kannada newsonline – Kannada News Now


India

ನವದೆಹಲಿ : ಲಡಾಕ್ ಸಮೀಪದ ಗಾಲ್ವಾನ್ ಕಣಿವೆಯಲ್ಲಿ ಕಳೆದ ರಾತ್ರಿ ಪರಿಸ್ಥಿತಿ ಉಲ್ಭಣಿಸಿದ್ದು, ಭಾರತ-ಚೀನಾ ರಾಷ್ಟ್ರಗಳ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಚೀನಾ ಸೈನಿಕರ ಗುಂಡಿಗೆ ಓರ್ವ ಮಿಲಿಟರಿ ಅಧಿಕಾರಿ ಹಾಗೂ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರು ಬಲಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಚೀನಾ-ಭಾರತ ಗಡಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು. ಕಳೆದ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ಏರ್ಪಟ್ಟಿದೆ. ಈ ವೇಳೆ, ಚೀನಾ ಪಡೆಯ ಗುಂಡಿಗೆ ಭಾರತೀಯ ಸೇನಾಪಡೆಯ ಮೂವರು ಸಿಬ್ಬಂದಿ ಬಲಿಯಾಗಿದ್ದಾರೆ. ಇನ್ನು ಗಡಿಯಲ್ಲಿ ಪರಿಸ್ಥಿತಿ ಶಾಂತಗೊಳಿಸುವ ಹಿನ್ನೆಲೆಯಲ್ಲಿ ಭಾರತ-ಚೀನಾ ಸೇನಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಇನ್ನು ಘಟನೆ ಹಿನ್ನೆಲೆಯಲ್ಲಿ ಸಧ್ಯದಲ್ಲೇ ಭಾರತೀಯ ಸೇನೆ ಸುದ್ದಿಗೋಷ್ಟಿ ನಡೆಸಲಿದೆ…

India

ಮುಂಬೈ : ಮಹಾರಾಷ್ಟ್ರದ ಮೇಲ್ಮನೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಚುನಾವಣೆಗೆ ನಿಗದಿಯಾಗುತ್ತಿದ್ದಂತೆ ಮಹಾ ವಿಕಾಸ್ ಅಘಾಡಿಯ ಮಿತ್ರ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲು ನಿರ್ಧರಿಸಿತ್ತು. ಹೀಗಾಗಿ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಣಾಮ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಿದೆ. 

ಸದ್ಯ  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಮೇಲ್ಮನೆ ಚುನಾವಣೆಗೆ 9 ಅಭ್ಯರ್ಥಿಗಳು ಕಣದಲ್ಲಿದ್ದು, ಉದ್ಧವ್ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಸ್ಪರ್ಧೆಯೇ ಇಲ್ಲದೇ ಮಹಾರಾಷ್ಟ್ರ ವಿಕಾಸ್ ಅಘಾಡಿಯ ಭಾಗವಾಗಿರುವ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಗಳಿಸಲಿದೆ.  ಬಿಜೆಪಿ 4 ಸ್ಥಾನಗಳನ್ನು ಗಳಿಸಲಿದೆ. ಮೇಲ್ಮನೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮೇ.09 ರಂದು ಏಕಾಏಕಿಯಾಗಿ 2 ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಎರಡನೇ ಅಭ್ಯರ್ಥಿಯನ್ನು ಹಿಂಪಡೆದಿದೆ….

