ಕೆಎನ್ಎನ್ ಡಿಜಿಟಲ್ ಡೆಸ್ಕ್: ಒದುವ ಕಲೆ ಒಂದು ತಪಸ್ಸು. ಅದು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಮುಲ್ಯ ಘಟ್ಟ ಕೂಡ. ನಿಷ್ಠೆ, ಶ್ರದ್ಧೆಯಿಂದ ಓದಿದಾಗ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದರೊಂದಿಗೆ, ಉತ್ತಮ ಸಾಧನೆಗೂ ಸಹಕಾರಿಯಾಗಲಿದೆ. ಹಾಗಾದ್ರೇ.. ಓದುವ ಕಲೆಯನ್ನು ಹೇಗ್ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದೋದಕ್ಕೆ ಯಾವೆಲ್ಲಾ ಟಿಪ್ಸ್ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಮುಂದೆ ಓದಿ..

ಓದುವುದು ಹೇಗೆ?

ವಿದ್ಯಾರ್ಥಿಗಳಿಗೆ ಓದು ಅನಿವಾರ್ಯ ಹಾಗೂ ಅಗತ್ಯ ಆದರೆ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಅದೊಂದು ತಲೆನೋವಿನ ಸಂಗತಿಯೆನಿಸಿ, ಪರೀಕ್ಷೆಗಾಗಿ ಓದುವ ಕರ್ಮ ಆಗಿಬಿಟ್ಟಿದೆ, ಎನ್ನುವ ದೃಷ್ಟಿಯಿಂದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೇ ಬಹಳ ಜನ.

ಬಹುತೇಕ ವಿದ್ಯಾರ್ಥಿಗಳಿಗೆ ಓದುವ ಸರಿಯಾದ ಪದ್ಧತಿ ಗೊತ್ತಿಲ್ಲದಿರುವುದೇ ಇಂಥ ಮನೋಭಾವಕ್ಕೆ ಕಾರಣ. ಹಾಗಾಗಿ ಓದಿನಲ್ಲಿ ಆಸಕ್ತಿ ಮೂಡದೆ, ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆಯುತ್ತಿರುತ್ತಾರೆ, ಇಲ್ಲವೆ ಅನುತ್ತೀರ್ಣರಾಗುತ್ತಾರೆ. ಇನ್ನು ಕೆಲ ವಿದ್ಯಾರ್ಥಿಗಳ ಸಮಸ್ಯೆ ಬೇರೆ ರೀತಿಯದು – ತಾವು ಎಷ್ಟೇ ಓದಿದರೂ ಅದೊಂದು ನೆನಪಿನಲ್ಲುಳಿಯುತ್ತಿಲ್ಲ ಎನ್ನುವುದು.

ಓದಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವುದು ಶ್ರದ್ದೆ, ಪರಿಶ್ರಮ. ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಶದ್ದೆ ಯಾವಾಗ ಮೂಡುತ್ತದೆ? ಓದಿನ ಪ್ರಾಮುಖ್ಯತೆ, ಬದುಕಿನಲ್ಲಿ ಅದರ ಮಹತ್ವದ ಸ್ಥಾನ ಏನು ಎಂಬುದರ ಪರಿಕಲ್ಪನೆ ಇದ್ದಾಗ, ಓದುವ ವಿಷಯ ಆಸಕ್ತಿ-ಕರ ವಾಗಿದ್ದಾಗ ಶ್ರದ್ದೆ ತಾನಾಗಿಯೇ ಮೂಡುತ್ತದೆ. ಇನ್ನೂ, ಓದಿದ್ದು ತಲೆಗೆ ಹತ್ತಬೇಕೆಂದರೆ ಏಕಾಗ್ರತೆ ಇರಬೇಕಾದುದು ತುಂಬ ಅಗತ್ಯ ಓದಿನ ಬಗ್ಗೆ ಅನಿಚ್ಛೆ, ಓದುತ್ತಿರುವ ವಿಷಯದ ಬಗ್ಗೆ ಅನಾಸಕ್ತಿ ಇದ್ದರೆ ಕಣ್ಣುಗಳಷ್ಟೆ ಪುಸ್ತಕದ ಮೇಲೆ ಓಡುತ್ತಿದ್ದು ಮನಸ್ಸು ಎಲ್ಲೋ ಓಡುತ್ತಿರುತ್ತದೆ.

