ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದ್ದ ವೆಡ್ಡಿಂಗ್ ಗಿಫ್ಟ್ ಸಿನಿಮಾ ಟೀಸರ್ ರಿಲೀಸ್ ಮಾಡಿ ಗಮನ ಸೆಳೆದಿದೆ. ಯಾಕಂದ್ರೆ ಟೀಸರ್ ನಲ್ಲಿ ತೋರಿಸಿದ ವಿಚಾರ ಅಷ್ಟು ಗಂಭೀರವಾದಂತದ್ದು. ಎಷ್ಟೇ ಕಾನೂನುಗಳು ಬರಲಿ, ಎಷ್ಟೇ ಕಾಲ ಬದಲಾಗಲಿ, ಹೆಣ್ಣು ಮಕ್ಕಳ ಸುರಕ್ಷತೆ ಎಂಬ ವಿಚಾರ ಬಂದಾಗ ಆಗುವ ತಪ್ಪುಗಳು ಆಗಿಯೇ ಇರುತ್ತವೆ. ಈ ಸುರಕ್ಷತೆ ಬಗ್ಗೆ ಮಾತನಾಡಿದರೆ ಅಪರಾಧಿ ಸ್ಥಾನದಲ್ಲಿ ಹೆಣ್ಣು ಮಗಳೇ ನಿಲ್ಲುತ್ತಾಳೆ. ಈ ಮಾತುಗಳನ್ನು ಕೇಳಿದಾಗ ಅದೆಷ್ಟೋ ಹೆಣ್ಣು ಮಕ್ಕಳು ಮನಸ್ಸಲ್ಲಿಯೇ ಹೌದು ಹೌದು ಎಂದುಕೊಂಡಿರುತ್ತಾರೆ. ಈ ಸಿನಿಮಾವೇಕೋ ನಮ್ಮ ಪರವಾಗಿ ಸ್ಟ್ರಾಂಗ್ ಆಗಿ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಎಂಬ ಭಾವನೆ ಮೂಡುತ್ತದೆ.
ಇಷ್ಟಕ್ಕೆ ಖುಷಿ ಪಟ್ಟರೆ ಸಾಲದು. ಯಾಕಂದ್ರೆ ಉಪಯೋಗ ಎಂಬುದು ಇದ್ದಲ್ಲಿ ದುರುಪಯೋಗ ಮಾಡಿಕೊಳ್ಳುವವರು ಇರುತ್ತಾರೆ. ಟೀಸರ್ ನಲ್ಲಿ ವಾದ ಪ್ರತಿವಾದದ ನಡುವೆ ಆ ದುರುಪಯೋಗದ ಪರಿಚಯವೂ ಆಗಿದೆ. ಸುರಕ್ಷತೆಗಾಗಿ ದನಿ ಎತ್ತುವ ಹೆಣ್ಣು ಮಕ್ಕಳಿದ್ದರೆ, ಜೀವನದ ಯಾವುದೋ ಸ್ವಾರ್ಥದ ಸಂತಸಕ್ಕಾಗಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ನಟಿ ಪ್ರೇಮಾ ಒಂದು ಪಾತ್ರವಾಗಿ ಆ ಸತ್ಯಾಸತ್ಯತೆಯನ್ನು ಹೊರಗೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಮೂಲಕ ವಿಭಿನ್ನತೆ, ಗಟ್ಟಿಕಥೆಯನ್ನಿಟ್ಟುಕೊಂಡು ವಿಕ್ರಂ ಪ್ರಭು ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೇಮಾ ಹೇಳಿದ್ದು ಸರಿಯಾ, ಸೋನು ಗೌಡ ಸತ್ಯ ಹೇಳುತ್ತಿದ್ದಾರಾ, ನಂದೀಶ್ ನಾಣಯ್ಯ ನಿಜವಾಗಲೂ ತಪ್ಪು ಮಾಡಿಲ್ಲವಾ, ಅಚ್ಯುತಕುಮಾರ್ ನ್ಯಾಯ ಕೊಡಿಸುತ್ತಾರಾ ಎಂಬೆಲ್ಲಾ ಕುತೂಹಲವನ್ನು ಕೆರಳಿಸುವಷ್ಟು ಚೆಂದದ ಟೀಸರ್ ಇದಾಗಿದೆ ಎನ್ನಬಹುದು.
ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದ ಹೊಣೆಯನ್ನು ವಿಕ್ರಂ ಪ್ರಭು ಅವರೇ ಹೊತ್ತುಕೊಂಡಿದ್ದಾರೆ. ಟೀಸರ್ ಒಂದಷ್ಟು ಭರವಸೆಯನ್ನಂತು ಹುಟ್ಟು ಹಾಕಿದೆ. ಜೂನ್ ತಿಂಗಳಲ್ಲಿ ತೆರೆಗೆ ತರಲು ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