State

ಬೆಂಗಳೂರು : ನೆರೆಯ ರಾಜ್ಯ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರು 14 ದಿನ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿಜಿಪಿ, ದೆಹಲಿ, ಗುರಜಾತ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡಿನಿಂದ ಬರುವವರು ಕಡ್ಡಾಯವಾಗಿ 14 ದಿನಗಳ ಕಾಲ ಸರ್ಕಾರ ಗೊತ್ತುಪಡಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಬೇಕು. ಸರ್ಕಾರದ ಪೋರ್ಟಲ್ ಸೇವಾ ಸಿಂಧು ಆ್ಯಪ್ ಮೂಲಕ ಮಾತ್ರ ಪಾಸ್ ಗಳನ್ನು ವಿತರಿಸಲಾಗುತ್ತಿದ್ದು, ಬಹಳ ಅತ್ಯಾವಶ್ಯಕವೆನಿಸಿದರೆ ಮಾತ್ರ ಪ್ರಯಾಣಿಸಬೇಕು. ಈ ಪ್ರಯಾಣಿಕರು ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಕ್ವಾರಂಟೈನ್ ನಲ್ಲಿರಲು ಸಿದ್ದರಾಗಿ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸೇವಾಸಿಂಧು ಇ-ಪಾಸ್‌ ಹೊಂದಿದವರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ಕಲ್ಪಿಸಲು ಇಂದಿನಿಂದ ಜಾರಿಗೆ ಬರುವಂತೆ ಸಹಾಯವಾಣಿ ಆರಂಭಿಸಿದೆ. ರಾಜ್ಯದಿಂದ ಹೊರರಾಜ್ಯಗಳಿಗೆ ತೆರಳುವವರು ಯಾವ ರಾಜ್ಯಕ್ಕೆ ತೆರಳುತ್ತಾರೋ, ಅಲ್ಲಿಂದಲೂ ಪಾಸ್‌ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ ಸೇವಾಸಿಂಧು ಮೂಲಕ ಪಾಸ್‌ ಪಡೆದುಕೊಳ್ಳುವವರ ಪಟ್ಟಿಯನ್ನು ಸಂಬಂಧಪಟ್ಟ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಅವರು ಪರಿಶೀಲನೆ ನಡೆಸಿ, ಅನುಮತಿ ನೀಡಿದ ಬಳಿಕ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ.

ಇನ್ನು ಸಹಾಯವಾಣಿ ಸಂಖ್ಯೆಗಳ ವಿವರ: 

ತಮಿಳುನಾಡು/ಪಾಂಡಿಚೇರಿ: 7760990100, 7760990560, 7760990034, 7760990035, 7760991295

ಆಂಧ್ರಪ್ರದೇಶ/ತೆಲಂಗಾಣ: 7760990561, 7760990532, 7760990955, 7760990530, 7760990967

ಕೇರಳ: 
7760990287, 7760990988, 7760990531, 6366423895, 6366423896

State

ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ  ಶೀಘ್ರದಲ್ಲೇ ಹೃದ್ರೋಗ ಮತ್ತು ನರರೋಗ ವಿಭಾಗ ಆರಂಭವಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10ವರ್ಷಗಳಾದರೂ ಹೃದ್ರೋಗ ಮತ್ತು ನರರೋಗ ವಿಭಾಗ ಇದುವರೆಗೆ ಪ್ರಾರಂಭವಾಗಿಲ್ಲ. ಇದೀಗ ಮೆಗ್ಗಾನ್ ಆಸ್ಪತ್ರೆಯ 3ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಒಪಿಡಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದಾರೆ. ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಮತ್ತು ವಾಕ್‍ಶ್ರವಣ ಕೇಂದ್ರದಲ್ಲಿ ಬಿಎಸ್ಸಿ ತರಗತಿಗಳನ್ನು ಆರಂಭಿಸಲು 4.84ಕೋಟಿ ರೂ. ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಇದರ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.

ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಕಾರ್ಡ್ ಎಂದು ನಿರ್ಬಂಧವಿಲ್ಲ. ಒಂದು ಕುಟುಂಬದ ಅರ್ಹ ಸದಸ್ಯರೆಲ್ಲರೂ ಜಾಬ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್ ನೀಡಲಾಗುವುದು ಎಂದರು. ಇದೀಗ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಉದ್ಯೋಗಕ್ಕಾಗಿ ಮುಂದೆ ಬರುತ್ತಿದ್ದು, 15ದಿನಗಳ ಒಳಗಾಗಿ ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು…

