shivamogga city news – Kannada News Now


State

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಶಾಕ್ ನೀಡಿದೆ. ನಗರದಲ್ಲಿ ಇಂದು ಹೊಸದಾಗಿ 10 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಇವರಲ್ಲಿ 31 ಜನರ ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 52 ಆಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು 204 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಈ ಸೋಂಕಿತರಲ್ಲಿ ಶಿವಮೊಗ್ಗ ಒಂದರಲ್ಲೇ 10 ಜನರಿಗೆ ಕೊರೋನಾ ಪತ್ತೆಯಾಗಿದೆ ಎಂಬುದಾಗಿಯೂ ತಿಳಿಸಿದೆ.

ಅಂದಹಾಗೇ 10 ಕೊರೋನಾ ಸೋಂಕಿತರಲ್ಲಿ 8 ಜನರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹಿಂತಿರುಗಿ, ಆ ನಂತ್ರ ಜಿಲ್ಲೆಗೆ ವಾಪಾಸ್ ಆಗಿದ್ದವರು ಆಗಿದ್ದಾರೆ. ಇನ್ನುಳಿದಂತೆ ಒಬ್ಬರು ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಮತ್ತೊಬ್ಬ ಕೊರೋನಾ ಸೋಂಕಿತನಿಗೆ ಹೇಗೆ ಕೊರೋನಾ ಸೋಂಕು ತಗುಲಿತು ಎಂಬುದನ್ನು ಇನ್ನೂ ಪತ್ತೆ ಹಚ್ಚಲಾಗುತ್ತಿದೆ.

State

ಶಿವಮೊಗ್ಗ : ಗ್ರಾಮೀಣ ರಸ್ತೆಗಳನ್ನು ಡಾಂಭಾರೀಕರಣ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳು ಟಾರ್ ರಸ್ತೆ ಮಾಡಲಾಗುತ್ತಿದೆ. ಆದ್ರೇ ಮಾಡ್ತಾ ಇರುವಂತ ರಸ್ತೆಗಳ ಕ್ವಾಲಿಟಿ ಹೇಗ್ ಇಂದೆ ಅಂತ ಯಾರೂ ಗಮನಿಸುತ್ತಿಲ್ಲಾ ಅಂತ ಕಾಣಿಸುತ್ತಿದೆ. ಜಿಲ್ಲೆಯ ಸಾಗರ ತಾಲೂಕಿನ ಸೂರುಗುಪ್ಪೆ ಗ್ರಾಮದಲ್ಲಿ ಡಾಂಭಾರೀಕರಣ ಮಾಡಿ ಜಸ್ಟ್ 15 ದಿನ ಅಷ್ಟೇ ಆಗಿರೋದು. ಕಿತ್ತು ಕಿತ್ತು ಹೋಗ್ತಾ ಇದೆ. ಹಾಗಿದ್ದರೇ ಯಾವ ಸಂಪತ್ತಿಗೆ ಹೀಗೆ ಡಾಂಭಾರೀಕರಣ ರಸ್ತೆ ಮಾಡಬೇಕು.? ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೀಗಾ ರಸ್ತೆ ಮಾಡೋದು ಎಂಬುದಾಗಿ ಗ್ರಾಮಸ್ತರು ಕಿಡಿಕಾರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸೂರಗುಪ್ಪೆ ಗ್ರಾಮದಲ್ಲಿ, ಕಳೆದ 15 ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿನ ಮಣ್ಣಿನ ರಸ್ತೆಗಳಿಗೆ ಡಾಂಭಾರೀಕರಣ ಮಾಡಲಾಗಿದೆ. ದಿನ ದಿನವೂ ಧೂಳಿನಿಂದ ಕೂಡಿದ್ದ ರಸ್ತೆ ಟಾರ್ ಹಾಕಿದ್ದರಿಂದ ಸೂಪರ್ ಆಯ್ತು ಅಂತ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ, 15 ದಿನ ಕಳೆಯೋದ್ರಲ್ಲಿ, ಟಾರ್ ಹಾಕಿದ ಕಾಂಟ್ರಾಕ್ಟರ್ ಕ್ವಾಲಿಟಿ ಏನ್ ಅಂತ ಗೊತ್ತಾಗಿದೆ.

