ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬಹು ಸಮಯದ ನಂತರ ಬಾಲಿವುಡ್ ನ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಮತ್ತೊಂದು ರೊಮ್ಯಾಂಟಿಕ್ ಹಾಡಿನ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ. ಹೌದು, ಕುನಾಲ್ ಗಾಂಜಾವಾಲಾ ಸದ್ಯ ‘ರಿಚ್ಚಿ’ ಸಿನಿಮಾದ ರೊಮ್ಯಾಂಟಿಕ್ ಗೀತೆಯೊಂದಕ್ಕೆ ಧ್ವನಿಯಾಗಿದ್ದು, ಇದೀಗ ಈ ಗೀತೆ ಬಿಡುಗಡೆಯಾಗಿದೆ.
ಯುವ ಪ್ರತಿಭೆ ರಿಚ್ಚಿ ನಾಯಕನಾಗಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ರಿಚ್ಚಿ’ ಸಿನಿಮಾದ ಮೊದಲ ರೊಮ್ಯಾಂಟಿಕ್ ಗೀತೆ ಕುನಾಲ್ ಗಾಂಜಾವಾಲಾ ಧ್ವನಿಯಲ್ಲಿ ಮೂಡಿಬಂದಿದ್ದು, ಸ್ವತಃ ಕುನಾಲ್ ಗಾಂಜಾವಾಲಾ ಅವರ ಸಮ್ಮುಖದಲ್ಲಿಯೇ ಚಿತ್ರತಂಡ ಈ ಗೀತೆಯನ್ನು ಬಿಡುಗಡೆಗೊಳಿಸಿದೆ.

ಇದೇ ವೇಳೆ ಮಾತನಾಡಿದ ಗಾಯಕ ಕುನಾಲ್ ಗಾಂಜಾವಾಲಾ, ‘ನಟ ಮತ್ತು ನಿರ್ದೇಶಕ ರಿಚ್ಚಿ ತುಂಬ ಪ್ರತಿಭಾನ್ವಿತ. ಹೊಸರೀತಿಯಲ್ಲಿ ಸಿನಿಮಾ ಮಾಡಬೇಕು ಎಂಬ ಅವರ ಹಂಬಲ ಸ್ಕ್ರೀನ್ ನಲ್ಲಿ ಕಾಣುತ್ತಿದೆ. ತುಂಬ ಸಮಯದ ನಂತರ ಕನ್ನಡದಲ್ಲಿ ರೊಮ್ಯಾಂಟಿಕ್ ಮೆಲೋಡಿ ಹಾಡಿಗೆ ಧ್ವನಿಯಾಗಿದ್ದು ಖುಷಿಕೊಟ್ಟಿದೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕುನಾಲ್ ಗಾಂಜಾವಾಲಾ ಹಾಡಿರುವ ‘ಕಳೆದು ಹೋಗಿರುವೆ…’ ಎಂಬ ಸಾಲುಗಳಿಂದ ಶುರುವಾಗಿರುವ ಈ ರೊಮ್ಯಾಂಟಿಕ್ ಗೀತೆಗೆ ಗೌಸ್ ಫೀರ್ ಸಾಹಿತ್ಯವಿದ್ದು, ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದಾರೆ. ಗೀತೆಯಲ್ಲಿ ನಾಯಕ ರಿಚ್ಚಿ ಅವರಿಗೆ ರಮೋಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ.
‘ಇದೊಂದು ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೆ ಸೇರಬಹುದಾದ ಸಿನಿಮಾವಾದರೂ, ಹಾಡುಗಳಿಗೂ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆ. ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ‘ರಿಚ್ಚಿ’ ಸಿನಿಮಾವನ್ನು ಮಾಡಿದ್ದೇವೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಆಗಸ್ಟ್ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂಬುದು ನಾಯಕ ಕಂ ನಿರ್ದೇಶಕ ರಿಚ್ಚಿ ಮಾತು.
ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ‘ರಿಚ್ಚಿ’ ಸಿನಿಮಾವನ್ನು ಅಣಜಿ ನಾಗರಾಜ್ ಅರ್ಪಿಸುತ್ತಿದ್ದು, ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.