ಬೆಂಗಳೂರು: ಕಳೆದ ಹನ್ನೊಂದು ತಿಂಗಳುಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 1,800 ಕೋಟಿ ರೂ ಅನುದಾನವನ್ನು ಮಂಡ್ಯದ ಅಭಿವೃದ್ಧಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಅವರ ಪರವಾಗಿ ಕೆ.ಆರ್.ಪೇಟೆಯಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಭೀಕರ ಬರಗಾಲ ಇದ್ದರೂ, 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಈ ಸರಕಾರಕ್ಕೆ ಕನಿಕರ ಬರುತ್ತಿಲ್ಲ ಎಂದು ಟೀಕಿಸಿದರು.

ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ಹಿಂದೆ ಭೀಕರ ಪ್ರವಾಹ ಆದಾಗ ಬಿಎಸ್‍ವೈ ಅವರು ಉತ್ತರ ಕರ್ನಾಟಕದ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಿದರು. ಮನೆ ಕಳೆದುಕೊಂಡ ರೈತರಿಗೆ 5 ಲಕ್ಷ ರೂ ಪರಿಹಾರ ಕೊಟ್ಟಿದ್ದರು. ಬಡ ರೈತರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುತ್ತೇನೆ ಎಂದು ಹೇಳಿ ಅದರಂತೆ ಮಾಡಿದ್ದರು. ಬಿಎಸ್‍ವೈ ಅವರು ರೈತರ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದರು. ಒಂದು ಕಡೆ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರೆ, ಯಡಿಯೂರಪ್ಪನವರು ಸಹ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ ಎಂದು ಹೇಳಿದರು.

ರೈತನಿಗೆ ಬರೆ ಎಳೆಯುವ ಕೆಲಸ..

ಈಗ ನಾಡಿನ ಮಖ್ಯಮಂತ್ರಿಗಳು ಬರಗಾಲದ ಸಂದರ್ಭದಲ್ಲಿ ರೈತನಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ರೈತನೊಬ್ಬ ತನ್ನ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಿಕೊಳ್ಳಬೇಕಿದ್ದರೆ 25 ಸಾವಿರ ರೂ ಕಟ್ಟಿದ್ದರೆ ಸಾಕಿತ್ತು. ಆದರೆ ಈಗ ಸಿದ್ದರಾಮಯ್ಯ ಸರಕಾರ ಬಂದ ನಂತರ ರೈತರು 3 ಲಕ್ಷ ರೂ. ಶುಲ್ಕ ಕಟ್ಟ ಬೇಕಾಗಿದೆ. ಈ ಬರದ ಸಂದರ್ಭದಲ್ಲಿ ರೈತರಿಗೆ 3 ಲಕ್ಷ ಕಟ್ಟುವ ಸಂಕಷ್ಟವನ್ನು ಹೇಗೆ ತಾನೇ ನಿಭಾಯಿಸಲು ಸಾಧ್ಯ? ಕಾಂಗ್ರೆಸ್ ಸರಕಾರ ಬಡವರ ವಿರೋಧಿ ಸರಕಾರ ಎಂದು ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ನೆಪ ಮಾಡಿಕೊಂಡು ಒಂದು ಕೈಯಲ್ಲಿ ಕಿತ್ತುಕೊಂಡು ಇನ್ನೊಂದು ಕೈಯಲ್ಲಿ ಕೊಡುವ ಕೆಲಸ ಮಾಡುತ್ತಿದೆ ಈ ಕಾಂಗ್ರೆಸ್ ಸರಕಾರ. ಉಚಿತ ವಿದ್ಯುತ್ ಎನ್ನುತ್ತಲೇ ಸಣ್ಣ ಸಣ್ಣ ವ್ಯಾಪಾರಿಗಳು 5ರಿಂದ 8000 ರೂ ವರೆಗೆ ಬಿಲ್ ಕಟ್ಟಬೇಕಾದ ಅನಿವಾರ್ಯತೆ ಬಂದಿದೆ. ಬಸ್ಸಲ್ಲಿ ಓಡಾಡಬೇಕಾದರೆ 30-40% ಟಿಕೆಟ್ ದರ ಜಾಸ್ತಿ. ಹಾಲಿನ ದರ ಜಾಸ್ತಿ ಆದರೂ ಅದರ ಲಾಭ ರೈತರಿಗೆ ಆಗುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ ರೈತರಿಗೆ ಹಾಲಿನ ಪ್ರೋತ್ಸಾಹಧನ 5 ರೂ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಆ ಪ್ರೋತ್ಸಾಹಧನ ನಿಲ್ಲಿಸಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 4,000 ರೂ ಕೊಡುತ್ತಿದ್ದುದನ್ನು ಕೂಡ ನಿಲ್ಲಿಸಿದ್ದಾರೆ. ರೈತರಿಗೆ ನೆರವಾಗುವ ಎಲ್ಲ ಯೋಜನೆಗಳನ್ನು ಕಿತ್ತುಕೊಂಡಿರುವ ಕಾಂಗ್ರೆಸ್ ಸರಕಾರ ತಾನು ರೈತಪರ ಎಂದು ಯಾವ ಭಂಡ ಧೈರ್ಯದಿಂದ ಹೇಳಿಕೊಳ್ಳುತ್ತದೆ? ಎಂದು ಅವರು ಪ್ರಶ್ನಿಸಿದರು.