India

ನವದೆಹಲಿ :  ಮಾರಕ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆನ್-ಆಫ್ ಸ್ವಿಚ್ ಅಲ್ಲ. ಈಗಾಗಲೇ ಲಕ್ಷಾಂತರ ಮಂದಿ ತೊಂದರೆಗೆ ಸಿಲುಕಿದ್ದು, ಮೇ.17ರ ಬಳಿಕ ಮುಂದೇನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಇಂದು ಡಿಜಿಟಲ್ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗವಿಲ್ಲದೆ, ಹಣವಿಲ್ಲದೆ, ಊಟವಿಲ್ಲದೆ ಲಕ್ಷಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಇಂತಹವರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕಿದೆ. ಅದಕ್ಕಾಗಿ 65 ಸಾವಿರ ಕೋಟಿ ರೂ. ಅಗತ್ಯವಿದೆ. ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ತುರ್ತಾಗಿ ನೆರವು ನೀಡಲು ಕೂಡಲೇ ಕೇಂದ್ರ ಸರ್ಕಾರ ಈ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.  ಸದ್ಯದ ಪರಿಸ್ಥಿತಿಯಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದು, ಮುಂದೆ ಇದರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ದೇಶಿಯ ವಸ್ತುಗಳ ಬಳಕೆ ಹೆಚ್ಚು ಮಾಡುವುದರಿಂದ ದೇಶದ ಆರ್ಥಿಕತೆ ಸದೃಢವಾಗಲಿದೆ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ರೆಡ್, ಆರೇಂಜ್, ಗ್ರೀನ್ ಝೋನ್ ಗಳನ್ನು ನಿರ್ಧರಿಸುವುದು ಬೇಡ. ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ‌ನಿರ್ಧರಿಸಲಿ. ಕೇಂದ್ರ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ಜಿಲ್ಲೆಗಳ ಮಟ್ಟದಲ್ಲೇ ನಿಭಾಯಿಸಬೇಕು. ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೊರೊನಾ ‌ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಮುಖ್ಯಮಂತ್ರಿಗಳ ಮೇಲೆ, ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮೇಲೆ‌ ಭರವಸೆ ಇಡಬೇಕು.‌ ಇಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಸೋಲಲಿದ್ದೇವೆ ಎಂದರು. ಇನ್ನು ಕೇಂದ್ರ ಸರ್ಕಾರ ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಏನು ಮಾಡಬೇಕು ಎಂಬ ಯೋಜನೆ ರೂಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಮುಂದಿನ ಕ್ರಮಗಳೇನು ಎಂಬ ಬಗ್ಗೆ ನಿರ್ಧರಿಸಬೇಕು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಪಾರದರ್ಶಕವಾಗಿರಬೇಕು. ಆದರೆ ಸದ್ಯ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದರು. ಇನ್ನು ಆರೋಗ್ಯ ಸೇತು ಅ್ಯಪ್ ವಿಚಾರದಲ್ಲಿ ಪಾರದರ್ಶಕತೆ ಇರಬೇಕು. ಆ್ಯಪ್ ಅನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ಈಗಾಗಲೇ ಸ್ಪಷ್ಟವಾಗಿವೆ. ಸಿಂಗಾಪುರ್ ದಲ್ಲೂ ಆ್ಯಪ್ ಬಳಸಲಾಗುತ್ತಿದೆ. ಭಾರತ ಅದೇ ಮಾದರಿಯಲ್ಲಿ ಪಾರದರ್ಶಕವಾಗಿರಬೇಕು ಎಂದು ಹೇಳಿದರು….

