು 5000/- ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಅರ್ಹ ದಂಪತಿಗಳಿಗೆ ಮಾತ್ರ ಈ ಯೋಜನೆ ಸೌಲಭ್ಯ ದೊರೆಯಲಿದೆ. ಕೇಂದ್ರ/ರಾಜ್ಯ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಎಲ್ಲ ಮೊದಲ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮೂರು ಕಂತುಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಪ್ರೋತ್ಸಾಹ ಧನಕ್ಕಾಗಿ ಫಲಾನುಭವಿಗಳು 3 ಬಾರಿ ಅರ್ಜಿ ಸಲ್ಲಿಸಬೇಕು. ಮೊದಲ, ಎರಡನೇ ಹಾಗೂ ಮೂರನೇ ಕಂತಿನ ಹಣವನ್ನು ಕ್ರಮವಾಗಿ ನಿಗಧಿತ ನಮೂನೆ 1ಎ, 1ಬಿ ಹಾಗೂ 1ಸಿ ಮೂಲಕ ಪ್ರತ್ಯೇಕ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದಾಗಿದೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ 150 ದಿನಗಳೊಳಗೆ ನೋಂದಣಿಯಾಗಿದ್ದವರಿಗೆ ಮೊದಲ ಕಂತಿನ ಹಣ 1000 ರೂ., ಗರ್ಭಿಣಿಯಾದ 180 ದಿನಗಳ ನಂತರ ನಿಯಮಿತ ಆರೋಗ್ಯ ತಪಾಸಣೆಗೊಳಗಾಗಿದ್ದಲ್ಲಿ ಮಾತ್ರ 2ನೇ ಕಂತಿನ ಹಣ 2000 ರೂ. ಹಾಗೂ ಮಗು ಜನನವಾಗಿ ಜನನ ನೋಂದಣಿಯಾಗಿ ಮೊದಲ ಹಂತದ ಚುಚ್ಚುಮದ್ದು ಹಾಕಿಸುವ ಸಂದರ್ಭದಲ್ಲಿ (ಅಂದರೆ ಮಗುವಿಗೆ ಮೂರುವರೆ ತಿಂಗಳು ತುಂಬಿರಬೇಕು) ಮೂರನೇ ಕಂತಿನ ಹಣ 2000 ರೂ. ಸೇರಿ ಒಟ್ಟು 5000 ರೂ.ಗಳ ನಗದನ್ನು ಫಲಾನುಭವಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.

ಈ ಯೋಜನೆಯಿಂದ ವಂಚಿತರಾದವರೂ ಕೂಡ ಒಂದೇ ಬಾರಿ 3 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಒಟ್ಟಿಗೆ 5000 ರೂ.ಗಳ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ. ಇಂತಹ ಫಲಾನುಭವಿಯ ಕಡೆಯ ಮುಟ್ಟಿನ ದಿನಾಂಕದಿಂದ 730 ದಿನಗಳೊಳಗಾಗಿ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಯೋಜನೆಯ ಲಾಭ ಪಡೆಯಬಹುದು. ಅರ್ಜಿಯೊಂದಿಗೆ ಫಲಾನುಭವಿಯ ಆಧಾರ್, ಪತಿಯ ಆಧಾರ್, ತಾಯಿ ಕಾರ್ಡ್, ಉಳಿತಾಯ ಖಾತೆ (ಆಧಾರ್ ಜೋಡಣೆ ಹೊಂದಿರುವ) ಪುಸ್ತಕಗಳನ್ನು ಒದಗಿಸಬೇಕು.

ಮಾತೃವಂದನಾ ಯೋಜನೆಯನ್ನು 2017ರ ಜನವರಿ 1ರಿಂದ ಜಾರಿಗೆ ತರಲಾಗಿದ್ದು, ಈವರೆಗೂ ಜಿಲ್ಲೆಯ 36797 ಫಲಾನುಭವಿಗಳಿಗೆ ಒಟ್ಟು 15.07 ಕೋಟಿ ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗೆ ಜಮೆ ಮಾಡಲಾಗಿದೆ.

ಮಾತೃವಂದನಾ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾದ್ಯಂತ ಮಾತೃವಂದನಾ ಸಪ್ತಾಹ, ತಾಯಂದಿರ ಸಭೆ, ಜಾಥಾ ಕಾರ್ಯಕ್ರಮ, ಬೀದಿ ನಾಟಕ, ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳಿಂದ ಖುದ್ದಾಗಿ ಅರ್ಜಿ ಸಂಗ್ರಹ, ಸಾಮೂಹಿಕ ಸೀಮಂತ, ಅಂಗವಾಡಿ ಕಾರ್ಯಕರ್ತೆಯರು/ಮೇಲ್ವಿಚಾರಕಿಯರಿಗಾಗಿ ಸಾಮರ್ಥ್ಯಾಭಿವೃದ್ಧಿ ತರಬೇತಿ, ರೇಡಿಯೋ ಕಾರ್ಯಕ್ರಮ, ನೇರ ಫೋನ್ ಇನ್ ಕಾರ್ಯಕ್ರಮ, ಕರಪತ್ರ/ಭಿತ್ತಿಪತ್ರ ವಿತರಣೆ, ಗೋಡೆಬರಹ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾತೃವಂದನಾ ಸಪ್ತಾಹ

ಫಲಾನುಭವಿಗಳಿಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾದ್ಯಂತ 2019ರ ಡಿಸೆಂಬರ್ 2 ರಿಂದ 9ರವರೆಗೆ ನಡೆದ ಈ ಸಪ್ತಾಹ ಕಾರ್ಯಕ್ರಮದಲ್ಲಿ ಮೊದಲ ದಿನ 3667 ಗರ್ಭಿಣಿ/ಬಾಣಂತಿಯರ ಸೆಲ್ಫಿ ಕಾರ್ಯಕ್ರಮ, 2ನೇ ದಿನ ಮಕ್ಕಳ ಗ್ರಾಮ ಸಭೆ, 3ನೇ ದಿನ ಮನೆ-ಮನೆ ಭೇಟಿ ನೀಡಿ 1062 ಅರ್ಜಿಗಳ ಸಂಗ್ರಹ, 4ನೇ ದಿನ ಬ್ಯಾಂಕ್/ಅಂಚೆ ಕಚೇರಿಗಳಲ್ಲಿ ಫಲಾನುಭವಿಗಳ ಆಧಾರ್ ತಿದ್ದುಪಡಿಗೆ ಕ್ರಮ, 5ನೇ ದಿನ 1679 ಜಾಗೃತಿ ಆಂದೋಲನ, 6ನೇ ದಿನ ಸ್ವಚ್ಛತೆ ಹಾಗೂ ಆಹಾರ ಪ್ರಾತ್ಯಕ್ಷಿಕೆ ಹಾಗೂ 7ನೇ ಹಾಗೂ ಕಡೆಯ ದಿನ ಅತಿ ಹೆಚ್ಚು ಫಲಾನುಭವಿಗಳಿಂದ ಅರ್ಜಿ ಸಂಗ್ರಹಿಸಿದ ಜಿಲ್ಲೆಯ ಎಲ್ಲ ತಾಲೂಕಿನ ಅಂಗನವಾಡಿ ಕೇಂದ್ರದ ತಲಾ ಒಬ್ಬರು ಕಾರ್ಯಕರ್ತೆಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅಭಿನಂದನಾ ಪತ್ರ ವಿತರಣೆ ಮಾಡಲಾಯಿತು.

ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಅಂಗನವಾಡಿ ಕೇಂದ್ರ ಅಥವಾ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 0816-2272590ಯನ್ನು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions