ಕೆಎನ್‌ಎನ್‌ಸಿನಿಮಾಡೆಸ್ಕ್‌: ಕರ್ನಾಟಕದ ಕರಾವಳಿ ತೀರದ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಕುದ್ರು’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಬೆಂಗಳೂರಿನ ‘ಅಭಿಮಾನ್ ಸ್ಟುಡಿಯೋ’ದಲ್ಲಿ ಹಾಕಲಾಗಿದ್ದ ವಿಭಿನ್ನ ಸೆಟ್ ನಲ್ಲಿ, ‘ಕುದ್ರು’ ಸಿನಿಮಾದಲ್ಲಿ ಬರುವ ಪಾರ್ಟಿ ಸಾಂಗ್ ಅನ್ನು ಸೆರೆಹಿಡಿಯುವ ಮೂಲಕ ಚಿತ್ರತಂಡ ಸದ್ದಿಲ್ಲದೆ, ಚಿತ್ರೀಕರಣ ಪೂರ್ಣಗೊಳಿಸಿದೆ.

ಇನ್ನು ‘ಕುದ್ರು’ ಎಂಬುದು ಮೂಲತಃ ತುಳು ಭಾಷೆಯ ಪದವಾಗಿದ್ದು, ಅದಕ್ಕೆ ‘ದ್ವೀಪ’ ಎಂಬ ಅರ್ಥವಿದೆ. ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಹಾಡಿಗಾಗಿ ‘ಅಭಿಮಾನ್ ಸ್ಟುಡಿಯೋ’ದಲ್ಲಿ ಚಿತ್ರತಂಡ ವಿಶೇಷ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಿದೆ.

ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೂರು ಧರ್ಮದ ಮೂರು ಪಾತ್ರಗಳ ಸುತ್ತ ‘ಕುದ್ರು’ ಚಿತ್ರದ ಕಥಾಹಂದರ ಸಾಗುತ್ತದೆ. ಮನರಂಜನೆಯ ಜೊತೆಗೆ ಧಾರ್ಮಿಕ ಐಕ್ಯತೆಯ ಸಂದೇಶ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

‘ಕುದ್ರು’ ಚಿತ್ರಕ್ಕೆ ಮಧು ವೈ. ಜಿ ಹಳ್ಳಿ ನಿರ್ದೇಶನವಿದ್ದು, ಪ್ರಿಯಾ ಹೆಗ್ಡೆ, ಗಾಡ್ವಿನ್, ಹರ್ಷಿತ್, ಫರ್ಹಾನ್, ವಿನುತ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಭಾಸ್ಕರ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಿರುವ ‘ಕುದ್ರು’ ಚಿತ್ರತಂಡ, ಹೊಸವರ್ಷದ ಆರಂಭದಲ್ಲಿ, ‘ಕುದ್ರು’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Share.
Exit mobile version