State

ರಾಮನಗರ : ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಸಣ್ಣ ಹೊಟೇಲ್ ಉದ್ಯಮ ನಡೆಸುತ್ತಿರುವವರು ಸಂಕಷ್ಟಕ್ಕೆ ತುತ್ತಾಗಿದ್ದು, ಅವರಿಗೆ ಹೊಟೇಲ್ ತೆರೆಯಲು ಅನುಮತಿ ನೀಡಬೇಕೆಂದು ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಈ ಕುರಿತು ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಡಿ.ಕೆ.ಸುರೇಶ್, ರಾಮನಗರ ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಹೋಟೆಲ್‌ಗಳನ್ನು ಬಂದ್ ಮಾಡಲಾಗಿದ್ದು, ಸಾಮಾನ್ಯ ಜನರಿಗೆ ಹಾಗೂ ಉದ್ಯಮ ನಡೆಸುತ್ತಿರುವವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದಿನನಿತ್ಯ ನೂರಾರು ಜನರು ತಮ್ಮ ಕೆಲಸಕಾರ್ಯಗಳಿಗೆ ನಗರ ಪ್ರದೇಶಕ್ಕೆ ಆಗಮಿಸುತ್ತಾರೆ. ಆದರೆ, ಅವರಿಗೆ ನಗರ ಪ್ರದೇಶದಲ್ಲಿ ತಿನ್ನೋಕೆ ಆಹಾರ ಸಿಗುತ್ತಿಲ್ಲ. ಇದರ ಜೊತೆಗೆ ಉದ್ಯಮ ನಡೆಸುತ್ತಿರುವವರು ಸಾಲ ಮಾಡಿಕೊಂಡು ಉದ್ಯಮಕ್ಕೆ ಕೈಹಾಕಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ವ್ಯಾಪಾರ ವಹಿವಾಟಿಲ್ಲದ ಕಾರಣ ಎಲ್ಲರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿ ತ್ವರಿತವಾಗಿ ಜಿಲ್ಲೆಯಲ್ಲಿ ಹೋಟೆಲ್‌ಗಳ ಪ್ರಾರಂಭಕ್ಕೆ ಸೂಚನೆ ಕೊಡಬೇಕು. ಇದರಿಂದಾಗಿ ಉದ್ಯಮ ನಡೆಸುತ್ತಿರುವವರಿಗೆ ಹಾಗೂ ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ” ಎಂದು ಒತ್ತಾಯಿಸಿದ್ದಾರೆ….

Gepostet von DK Suresh am Dienstag, 5. Mai 2020

State

ಬೆಂಗಳೂರು : ಮಾರಕ ಕೊರೊನಾ ವಿಚಾರದಲ್ಲೂ ಕಾಂಗ್ರೆಸ್ ನ ನಾಯಕರಿಗೆ ರಾಜಕೀಯ ಮತ್ತು ಪ್ರಚಾರವೇ ಮುಖ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ಮೊದಲ ಬಸ್‌ ಮತ್ತು ರೈಲಿನ ವ್ಯವಸ್ಥೆ ಮಾಡಿತ್ತಾದರೂ ಅದಕ್ಕೆ ಕಾರ್ಮಿಕರಿಂದಲೇ ಹಣ ವಸೂಲಿ ಮಾಡಲು ಮುಂದಾಗಿತ್ತು. ಆದರೆ, ಇದನ್ನು ಖಂಡಿಸಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ತಾವೇ ಕಾರ್ಮಿಕರ ಬಸ್‌ ಮತ್ತು ರೈಲಿನ ಪ್ರಯಾಣ ದರವನ್ನು ನೀಡುವುದಾಗಿ ಘೋಷಿಸಿದ್ದರು. ಕಾಂಗ್ರೆಸ್‌ ನಾಯಕರ ಈ ವರ್ತನೆಯನ್ನು ಖಂಡಿಸಿರುವ ಸಚಿವ ಡಾ.ಕೆ. ಸುಧಾಕರ್‌, ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. “ಕೊರೊನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಅನ್ನುವ ಇವರ ಮನಸ್ಥಿತಿ ಹಾಗು ರೋಮ್ ನ ಅಂದಿನ ದೊರೆ ನೀರೋ ಗು ವ್ಯತ್ಯಾಸವಿಲ್ಲ. ಯಾಕೆಂದರೆ ಇಡೀ ರೋಮ್ ಸುಟ್ಟು ನಾಶವಾಗುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದ” ಎಂದು ಕಿಡಿಕಾರಿದ್ದಾರೆ.