ಅವೈಜ್ಞಾನಿಕ ಕ್ರಮವನ್ನು ಅನುಸರಿಸಿ ಜಲ್ಲಿ ಹಾಕಿದ ಕೆಲ ದಿನಗಳಲ್ಲಿಯೇ ಟಾರ್ ಹಾಕಿದ್ದರಿಂದ, ಸರಿಯಾಗಿ ಕೂರದ ಡಾಂಭಾರ್, ಕೈಯಲ್ಲಿ ಕಿತ್ತರೇ ಸಾಗು, ರಸ್ತೆಯಲ್ಲಿ ಓಡಾಡಿದ್ರೇ ಸಾಕು ಅಷ್ಟಕ್ಕೇ ಕಿತ್ತು ಕಿತ್ತು ಹೋಗುತ್ತಿದೆ. ಸೂರಗುಪ್ಪೆ ಗ್ರಾಮದಲ್ಲಿ ಸುಮಾರು 4 ಕಿಲೋ ಮೀಟರ್ ರಸ್ತೆಯನ್ನು 1 ಕೋಟಿಗೆ ಕಾಂಟ್ರಾಕ್ಟ್ ಪಡೆದಿದ್ದಂತ ಕಾಂಟ್ರಾಕ್ಟರ್ ಒಬ್ಬರು, ಮಾಡಿಸಿದ್ದು ಮಾತ್ರ 15 ದಿನಳಲ್ಲೇ ಕಿತ್ತೋಗುವಂತ ರಸ್ತೆಯನ್ನು. ಕ್ವಾಲಿಟಿಯೇ ಇಲ್ಲ. ಈ ಸಂಪತ್ತಿಗ್ಯಾಕೆ ರಸ್ತೆ ಮಾಡಿಸಬೇಕು. ಸರ್ಕಾರದ ದುಡ್ಡನ್ನು ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತೆ ಪೋಲು ಮಾಡಬೇಕು ಎಂಬುದಾಗಿ ಗ್ರಾಮಸ್ತರು ಕಿಡಿಕಾರಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಸೂರಗುಪ್ಪೆ ಗ್ರಾಮದ ಗ್ರಾಮಸ್ಥರು ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ, ಸೂರಗುಪ್ಪೆಯಲ್ಲಿ 4 ಕಿಲೋ ಮೀಟರ್ ಗ್ರಾಮದಲ್ಲಿ ರಸ್ತೆ ಡಾಂಭಾರೀಕರಣ ಮಾಡಿದ್ದಾರೆ. ಮಾಡಿ 15 ದಿನವಾಗಿರೋದು.. ಕೈಯಲ್ಲಿ ಕಿತ್ತರೇ ಸಾಗು ಕಿತ್ತು ಹೋಗ್ತಾ ಇದೆ. ಬೈಕ್ ಸ್ಟಾಂಡ್ ಹಾಕಿ ರಸ್ತೆಯಲ್ಲಿ ನಿಲ್ಲಿಸಿದ್ರೇ ಸಾಕು ಕಿತ್ತೋಗ್ತಾ ಇದೆ. ಧನ ಕರುಗಳು ಅಡ್ಡಾಡಿದ್ರೇ ಸಾಕು ಹಾಳಾಗುತ್ತಿದೆ. ಇಂತಹ ಕಳಪೆ ಟಾರ್ ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗುಣಮಟ್ಟವಿಲ್ಲದಂತ ರಸ್ತೆಯನ್ನು ಪುನಹ ಮಾಡಬೇಕು. ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಡಾಂಭಾರೀಕರಣ ಮಾಡುತ್ತದೆ ಎಂಬುದು ಕೇವಲ ಮಾತಿಗಷ್ಟೇ.. ಗುಣಮಟ್ಟಕ್ಕೆ ಪ್ರಾಧಾನ್ಯತೇ ನೀಡದೇ ಹೀಗೆ ರಸ್ತೆ ಮಾಡಿದಾಗ ಸರ್ಕಾರದ ಬೊಕ್ಕಸದ ಹಣ ಎಲ್ಲಾ ವೇಸ್ಟ್. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹೀಗೆ ಕಳಪೆ ರಸ್ತೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಗುಣಮಟ್ಟದಿಂದ ಕೂಡಿದಂತ ರಸ್ತೆಯನ್ನು ಮಾಡಲು ಅನುವಾಗಬೇಕು.