ಓದಿನಲ್ಲಿ ಕಂಗೊಳಿಸಬೇಕೆಂದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಓದುತ್ತಿರುವ ಕೋರ್ಸಿನಿಂದ ಅದು SSLC, PUC, Degree, BE, Diploma, ಯಾವುದೇ ಆಗಿರಲಿ ನಿಮಗಾಗುವ ಪ್ರಯೋಜನವೇನು ಎನ್ನುವುದು ಅರ್ಥವಾಗಬೇಕು. ಅಂದರೆ ನಿಮ್ಮ ಭವಿಷ್ಯ ಜೀವನಕ್ಕೂ, ಓದಿಗೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಂಡು ಓದಿನ ಬಗ್ಗೆ ಅಭಿರುಚಿ, ಶ್ರದ್ದೆ ಬೆಳಸಿಕೊಳ್ಳಬೇಕು. ಅದು ವಿದ್ಯಾರ್ಥಿಗಳಿಗೆ ಅನಿವಾರ್ಯವೂ ಕೂಡ! ವಿದ್ಯಾರ್ಥಿ ಓದುವ ವಿಷಯಗಳೆಲ್ಲವೂ ಒಂದೇ ರೀತಿ ಆಸಕ್ತಿಕವಾಗಿರುತ್ತವೆಂದೇನೂ ಹೇಳಲಾಗದು. ಕೆಲವು ವಿಷಯಗಳನ್ನು ಓದಲು ವಿದ್ಯಾರ್ಥಿಗಳಿಗೆ ಬೇಸರವೆನಿಸಬಹುದು. ಹಾಗೆಂದು ಅವುಗಳ ಬಗ್ಗೆ ಅನಾಸಕ್ತಿ ಬೆಳಸಿಕೊಂಡರೆ ಕಡಿಮೆ ಅಂಕ ಪಡೆಯಬಹುದು. ಇಲ್ಲವೆಂದರೆ ಅನುತ್ತೀರ್ಣರಾಗಬಹುದು. ಆದ್ದರಿಂದ ಒಟ್ಟಾರೆ ಶೈಕ್ಷಣಿಕ ಜೀವನ ಹಾನಿ ಗೀಡಾಗುವ ಸಂಭವವಿರುತ್ತದೆ.

ಆದ್ದರಿಂದ ನಿಮಗೆ ಒಂದೆರಡು ವಿಷಯಗಳ ಬಗ್ಗೆ ಅಷ್ಟು ಆಸಕ್ತಿ, ಅಭಿರುಚಿಗಳಿರದಿದ್ದರೆ ಅವುಗಳನ್ನು ಕಡೆಗಣಿಸಬೇಕು ಅನಿವಾರ್ಯತೆ ಇರುವುದನ್ನು ಮನಗಂಡು ಅಂಥವುಗಳ ಬಗ್ಗೆ ಸಾಧ್ಯವಾದಷ್ಟೂ ಅನುಕೂಲಕರ ಧೋರಣೆಯನ್ನು ತಳೆಯರಿ. ತುಂಬ ಆಸಕ್ತಿ ಇರುವಂಥ ವಿಷಯಗಳಿಗೆ ತುಸು ಕಡಿಮೆ ಸಮಯ ಮೀಸಲಿರಿಸಿದರೂ ಪರವಾಗಿಲ್ಲ. ಕಡಿಮೆ ಆಸಕ್ತಿ ಇರುವ ವಿಷಯಗಳನ್ನ ಓದಲು ಜಾಸ್ತಿ ಸಮಯವನ್ನು ವಿನಿಯೋಗಿಸಿ, ಸಮತೋಲ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.

