ನ್ಯೂಯಾರ್ಕ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ಗೆ ಅಮೆರಿಕ ಅಧ್ಯಕ್ಷರ ಹುಟ್ಟುಹಬ್ಬದ ಪತ್ರದ ವರದಿಗೆ ಸಂಬಂಧಿಸಿದಂತೆ ಮಾಧ್ಯಮ ಮೊಗಲ್ ರುಪರ್ಟ್ ಮುರ್ಡೋಕ್ ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್ನ ಮಾತೃ ಕಂಪನಿಗಳಾದ ನ್ಯೂಸ್ ಕಾರ್ಪ್ ಮತ್ತು ಡೋ ಜೋನ್ಸ್ ವಿರುದ್ಧ ಒನಾಲ್ಡ್ ಟ್ರಂಪ್ 10 ಬಿಲಿಯನ್ ಡಾಲರ್ ಮೊಕದ್ದಮೆ ಹೂಡಿದ್ದಾರೆ.
ಟ್ರಂಪ್ 2003 ರಲ್ಲಿ ಎಪ್ಸ್ಟೈನ್ಗೆ ಹುಟ್ಟುಹಬ್ಬದ ಪತ್ರವನ್ನು ಕಳುಹಿಸಿದ್ದಾರೆ ಎಂಬ ಹೇಳಿಕೆಗಳನ್ನು ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ಕೆಲವು ದಿನಗಳ ನಂತರ ಮಿಯಾಮಿಯ ಫ್ಲೋರಿಡಾದ ಫೆಡರಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಎಪ್ಸ್ಟೈನ್ 2019 ರಲ್ಲಿ ಜೈಲಿನ ಸೆಲ್ನಲ್ಲಿ ಶವವಾಗಿ ಪತ್ತೆಯಾಗುವ ಮೊದಲು ಹಲವಾರು ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರು.
ವರದಿಯ ಪ್ರಕಾರ, ಘಿಸ್ಲೈನ್ ಮ್ಯಾಕ್ಸ್ವೆಲ್ ಸಂಕಲಿಸಿದ ಹುಟ್ಟುಹಬ್ಬದ ಆಲ್ಬಂನ ಭಾಗವೆಂದು ಹೇಳಲಾದ ಶುಭಾಶಯವು ಟ್ರಂಪ್ ಅವರ ಸಹಿಯನ್ನು ಹೊಂದಿರುವ ನಗ್ನ ಮಹಿಳೆಯ ರೇಖಾಚಿತ್ರವನ್ನು ಒಳಗೊಂಡಿದೆ.
ಟ್ರಂಪ್ ಈ ವರದಿಯನ್ನು ಬಲವಾಗಿ ನಿರಾಕರಿಸಿದ್ದಾರೆ, ಪತ್ರವನ್ನು ಕಟ್ಟುಕತೆ ಎಂದು ಕರೆದಿದ್ದಾರೆ. “ವಾಲ್ ಸ್ಟ್ರೀಟ್ ಜರ್ನಲ್ ಎಪ್ಸ್ಟೈನ್ಗೆ ನಕಲಿ ಪತ್ರವನ್ನು ಮುದ್ರಿಸಿದೆ” ಎಂದು ಅವರು ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ನನ್ನ ಮಾತುಗಳಲ್ಲ, ನಾನು ಮಾತನಾಡುವ ರೀತಿಯೂ ಅಲ್ಲ. ಅಲ್ಲದೆ, ನಾನು ಚಿತ್ರಗಳನ್ನು ಬಿಡಿಸುವುದಿಲ್ಲ” ಎಂದು ಅವರು ಹೇಳಿದರು.
ಮತ್ತೊಂದು ಪೋಸ್ಟ್ನಲ್ಲಿ, “ಇದು ಹಗರಣ, ಅವರು ಈ ನಕಲಿ ಕಥೆಯನ್ನು ಮುದ್ರಿಸಬಾರದು ಎಂದು ನಾನು ರೂಪರ್ಟ್ ಮುರ್ಡೋಕ್ಗೆ ಹೇಳಿದೆ. ಆದರೆ ಅವನು ಹಾಗೆ ಮಾಡಿದನು, ಮತ್ತು ಈಗ ನಾನು ಅವನ ವಿರುದ್ಧ ಮೊಕದ್ದಮೆ ಹೂಡಲಿದ್ದೇನೆ” ಎಂದಿದ್ದಾರೆ.