ವರದಿ : ವಸಂತ ಬಿ ಈಶ್ವರಗೆರೆ

State

ಶಿವಮೊಗ್ಗ : ನಾಳೆಯಿಂದ ನಗರದಲ್ಲಿ ಹೊಟೇಲ್ ಓಪನ್ ಆಗಲಿದೆ. ಇದಕ್ಕಾಗಿ ಅಂತಿಮ ಹಂತದ ಭರದ ಸಿದ್ಧತೆಯನ್ನು ಜಿಲ್ಲೆಯಲ್ಲಿನ ಹೋಟೆಲ್ ಗಳಲ್ಲಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಕೊರೋನಾ ಭೀತಿಯ ಮುಂಜಾಗ್ರತಾ ಕ್ರಮ ಕೂಡ ಅನುಸರಿಸಿಕೊಂಡು ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಹೋಟೆಲ್ ಗಳು ಗ್ರಾಹಕರಿಗೆ ಹೋಟೆಲ್ ಸವಿ ರುಚಿಯ ತಿನಿಸುಗಳನ್ನು ಉಣಬಡಿಸಲಿವೆ.

ರಾಜ್ಯ ಸರ್ಕಾರ ನಾಳೆಯಿಂದ ರಾಜ್ಯಾದ್ಯಂತ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲೂ ಹೋಟೆಲ್ ಓಪನ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಹೋಟೆಲ್ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವಂತ ಹೋಟೆಲ್ ಮಾಲೀಕರು, ನಾಳೆಯಿಂದ ಗ್ರಾಹಕರಿಗೆ ಸೇವೆ ನೀಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ಅಂದಹಾಗೇ ನಾಳೆಯಿಂದ ತೆರೆಯಲಿರುವ ಹೋಟೆಲ್ ಗಳಲ್ಲಿ ಒಂದು ಟೇಬಲ್ ನಲ್ಲಿ ಒಬ್ಬರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಟೇಬಲ್ ಭರ್ತಿಯಾದ ನಂತ್ರ, ಮತ್ತೆ ಯಾರಿಗೂ ಹೋಟೆಲ್ ಒಳ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಒಬ್ಬರಾದ ನಂತ್ರ ಒಬ್ಬರಿಗೆ ಅವಕಾಶ ನೀಡುವ ಮೂಲಕ ಕೊರೋನಾ ಭೀತಿಯ ನಡುವೆಯೂ ಹೋಟೆಲ್ ಗಳು ತೆರೆಯಲಿವೆ. ಈ ಮೂಲಕ ಹೋಟೆಲ್ ಸವಿ ರುಚಿಯ ತಿಂಡಿ ತಿನಿಸುಗಳ ಸವಿರುಚಿ ಸವಿಯಲು ಅವಕಾಶ ದೊರೆಯಲಿದೆ.

State

ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಶಿವಮೊಗ್ಗದಲ್ಲಿ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿರಲಿಲ್ಲ. ಹೀಗಾಗಿ ಕೊಂಚ ಜಿಲ್ಲೆಯ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿತ್ತು. ಆದ್ರೇ ಇಂದು ಬೆಳ್ಳಂಬೆಳಗ್ಗೆಯೇ ಜಿಲ್ಲೆಯ ಜನರಿಗೆ ಶಾಕ್ ಎನ್ನುವಂತೆ 12 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ವರದಿ ಬರಲಿದೆ ಎನ್ನಲಾಗುತ್ತಿದೆ. 

ಶಿವಮೊಗ್ಗದಲ್ಲಿ 53 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಈ ಸೋಂಕಿತರ ಸಂಖ್ಯೆಯಲ್ಲಿ 28 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಸಕ್ರೀಯ ಸೋಂಕತರ ಸಂಖ್ಯೆ 25ಕ್ಕೆ ಇಳಿಕೆಯಾಗಿತ್ತು. ಆದ್ರೇ ಇಂದು ಜಿಲ್ಲೆಯಲ್ಲಿ 12 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿ ಬರಲಿದೆ ಎನ್ನಲಾಗುತ್ತಿದೆ.