ಸಮರ್ಥ ವಿದ್ಯಾರ್ಥಿಗಳ ಲಕ್ಷಣಗಳು:

1. ಕ್ರಮ ತಪ್ಪದೇ ಓದುತ್ತಾರೆ.
2. ವೇಳಾ ಪಟ್ಟಿಯ ಪ್ರಕಾರ ನಡೆದುಕೊಳ್ಳುತ್ತಾರೆ.
3. ಸಾಮಾನ್ಯವಾಗಿ ಪ್ರತಿನಿತ್ಯ ನಿರ್ದಿಷ್ಟ ಸಮಯಕ್ಕೆ ಅಧ್ಯಯನದಲ್ಲಿ ತೊಡಗಿ ಕೊಳ್ಳುತ್ತಾರೆ.
4. ಒಂದೇ ಸ್ಥಳದಲ್ಲಿ ಕುಳಿತು ಓದುತ್ತಾರೆ.
5. ಎಡಬಿಡದೇ ಓದುವುದಕ್ಕಿಂತಲೂ ನಡುವೆ ತುಸು ವಿರಾಮ ನೀಡುತ್ತಾ ಓದುತ್ತಿರುತ್ತಾರೆ.
6. ತರಗತಿಯಲ್ಲಿ ಪಾಠ ಕೇಳಿದ ನಂತರ, ಅದೇ ದಿನ ಅಥವಾ ಸಾಧ್ಯವಾದಷ್ಟು ಬೇಗ ಅದರ ಸಮೀಕ್ಷಾಧ್ಯಯನ ಮಾಡುತ್ತಾರೆ.
7. ಕೊನೆಯವರೆಗೂ ಓದುವುದನ್ನು ಮುಂದೂಡುವುದಿಲ್ಲ.
8. ಅಷ್ಟು ಸಲೀಸಾಗಿ ಬೇರೆ ವಿಷಯಗಳತ್ತ ಆಕರ್ಷಿತರಾಗುವುದಿಲ್ಲ.
9. ಓದಬೇಕೆಂದರೆ ಕೇವಲ ಪರೀಕ್ಷೆಗಳಷ್ಟೇ ಪ್ರೇರಣೆಯಾಗಿರುವುದಿಲ್ಲ.

ಓದಿನಲ್ಲಿ ತುಂಬ ಯಶಸ್ವಿಯಾಗುವವರು:

1. ಉಪಾಧ್ಯಯರು ಹೇಳಲಿರುವ ಪಠ್ಯಾಂಶಗಳನ್ನು ತರಗತಿಗೆ ಹೋಗುವ ಮುನ್ನವೇ ಪರಿಶೀಲಿಸುತ್ತಾರೆ.
2. ತರಗತಿಗಳಿಗೆ ತಪ್ಪದೇ ಹಾಜರಾಗುತ್ತಾರೆ.
3. ವಿಷಯಗಳು ಕಷ್ಟಕರವಾಗುತ್ತವೆಂದು ಅದನ್ನು ನಿರ್ಲಕ್ಷ÷್ಯ ಮಾಡುವುದಿಲ್ಲ.
4. ಗ್ರಂಥಾಲಯಗಳ ಸದುಪಯೋಗವೇನು ಎಂಬುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.
5. ಕ್ರಮಬದ್ದ ರೀತಿಯಲ್ಲಿ, ಯೋಚಿತ ಕ್ರಮದಲ್ಲಿ ಓದುತ್ತಾರೆ.
6. ಉಪನ್ಯಾಸಗಳನ್ನು ಆಯಾ ದಿನವೇ ಸಮೀಕ್ಷಿಸಿಕೊಳ್ಳುತ್ತಾರೆ.
7. ಅಗತ್ಯ ಕೆಲಸಗಳನ್ನೇನಾದರೂ ಮಾಡಬೇಕಿದ್ದರೆ ಸಲೀಸಾಗಿ ಮಾಡುತ್ತಾರೆ.
8. ಗೊತ್ತಿಲ್ಲದ ವಿಷಯಗಳನ್ನು ಇತರರಿಂದ ಕೇಳಿ ತಿಳಿದುಕೊಳ್ಳಲು ಸಂಕೋಚಪಡುವುದಿಲ್ಲ.
9. ಪಠ್ಯಾAಶಗಳನ್ನು ತಾವು ಕಲಿತಿರುವೆವೋ ಇಲ್ಲವೋ ಎನ್ನುವುದನ್ನು ಆಗಿಂದಾಗ ಸಮೀಕ್ಷಿಸಿಕೊಳ್ಳುತ್ತಿರುತ್ತಾರೆ.
ಓಟ್ಟಿನಲ್ಲಿ ಯಾವುದಾದರೊಂದು ಪದ್ಧತಿಯನ್ನು ರೂಪಿಸಿಕೊಂಡು ಅದರ ಪ್ರಕಾರ ಓದುವುದು ಒಳ್ಳೆಯ ಫಲಿತಾಂಶ ನೀಡುತ್ತದೆನ್ನುವುದು ಮಾತ್ರ ನಿಸ್ಸಂದೇಹ.