ಕೆ.ಆರ್ ಪೇಟೆಯ ವಿದ್ಯಾವಂತ ಮತದಾರರು ಯೋಚನೆ ಮಾಡಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ದೇಶದ ಜನತೆ ತೀರ್ಮಾನ ಮಾಡಿರುವ ಈ ಸಂದರ್ಭದಲ್ಲಿ ಬಡವರ ಪರ ಸದಾ ದುಡಿಯುವ ಎಚ್.ಡಿ ಕುಮಾರಸ್ವಾಮಿಯವರನ್ನು ಗೆಲ್ಲಿಸಬೇಕೇ ಹೊರತು ಜನರ ಕಿಸೆಗೆ ಕನ್ನ ಹಾಕುವವರನ್ನು ಗೆಲ್ಲಿಸಬಾರದು. ಹಣದ ದರ್ಪದಿಂದ ಗೆಲ್ಲುವ ಅಹಂಕಾರ ಪ್ರದರ್ಶಿಸುತ್ತಿರುವ ಕಾಂಗ್ರೆಸ್‍ನವರನ್ನು ಜನತೆ ತಿರಸ್ಕರಿಸಬೇಕು. ಮುಂದಿನ ದಿನಗಳಲ್ಲಿ ಮಂಡ್ಯದ ಸವಾರ್ಂಗೀಣ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮತಗಳ ಎಣಿಕೆಯ ದಿನದಂದು ದೇಶದ ಮೊದಲ ಫಲಿತಾಂಶ ಮಂಡ್ಯದಿಂದ ಬರಬೇಕು. ಎಚ್‍ಡಿಕೆ ಗೆಲ್ಲುವುದನ್ನು ಯಾವ ದುಷ್ಟ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ. ಮಂಡ್ಯದಿಂದ ಕುಮಾರಸ್ವಾಮಿಯವರು ಗೆದ್ದು ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡುತ್ತಾರೆ. ಕರ್ನಾಟಕದ ಅಭಿವೃದ್ಧಿಗೂ ಕೈಜೋಡಿಸುತ್ತಾರೆ. ಅಂತಹ ಜನ ನಾಯಕನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು.

ಮತ್ತೆ ಶನಿವಾರ ರಾಜ್ಯಕ್ಕೆ ಮೋದಿ ಆಗಮನ ಬೃಹತ್‌ ಸಮಾವೇಶದಲ್ಲಿ ಭಾಗಿ

ಮತ್ತೆ ಶನಿವಾರ ರಾಜ್ಯಕ್ಕೆ ಮೋದಿ ಆಗಮನ ಬೃಹತ್‌ ಸಮಾವೇಶದಲ್ಲಿ ಭಾಗಿ

Share.
Exit mobile version