ಜಿಲ್ಲೆಗೆ ಮುಂಬೈನ್ ನಿಂದ ಬಂದಂತ ಶಿಕಾರಿಪುರದಲ್ಲಿ 5 ಜನರಿಗೆ, ಹೊಸನಗರದಲ್ಲಿ 4 ಜನರಿಗೆ ಮತ್ತು ಸೊರಬಾ ತಾಲೂಕಿನಲ್ಲಿ 3 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಹೇಳಲಾಗುತ್ತಿದೆ. 5 ಮಕ್ಕಳು ಸೇರಿ 12 ಜನರಿಗೆ ಇಂದು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬರಲಿದೆ ಎನ್ನಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಲಿದೆಯಂತೆ. ಈ ಬಗ್ಗೆ ಸಂಜೆಯ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್ ನಿಂದಾಗಿ ಸ್ಪಷ್ಟವಾಗಲಿದೆ.

State

ಶಿವಮೊಗ್ಗ : ಕೋವಿಡ್-19 ಸೋಂಕಿನ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಅನ್ನು ಜೂನ್ 30ರ ವರೆಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ಕೂಡ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಿಗೆ ರಜೆಯನ್ನು ಮುಂದಿನ ಆದೇಶದ ವರೆಗೆ ವಿಸ್ತರಣೆ ಮಾಡಿ ಸುತ್ತೋಲೆ ಹೊರಡಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ದೇಶಾದ್ಯಂತ ಹರಡುತ್ತಿರುವ ಕೋವಿಡ್-19 ನಿಯಂತ್ರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹೊರಡಿಸಲಾದ ವಿಶ್ವವಿದ್ಯಾಲಯದ ಉಲ್ಲೇಖಿತ ಸುತ್ತೋಲೆಯನ್ನು ಮುಂದುವರೆಸುತ್ತಾ, ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಘಟಕ, ನೇರ ಆಡಳಿತಕ್ಕೊಳಪಟ್ಟ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಂದಿನ ಆದೇಶದವರೆಗೆ ರಜೆಯನ್ನು ಮುಂದುವರೆಸಲಾಗಿದೆ. ಕಾಲೇಜು, ಅಧ್ಯಯನ ವಿಭಾಗಗಳು ಪ್ರಾರಂಭವಾಗುವ ಬಗ್ಗೆ ಸರ್ಕಾರವು ಆದೇಶ ಹೊರಡಿಸಿದ ನಂತ್ರ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

State

ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಅವರು ತಿಳಿಸಿದರು.

ಅವರು ಮಂಗಳವಾರ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಶಿವಮೊಗ್ಗ ಮಾದರಿ ನಗರವಾಗಿ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿರುವ ಎಲ್ಲಾ ಬೀದಿ ದೀಪಗಳನ್ನು ಬದಲಾಯಿಸಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ 22 ಸಾವಿರ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಪಿಪಿ ಮಾದರಿಯ ಈ ಯೋಜನೆಯಿಂದಾಗಿ ವಿದ್ಯುತ್ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗಲಿದ್ದು, 7ವರ್ಷಗಳ ಉಚಿತ ನಿರ್ವಹಣೆ ಇರಲಿದೆ ಎಂದರು.

ಅಕ್ರಮ ಸಕ್ರಮ: ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ಸಕ್ರಮಗೊಳಿಸುವ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಸಕ್ರಮಗೊಳಿಸುವ ಕುರಿತು ಸ್ಪಷ್ಟವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಸಂಪುಟದ ಅನುಮೋದನೆಯೊಂದಿಗೆ ಇದನ್ನು ಅನುಷ್ಟಾನಗೊಳಿಸಲಾಗುವುದು. ಅಕ್ರಮ ನಿರ್ಮಾಣಗಳ ಪಟ್ಟಿಯನ್ನು ಸಿದ್ಧಪಡಿಸಲು ಸಮೀಕ್ಷೆ ನಡೆಸಲು ಸೂಚಿಸಲಾಗಿದ್ದು, ನಿಗದಿತ ಸಮಯದ ಒಳಗಾಗಿ ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ವಾಜಪೇಯಿ ಬಡಾವಣೆ ಸಮಸ್ಯೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ಸಮಸ್ಯೆಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಈಗಾಗಲೇ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪ್ರಕರಣ ಹಿಂತೆಗೆದುಕೊಳ್ಳಲು ಮನವಿ ಮಾಡಲಾಗಿದೆ ಎಂದರು.