ಹೀಗಿರಲಿ ನಿಮ್ಮ ಓದಿಗೆ ಏರ್ಪಾಡು

1. ಅಧ್ಯಯನ ಸುಗಮವಾಗಿ ಸಾಗ ಬೇಕೆಂದರೆ, ಸಾಧ್ಯವಾದಷ್ಟೂ ಅಡಿ ಆತಂಕಗಳಿರದಂತೆ ಗಮನಿಸಿಕೊಳ್ಳಬೇಕು.
2. ಸಾಧ್ಯವಾದರೆ ನಿಶ್ಯಬ್ದವಾಗಿರುವ ಕೋಣೆಯಲ್ಲಿ, ಯಾರೂ ನಿಮ್ಮನ್ನು ಡಿಸ್ಟಾರ್ಬ್ ಮಾಡದಂಥ ಸ್ಥಳದಲ್ಲಿ ಕುಳಿತು ಓದಿ.
3. ಬೆನ್ನುಭಾಗಕ್ಕೆ ಎತ್ತರವಾಗಿರುವ ಕುರ್ಚಿ ಓದುವುದಕ್ಕೆ, ಏಕಾಗ್ರತೆಗೆ ಅನುಕೂಲಕರವಾಗಿರುತ್ತದೆ.
4. ಮಂಚದ ಮೇಲೆ ಮಲಗಿ, ಸೋಫಾದಲ್ಲಿ ಒರಗಿ, ಆರಾಮಗಿ ಕುರ್ಚಿಯಲ್ಲಿ ಕುಳಿತು, ಇಂಥಹ ಅಭ್ಯಾಸಗಳು ನಿಮ್ಮನ್ನು ಅಷ್ಟು ಜಾಗ್ರತ ಸ್ಥಿತಿಯಲ್ಲಿರಿವುದಿಲ್ಲ.
5. ಬೆನ್ನು ಮುಳೆಯ ಮೇಲೆ ಒತ್ತಡವ್ಯಾವುದೂ ಬೀಳದಂತೆ ನೋಡಿಕೊಳ್ಳಿ.
6. ನೀವು ಓದುತ್ತಿರುವಾಗ ಬೆಳಕು ನೇರವಾಗಿ ಕಣ್ಣುಗಳನ್ನು ರಾಚುವಂತಿರಬಾರದು.
7. ಊಟ ಮಾಡಿದ ತಕ್ಷಣವೇ ಪುಸ್ತರ ಹಿಡಿಯುವುದಕ್ಕಿಂತಲೂ ಒಂದರ್ಥತಾಸ ತಾಸು ಬಿಟ್ಟು ಓದಲು ಕುಳಿತುಕೊಳ್ಳುವುದು ಒಳ್ಳೆಯದು.
8. ಜಾಸ್ತಿ ಓದುವುದರಿಂದ ಬಳಲಿ, ನಿಶ್ಯಕ್ತರಾಗುವ ಮುನ್ನವೇ ಓದುವುದನ್ನು ನಿಲ್ಲಿಸಿ.
9. ಪ್ರತಿ ಸಲ ಓದಲು ಕುಳಿತು ಕೊಳ್ಳುವ ಮುನ್ನ, ಎಷ್ಟು ಹೊತ್ತು ಓದಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಅದಕ್ಕೆ ತಕ್ಕಂತೆ ಏರ್ಪಾಡುಮಾಡಿಕೊಳ್ಳಿ, ಯಾವ-ಯಾವ ವಿಷಯಗಳನ್ನು ಓದಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಪ್ರತಿಯೊಂದು ಸೆಶನ್ನಿಗೂ ನಿಮಗೊಂದು ಗುರಿ ಇರಬೇಕು. ಈಗಾಗಲೇ ನೋಡಿರುವಂತೆ ಅಧ್ಯಯನ ಒಂದೇ ಸಮನೆ ಮುಂದುವರಿಯುವುದಕ್ಕಿಂತಲೂ ಪ್ರತಿ ಒಂದು-ಒಂದೂವರೆ ಅಥವಾ ಏರಡು ತಾಸುಗಳಿಗೆ ತುಸು ವಿರಾಮ ನೀಡುವುದನ್ನು ಮರೆಯಬಾರದು. ‘ತುಸು ವಿರಾಮ’ ಎಂದರೆ ತುಸುವೇ ವಿರಾಮ ಎಂದೇ ಅರ್ಥ. ಅದು ಬಿಟ್ಟು ತಾಸುಗಟ್ಟಲೆ ವಿಶ್ರಾಂತಿ ಪಡೆಯುವ ನೆಪದಲ್ಲಿ ಸಮಯ ವ್ಯರ್ಥ ಮಾಡುವುದೊಳ್ಳೆಯದಲ್ಲ.