 

ಮತ್ತೊಂದು ಟ್ವೀಟ್‌ನಲ್ಲಿ “ಕಾಂಗ್ರೆಸ್‌ನವರು ಕಾರ್ಮಿಕರ ಬಸ್ ಮತ್ತು ಟ್ರೈನ್ ಚಾರ್ಜ್ ಕೊಡ್ತೀವಿ ಅಂತ ರೋಡ್ ರೋಡ್‌ನಲ್ಲಿ ಓಡಾಟ ಹಾಗು ಅದರ ಜಾಹಿರಾತುಗಳನ್ನ ಕೊಟ್ಟಿರುವುದು ನೋಡಿದರೆ ಇದು ಭರ್ಜರಿ ಬಯಲುನಾಟಕ ಎಂದು ಗೊತ್ತಾಗುತ್ತೆ. ನಿಯಮದಂತೆ ಹಣ ಯಾರಿಗೆ ಕೊಡಬೇಕಿತ್ತೋ ಅವರಿಗೆ ಕೊಡುವುದು ಬಿಟ್ಟು ಊರೆಲ್ಲ ಕ್ಯಾಮೆರಾ ಮುಂದೆ ಕೊರೊನ ಮೀರುವ ಓಡಾಟ ,ಚೀರಾಟ ಮತ್ತು ಹಾರಾಟ” ಎಂದು ವ್ಯಂಗ್ಯ ಮಾಡಿದ್ದಾರೆ.

World

ನ್ಯೂಸ್ ಡೆಸ್ಕ್ : ಮಾರಕ ಕೊರೊನಾ ಸೋಂಕು ಜಗತ್ತಿಗೆ ಕಂಟಕವಾಗಿ ಪರಿಣಮಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನು ಅಭಿವೃದ್ಧಿ ಹೊಂದಿದ ದೇಶಗಳೂ ಕೊರೊನಾ ಸೋಂಕಿನಿಂದಾಗಿ ತತ್ತರಿಸಿ ಹೋಗಿವೆ. ಏತನ್ಮಧ್ಯೆ, ರಷ್ಟಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಗೂ  ಕೊರೊನಾ ಸೋಂಕು ತಗುಲಿದೆ.

ಈ ಕುರಿತು ಸ್ವತಃ ಮಿಖಾಯಿಲ್ ಅವರೇ ಮಾಹಿತಿ ನೀಡಿದ್ದು, ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆಂದು ಹೇಳಿದ್ದಾರೆ. ನನಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಕ್ಯಾಬಿನೆಟ್ ಸಚಿವರ ಆರೋಗ್ಯದ ಹಿತದೃಷ್ಟಿಯಿಂದ ಸ್ವಯಂ ದಿಗ್ಭಂದನದಲ್ಲಿ ಇರುವುದಾಗಿ ಮಿಖಾಯಿಲ್ ತಿಳಿಸಿದ್ದಾರೆ. ಈ ಕುರಿತು ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಮಿಖಾಯಿಲ್, ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು,  ಸ್ವಯಂ ದಿಗ್ಭಂಧನದಲ್ಲಿರುವುದಾಗಿ ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಪುಟಿನ್, ಮಿಖಾಯಿಲ್ ಅವರು ಆದಷ್ಟು ಬೇಗನೇ ಚೇತರಿಕೆ ಕಂಡು, ಸರ್ಕಾರದ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತಾಗಲಿ ಎಂದು ಶುಭ ಕೋರಿದ್ದಾರೆ….
State