ಸ್ಥಳ ಪರಿಶೀಲನೆ: ಸಚಿವರು ಶಿವಮೊಗ್ಗ ನಗರದ ಬಸ್‍ನಿಲ್ದಾಣದಿಂದ ಆಲ್ಕೋಳ ವೃತ್ತದವರೆಗೆ ನಡೆಯುತ್ತಿರುವ ಮಾದರಿ ರಸ್ತೆ ಕಾಮಗಾರಿ, ವಿನೋಭಾ ನಗರದ ರಸ್ತೆ ಬದಿ ಪಾದಚಾರಿ ರಸ್ತೆ ಕಾಮಗಾರಿ, ಪುರಲೆ ಒಳಚರಂಡಿ ಕಾಮಗಾರಿ, ಲಕ್ಷ್ಮೀ ಥಿಯೇಟರ್ ವೃತ್ತ ಅಭಿವೃದ್ಧಿ ಕಾಮಗಾರಿ, ರಾಜೇಂದ್ರ ನಗರದಲ್ಲಿ ನಡೆಯುತ್ತಿರುವ ಉದ್ಯಾನವನ, ಒಳಾಂಗಣ ಕ್ರೀಡಾಂಗಣ ಸಮುಚ್ಛಯ, ಜಿಲ್ಲಾ ಪಂಚಾಯತ್ ಮುಂಭಾಗ ನೀರಿನ ಟ್ಯಾಂಕ್ ನಿರ್ಮಾಣ, ಬೊಮ್ಮನಕಟ್ಟೆ ಕೆರೆ ಅಭಿವೃದ್ಧಿ, ಆದಿಚುಂಚನಗಿರಿ ಬಳಿ ಸಮುಚ್ಛಯ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.

ಜನರ ಸಹಭಾಗಿತ್ವ ಅತಿ ಅಗತ್ಯ: ಜನರ ಸಹಭಾಗಿತ್ವ ಇದ್ದರೆ ಮಾತ್ರ ಯಾವುದೇ ಕಾಮಗಾರಿ ಯಶಸ್ವಿಯಾಗಲು ಸಾಧ್ಯವಿದೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಂಘ ರಚಿಸಿ ಅವುಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು. ರಾಜೇಂದ್ರ ನಗರದಲ್ಲಿ ನೀರಿನ ಕಾಲುವೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಸ್ಥಳೀಯರೇ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದರೆ ಅದನ್ನು ತೆರವುಗೊಳಿಸಿ ನಿವಾಸಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಮಳೆಗಾಲದಲ್ಲಿ ಎಲ್ಲಿಯೂ ನೀರು ಕಟ್ಟಿ ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಅವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.

State

ಶಿವಮೊಗ್ಗ : ಮುಂಗಾರಿನ ಅವಧಿಯಲ್ಲಿ ಉಂಟಾಗಬಹುದಾದ ಎಲ್ಲಾ ಸಂಭಾವ್ಯ ಅಪಾಯಗಳನ್ನು ಎದುರಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳವಾರ ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಿನ್ನೆಲೆಯಲ್ಲಿ, ಈ ಬಾರಿ ಮೊದಲೆ ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಜಿಲ್ಲಾಡಳಿತದ ಬಳಿ ಲಭ್ಯವಿರುವ ಬೋಟು, ರಕ್ಷಣಾ ಕವಚಗಳು ಎಲ್ಲಾ ಸಾಧನ ಸಲಕರಣೆಗಳನ್ನು ಪರಿಶೀಲಿಸಬೇಕು ಎಂದರು.

ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಗ್ರಾಮಗಳನ್ನು ಈಗಲೇ ಗುರುತಿಸಬೇಕು. ತಾಲೂಕಿನಲ್ಲಿ ಲಭ್ಯವಿರುವ ರಕ್ಷಣಾ ಸಾಮಾಗ್ರಿ, ಸಲಕರಣೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಳೆಗೆ ಸುಲಭವಾಗಿ ಕುಸಿಯಬಹುದಾದ ಮನೆ, ಕಟ್ಟಡಗಳನ್ನು ಗುರುತಿಸಿ ತೆರವು ಅಥವಾ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ 6ಬೋಟುಗಳು, 25 ರಕ್ಷಣಾ ಕವಚಗಳು, ಮುರಿದು ಬೀಳುವ ಮರಗಳನ್ನು ತೆರವುಗೊಳಿಸಲು 50 ಟ್ರೀ ಕಟ್ಟರ್‍ಗಳನ್ನು ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಹಲವಾರು ಸಾಹಸಿ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಎಲ್ಲರ ಸಹಕಾರವನ್ನು ಪಡೆಯಬೇಕು. ಇದಕ್ಕಾಗಿ ಅಂತಹ ಸಂಘಸಂಸ್ಥೆಗಳ ವಿವರ, ಅವರಲ್ಲಿ ಲಭ್ಯವಿರುವ ರಕ್ಷಣಾ ಸಲಕರಣೆಗಳ ವಿವರಗಳನ್ನು ಪಟ್ಟಿ ಮಾಡಬೇಕು ಎಂದರು.

ನೆರೆ ನೀರು ಸುಲಭವಾಗಿ ನುಗ್ಗಬಹುದಾದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಈಗಾಗಲೇ ಸೂಚನೆಗಳನ್ನು ನೀಡಬೇಕು. ಒಂದು ವೇಳೆ ಜನರನ್ನು ತುರ್ತಾಗಿ ಸ್ಥಳಾಂತರಿಸುವ ಸಂದರ್ಭ ಬಂದರೆ ಅವರಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಎಲ್ಲಾ ತಾಲೂಕುಗಳಲ್ಲಿ ಈಗಲೇ ಗುರುತಿಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕು. ಗಾಳಿ ಮಳೆಗೆ ಉರುಳಿ ಬೀಳುವ ವಿದ್ಯುತ್ ಕಂಬಗಳನ್ನು ತಕ್ಷಣ ದುರಸ್ತಿ ಮಾಡಲು ಸಿದ್ದತೆ ಮಾಡಬೇಕು. ಇದಕ್ಕಾಗಿ ಅಗತ್ಯ ಪ್ರಮಾಣದ ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್‍ಗಳು, ತಂತಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮಳೆಯಿಂದ ಸಾವು ನೋವುಗಳು ಸಂಭವಿಸದಂತೆ ಗರಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಚಾಲನೆ: ಅತಿವೃಷ್ಟಿ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ನಿಧಿಗೆ ಕೆರೆಯಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

