ಬೆಂಗಳೂರು: ಇಂದು ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವಾಗಿದೆ. ಈ ಸಂದರ್ಭದಲ್ಲಿ ನೀವು ಪರಿಸರ ಸ್ನೇಹಿ ಬ್ಯಾಗ್ ಬಳಸಿ, ಈ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಂತ ನಿರ್ಧಾರ ಕೈಗೊಳ್ಳಿ.

ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನ ಹಾಳುಮಾಡುತ್ತಿರುವ ಪ್ಲಾಸ್ಟಿಕ್‌ಅನ್ನು ನಿತ್ಯ ಜೀವನದಿಂದ ತ್ಯಜಿಸೋಣ. ಹೆಚ್ಚು ಬಟ್ಟೆ ಬ್ಯಾಗ್‌ಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್‌ ಬ್ಯಾಗ್‌ ಮುಕ್ತ ಪರಿಸರವನ್ನು ನಿರ್ಮಿಸೋಣ.

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನಾಚರಣೆಯ ಅಂಗವಾಗಿ, ಪೂರ್ವ ವಲಯ ಹೆಬ್ಬಾಳ ವಿಭಾಗದ ಮುನಿರೆಡ್ಡಿ ಪಾಳ್ಯ ವ್ಯಾಪ್ತಿಯಲ್ಲಿ ಪಾಸ್ಟಿಕ್ ನಿಷೇಧದ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.

ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಲು ನಾಗರೀಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್ ನಿಷೇಧವಾಗಿದೆ, ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಬಿತ್ತಿಪತ್ರಗಳನ್ನು ನೀಡಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಅಂಗಡಿಗಳಿಗೆ ಭೇಟಿ ನೀಡಿ ಬಟ್ಟೆ ಬ್ಯಾಗ್, ಪೇಪರ್ ಸ್ಟ್ರಾ ವಿತರಣೆ:

ಜಾಗೃತಿ ಜಾಥಾ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಬಳಿ ತೆರಳಿ ಬಿತ್ತಿಪತ್ರಗಳನ್ನು ವಿತರಿಸುವ ಜೊತೆಗೆ ಬಟ್ಟೆ ಚೀಲಗಳನ್ನು ವಿತರಿಸಿ ಇನ್ನು ಮುಂದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಇದೇ ರೀತಿಯ ಬಟ್ಟೆ ಚೀಲಗಳನ್ನು ಮಾತ್ರ ಬಳಸಬೇಕು. ಯಾವದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದೆಂದು ಮನವಿ ಮಾಡಿದರು.

ಎಳನೀರು ಮಾರಾಟ ಮಾಡುವವರಿಗೆ ಪೇಪರ್ ಸ್ಟ್ರಾ ವಿತರಣೆ ಮಾಡಿ ಪ್ಲಾಸ್ಟಿಕ್ ನಿಂದ ತಯಾರಿಸಿದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಸದಂತೆ ಮನವಿ ಮಾಡಿದರು. ಇದೇ ವೇಳೆ ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು.

ಮೊದಲು ಎಚ್ಚರಿಕೆ ನಂತರ ದಂಡ:

ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದರೆ ಮೊದಲು ಎಚ್ಚರಿಕೆ ನೀಡುತ್ತೇವೆ. ಮತ್ತೆ ಪ್ಲಾಸ್ಟಿಕ್ ಬಳಸುವುದು ಕಂಡುಬಂದರೆ ದಂಡ ವಿಧಿಸಲಾಗುವುದು. ಒಮ್ಮೆ ಬಳಸುವ ಪ್ಲಾಸ್ಟಿಕ್ ಪರಿಸಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ನಿಷೇಧಿಸೋಣ ಎಂದು ಅರಿವು ಮೂಡಿಸಿದರು.

ಈ ವೇಳೆ ವಲಯ ಆಯುಕ್ತರಾದ ಸ್ನೇಹಲ್, ವಲಯ ಜಂಟಿ ಆಯುಕ್ತರಾದ ಸರೋಜಾ, ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರಾದ ವಿಶ್ವನಾಥ್, ಆರೋಗ್ಯಾಧಿಕಾರಿಗಳು, ಮಾರ್ಷಲ್‌ಗಳು, ಸ್ಥಳೀಯ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು/ಸ್ಥಳಿಯರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team

UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

Share.
Exit mobile version