ಬೆಂಗಳೂರು : ಗೋಪಾಲಯ್ಯ ಅವರಿಗಿಂತ ಮೊದಲೇ ನಾನು ಸಚಿವನಾಗಿದ್ದೆ. ಸರ್ಕಾರದ ಕಾರ್ಯವೈಖರಿ ಹೇಗೆ ನಡೆಯುತ್ತದೆ ಅಂತ ನನಗೆ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವ ಗೋಪಾಲಯ್ಯ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಇಂದು ಬಸವ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗೋಪಾಲಯ್ಯ ಅವರಿಗೆ ತಮ್ಮ ಅಧಿಕಾರ ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಸಂಗ್ರಹಿಸಬೇಕಾದರೆ ಸಾಕಷ್ಟು ನಿಯಮಗಳಿವೆ. ಹೀಗಿರುವಾಗ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿ ಇಟ್ಟುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಸರ್ಕಾರ ನೂರಾರು ಗೋದಾಮು, ಛತ್ರಗಳನ್ನು ಪಡೆದು ಅಕ್ಕಿಯನ್ನು ಸಂಗ್ರಹಿಸುವುದಾಗಿ ಘೋಷಿಸಿದ್ದು ಯಾಕೆ, ಅಷ್ಟು ಕಟ್ಟಡಗಳಲ್ಲಿ ಸಂಗ್ರಹಿಸಲು ಸ್ಥಳವಿರುವಾಗ ಖಾಸಗಿ ಸ್ಥಳದಲ್ಲಿ ಬಚ್ಚಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ ಯಾರು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ನಾನು ಅವರಿಗಿಂತಲೂ ಮೊದಲೇ ಸಚಿವನಾಗಿದ್ದೆ. ಹೀಗಾಗಿ ಸರ್ಕಾರದ ಕಾರ್ಯವೈಖರಿ ಯಾವ ರೀತಿ ನಡೆಯುತ್ತದೆಂದು ನನಗೆ ಗೊತ್ತಿದೆ. ಹೀಗಾಗಿ ಸುಮ್ಮನೆ ನನ್ನನ್ನು ಕೆಣಕುವುದು ಬೇಡ ಎಂದರು.

ಇನ್ನು ಎಷ್ಟು ಜನ ಅಧಿಕಾರಿಗಳೊಂದಿಗೆ ಏನೇನು ಮಾತುಕತೆಯಾಗಿದೆ, ಸರ್ಕಾರದ ಅಕ್ಕಿಯನ್ನು ಯಾರು ಎಷ್ಟು ಬೆಲೆಗೆ ಎಲ್ಲಿ ಖರೀದಿಸಿದ್ದಾರೆಂಬ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ಈಗ ಜನತೆಯನ್ನು ಕಾಪಾಡಿ, ಅವರ ಜೀವ ಉಳಿಸೋಣ. ಜೀವ ಇದ್ದರೆ ಉಳಿದಿದ್ದು ಅನಂತರದ್ದು, ಹೀಗಾಗಿ ಈಗ ಆರೋಗ್ಯ ವಿಚಾರವಾಗಿ ಮಾತ್ರ ಚರ್ಚಿಸೋಣ ಎಂದರು…

 

India

ಮುಂಬೈ : ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಜನತೆ ಆತಂಕಗೊಂಡಿದ್ದಾರೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23 ಸಾವಿರ ಗಡಿದಾಟಿದೆ. ಏತನ್ಮಧ್ಯೆ, ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 778 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಇನ್ನಷ್ಟು ಭೀತಿ ಎದುರಾಗಿದೆ.

ಈ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 778 ಮಂದಿಯಲ್ಲಿ ಮಾರಕ ಸೋಂಕು ಪಾಸಿಟಿವ್ ಬಂದಿದೆ. ಇನ್ನು 14 ಮದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ ಸೋಂಕುಪೀಡಿತರ ಸಂಖ್ಯೆ 6427ಕ್ಕೆ ಏರಿಕೆಯಾಗಿದ್ದು, ಡೆಡ್ಲಿ ಕೊರೊನಾಗೆ 283 ಮಂದಿ ಬಲಿಯಾಗಿದ್ದಾರೆ. ಇನ್ನು ಇದೇ ವೇಳೆ ಪುಣೆಯಲ್ಲಿ ಕಳೆದ ಕೊರೊನಾ ಸೋಂಕಿಗೆ ತುತ್ತಾಗಿದ್ದ 61 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ ಪುಣೆಯಲ್ಲಿ ಈವರೆಗೆ ಕಿಲ್ಲರ್ ಕೊರೊನಾಗೆ ಬಲಿಯಾದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ ಎಂದು ಪುಣೆ ಆರೋಗ್ಯ ಇಲಾಖೆ ತಿಳಿಸಿದೆ….