State

ಶಿವಮೊಗ್ಗ : ಸಾಗರ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ, ರೋಗಿಗಳು ಸಾಲುಗಟ್ಟಿ ನಿಂತಿದ್ದರೂ, ಒಬ್ಬರೇ ಒಬ್ಬರು ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದ ಯಾವುದೇ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಇದ್ದದ್ದನ್ನು ಗಮನಿಸಿ, ಗರಂ ಆದ್ರು. ಅಲ್ಲದೇ ಸ್ಥಳದಲ್ಲಿಯೇ ತಾಲೂಕು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ, ಸರಿಯಾದ ಸಮಯಕ್ಕೆ ಹಾಜರಾಗದ ವೈದ್ಯರು, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇಂದು ಶಾಸಕ ಹರತಾಳು ಹಾಲಪ್ಪ, ಬೆಳಿಗ್ಗೆ ಬೆಳಿಗ್ಗೆಯೇ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಕೇವಲ ಒಬ್ಬರೇ ಒಬ್ಬರು ವೈದ್ಯರು ಮಾತ್ರವೇ ಕರ್ತವ್ಯದಲ್ಲಿ ಇದ್ದದ್ದನ್ನು ಕಂಡು, ಕೆಂಡಾಮಂಡಲರಾದರು. ನಾವು ಏನೋ ಹೋಗಲಿ ತಾಲೂಕಿನ ಜನರಿಗೆ ಸರಿಯಾದ ವೈದ್ಯಕೀಯ ಸೇವೆ ಸಿಗ್ತಾ ಇದೆಯಲ್ಲಾ ಅಂತ ಸುಮ್ಮನೇ ಆದ್ರೇ.. ಏನ್ ರೀ ಬರೀ ಒಬ್ಬರೇ ಒಬ್ಬರು ಡಾಕ್ಟರ್ ಮಾತ್ರ ಕೆಲಸದಲ್ಲಿದ್ದು, ಮಿಕ್ಕವರು 10.45 ಆದ್ರೂ ಬಂದಿಲ್ಲ. ಏನ್ ಇದು ಅವ್ಯವಸ್ಥೆ ಎಂಬುದಾಗಿ ಸ್ಥಳದಲ್ಲಿದ್ದಂತ ಅಧಿಕಾರಿಗಳು, ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಎಷ್ಟು ಜನರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು..? ಕೇವಲ ಒಬ್ಬರೇ ಒಬ್ಬರು ಡಾಕ್ಟರ್ ಮಾತ್ರ ಇದ್ದಾರೆ… ಮಿಕ್ಕವರೆಲ್ಲಾ ಎಲ್ಲಿ ಹೋಗಿದ್ದಾರೆ..? ಹೇ ಹಾಜರಾತಿ ಪುಸ್ತಕ ಎಲ್ಲಿದೆ ತಗೊಂಡು ಬನ್ನಿ ಅಂತ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಚಳಿ ಬಿಡಿಸಿದರು. ಹಾಜರಾತಿ ಪುಸ್ತರಕ ನೋಡಿದ ಶಾಸಕ ಹರತಾಳು ಹಾಲಪ್ಪ, ಕೂಡಲೇ ತಾಲೂಕು ವೈದ್ಯಾಧಿಕಾರಿಗಳಿಗೆ ಕರೆಮಾಡಿ, ಇಷ್ಟು ಹೊತ್ತು ಆದ್ರೂ ಒಬ್ಬರೇ ಒಬ್ಬರು ವೈದ್ಯರು ಹಾಜರಿದ್ದಾರೆ. ಮಿಕ್ಕುಳಿದ ವೈದ್ಯರೆಲ್ಲಾ ಎಲ್ಲಿಗೆ ಹೋಗಿದ್ದಾರೆ.? ಸಮಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ, ಕೆಲಸದ ಸಮಯದಲ್ಲಿ ವೈದ್ಯರು ಇಲ್ಲದೆ ಚಿಕಿತ್ಸೆಗೆ ಬಂದಿರುವ ರೋಗಿಗಳನ್ನು ವಿನಾಕಾರಣ ಕಾಯಿಸುತ್ತಿದ್ದು. #ಜಿಲ್ಲಾ_ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

Gepostet von Harathalu Halappa am Sonntag, 31. Mai 2020

State

ಶಿವಮೊಗ್ಗ : ಜೂನ್ 1ರ ನಾಳೆಯಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಬೆಳಿಗ್ಗೆ 5.30ಕ್ಕೆ ಶಿವಮೊಗ್ಗದಿಂದ ಬೆಂಗಳೂರಿನತ್ತ ರೈಲು ಹೊರಡಲಿದೆ. ಇಂತಹ ರೈಲಿನಲ್ಲಿ ತೆರಳಲು ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಆದ್ರೇ.. ಸಾಮಾಜಿಕ ಅಂತರದ ಸಲುವಾಗಿ ಟಿಕೆಟ್ ಬುಕ್ಕಿಂಗ್ ಸಂಖ್ಯೆ ಕಡಿತಗೊಂಡಿದೆ.