10. ನಿಮ್ಮ ದಿನಚರಿಯನ್ನೊಮ್ಮೆ ಗಮನಿಸಿ ನೋಡಿ. ಒಂದು ದಿನದಲ್ಲಿ ನೀವು ಓದಿಗೆ ಬಳಸಿಕೊಂಡರೆ ಉಪಯುಕ್ತವಾಗಬಲ್ಲದು. ಆ ರೀತಿ ಉಳಿತಾಯವಾಗುವ ಸಮಯವನ್ನು ಮತ್ತೊಂದು ಉಪಯುಕ್ತ ಕೆಲಸಕ್ಕೆ ಬಳಸಬಹುದು.
11. ಅಧ್ಯಯನಕ್ಕೆ ಕುಳಿತುಕೊಳ್ಳುವ ಮುನ್ನವೆ ನೀವು ಎಲ್ಲಾ ಎರ್ಪಾಡುಗಳನ್ನು ಮಾಡಿಟ್ಟುಕೊಳ್ಳಿ. ಪುಸ್ತಕ, ನೋಟ್ಸ್, ಪೆನ್ನು, ಪೆನ್ಸಿಲ್, ಹಾಳೆ, ನಿಘಂಟು, ಮಾರ್ಕರ್, ಕುಡಿಯಲು ನೀರು… ಮುಂತಾದುವನ್ನೆಲ್ಲ ಸಿದ್ದವಾಗಿರಿಸಿಕೊಂಡರೆ, ಪದೇ ಪದೇ ಅವುಗಳಿಗೊಸ್ಕರ ಎದ್ದು ಹೋಗುವ ಪರಿಸ್ಥಿತಿ ತಲೆ ಎತ್ತುವುದಿಲ್ಲ. ನಿಮ್ಮ ನಿಮ್ಮ ಗಮನವೂ ಬೇರಡೆ ಹರಿಯುವುದಿಲ್ಲ.
12. ಪುಸ್ತಕ ನಿಮ್ಮ ಸ್ವಂತದ್ದಾಗಿದ್ದರೆ, ಮಾರ್ಕಲ್ ಪೆನ್ನಿನಿಂದ ಮುಖ್ಯಾಂಶಗಳ ಮೇಲೆ ಗುರುತು ಮಾಡಿ. ಆ ರೀತಿ ಮಾಡುವುದರಿಂದ ಮತ್ತೊಮ್ಮೆ ಆ ಪಾಠಗಳನ್ನು ಓದುವಾಗ ಸಮೀಕ್ಷಾಧ್ಯಯನಕ್ಕೆ, ಶೀಘ್ರ ಓದಿಗೆ ಅದು ನೆರವಾಗುತ್ತದೆ. ಪುಸ್ತಕದ ಮೇಲೆ ಗುರುತು ಮಾಡಬಾರದೆಂದಿದ್ದರೆ, ಬೇರೊಂದು ನೋಟ್‌ಬುಕ್‌ನಲ್ಲಿ ಟಿಪ್ಪಣಿ ಮಾಡಿಕೊಳ್ಳಬಹುದು.
13. ನೀವು ಓದುವ ವಿಷಯಗಳನ್ನು ಸಾಧ್ಯವಾದಾಗಲೆಲ್ಲ ನಿಮ್ಮ ಬದುಕಿನ ಅನುಭವಗಳಿಗೆ, ನಿಮಗೆದುರಾಗುವ ಸನ್ನಿವೇಶಗಳಿಗೆ ಅನ್ವಯಿಸಿಕೊಳ್ಳಿ.
14. ಗೆಳಯನೊಬ್ಬನೊಂದಿಗೆ ಕೂಡಿ ಓದಿ. ಕೆಲ ಪಾಠಗಳನ್ನು ಅವನು ನಿಮಗೆ ಹೇಳುವುದು, ನೀವು ಅವನಿಗೆ ಕೆಲವು ಪಾಠಗಳನ್ನು ಹೇಳುವುದು. ಈ ರೀತಿ ಮಾಡಿಕೊಳ್ಳುವುದು ಉತ್ತಮ ಪದ್ದತಿ. ಭೋದನೆ, ಭೋದನೆಯ ಪ್ರಯತ್ನ ಕಲಿಕೆಗೆ ಸುಲಭದ ದಾರಿ.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಈ ಸಲಹೆ ಪಾಲಿಸಿ