ಲಾಕ್ ಡೌನ್ ನಿಂದಾಗಿ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇಂತಹ ರೈಲು ಸಂಚಾರ ಜೂನ್ 1ರ ನಾಳೆಯಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಅಧಿಕಾರಿಗಳು ಸಖಲ ಸಿದ್ಧತೆ ಮಾಡಿಕೊಂಡಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಿಗ್ಗೆ 5.30ಕ್ಕೆ ಜನ ಶತಾಬ್ದಿ ರೈಲು ಹೊರಡಸಿದೆ.

ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಪ್ರತಿ ಬೋಗಿಗೆ 54 ಪ್ರಯಾಣಿಕರಿಗಷ್ಟೇ ಸಂಚರಿಸಲು ಅವಕಾಶ ದೊರೆಯಲಿದೆ. ಅಲ್ಲದೇ ನಾಳೆ ಹೊರಡಲಿರುವ ಜನ ಶತಾಬ್ದಿ ರೈಲಿನಲ್ಲಿ ಕೇವಲ 648 ಜನರಿಗೆ ಮಾತ್ರವೇ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿದೆ. ರೈಲು ನಿಲುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ರೈಲ್ವೆ ಇಲಾಖೆ ಸ್ಪಷ್ಟ ಪಡಿಸಿದೆ.

State

ಶಿವಮೊಗ್ಗ : ಮೇ.22ರಂದು ಶಿವಮೊಗ್ಗಕ್ಕೆ ಪಂಜಾಬ್ ನಿಂದ ಬಂದಿದ್ದಂತ ಮೂವರನ್ನು ಮೊದಲು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಏಳು ದಿನ ಕ್ವಾರಂಟೈನ್ ಅವಧಿ ಮುಗಿಸಿದ ನಂತ್ರ, ಮನೆಗೆ ಕಳುಹಿಸಿ, ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಹೀಗೆ ಮಾಡಲಾಗಿದ್ದಂತ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ, ಅವರನ್ನು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಸೋಂಕಿತರಿದ್ದಂತ ಹಳ್ಳಿಯನ್ನು ಹೊಸ ಕಂಟೈನ್ಮೆಂಟ್  ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.

ಪಂಜಾಬ್ ಗೆ ತೆರಳಿದ್ದಂತ ನಗರದ ಮೂವರು ವ್ಯಕ್ತಿಗಳು, ರೈಲಿನಲ್ಲಿ ಬೆಂಗಳೂರಿಗೆ ಬಂದು. ಅಲ್ಲಿಂದ ಶಿವಮೊಗ್ಗಕ್ಕೆ ಮೇ.22ರಂದು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಆಗಮಿಸಿದ್ದರು. ಇಂತಹ ಮೂವರನ್ನು ಮೊದಲು ಸರ್ಕಾರಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. 7 ದಿನಗಳ ನಂತ್ರ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಈ ಮೂವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿತ್ತು. ಹೀಗಾಗಿ ಅವರನ್ನು ಕೋವಿಡ್-19 ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಹೋಂ ಕ್ವಾರಂಟೈನ್ ನಲ್ಲಿದ್ದಂತ ಶಿವಮೊಗ್ಗ ತಾಲೂಕಿನ ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್ ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೇ ಹಕ್ಕಿಪಿಕ್ಕಿ ಕ್ಯಾಂಪ್ ಗೆ ಬರುವ ದಾರಿಗಳನ್ನು ಬಂದ್ ಮಾಡಿ ಯಾರೂ ಮನೆಯಿಂದ ಹೊರ ಬರದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತಿರ್ಥಹಳ್ಳಿಯ ಹಳ್ಳಿಬೈಲು, ಶಿವಮೊಗ್ಗ ನಗರದ ತುಂಗಾನಗರ, ಬಾಳೆಕೊಪ್ಪ, ಶಿಕಾರಿಪುರದ ತರಲಘಟ್ಟ, ಸೊರಬಾದ ಹಳೆ ಸೊರಬ ಮತ್ತು ಹಕ್ಕಿಪಿಕ್ಕಿ ಕ್ಯಾಂಪ್ ಸೇರಿದಂತೆ 6 ಕಂಟೈನ್ಮೆಂಟ್ ಝೋನ್ ಗಳಿದ್ದಾವೆ.