ಪುಸ್ತಕ ಓದಲ್ಲು ಹಿಡಿದಿರುವಾಗ, ತಲೆಯಲ್ಲಿ ಯಾವುಯಾವುದೋ ಯೋಚನೆಗಳು ನುಸುಳಿ ಗಮನವನ್ನು ಅತ್ತಿತ್ತ ಚದುರಿಸುತ್ತಿರುತ್ತವೆಯೆ?
ಓದುವಾಗ ಅಕ್ಕ ಪಕ್ಕದಲ್ಲಿ ನಡೆಯುವ ಸಣ್ಣ-ಪುಟ್ಟ ಚಟುವಟಿಕೆ, ಸದ್ದುಗಳತ್ತ ಗಮನ ಹರಿದು ಆಕಡೆ ನೋಡ ಬೇಕೆನಿಸುತ್ತದೆಯೆ?
ಓದಲು ಕುಳಿತಿರುವಾಗ ‘ಎಷ್ಟು ಹೊತ್ತು ಓದಿದೆ’ ಎಂದು ಆಗಾಗ ಗಡಿಯಾರ ನೋಡಿಕೊಳ್ಳಬೇಕೆನಿಸುತ್ತಿರುತ್ತದೆಯೆ?
ಮೇಲಿನೆಲ್ಲವಕ್ಕೂ (ಅಥವಾ ಯಾವುದಾದರೂ ಒಂದೆರಡಕ್ಕಾದರೂ ಸರಿ) ‘ಹೌದು’ ಎಂದು ಉತ್ತಾರಿಸಿದರೆಂದಾದರೆ, ಏಕಾಗ್ರತೆಯಿಂದ ಓದುವುದು ನಿಮ್ಮಿಂದಾಗುತ್ತಿಲ್ಲವೆನ್ನುವುದು ಸ್ವಷ್ಟ.

ಹಾಗಾದರೆ ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಹೇಗೆ?

ಏಕಾಗ್ರತೆ ಎನ್ನುವುದು ಬೇರೆಲ್ಲಿಂದಲೋ ತಂದುಕೊಳ್ಳುವAಥದ್ದಲ್ಲ. ಅದು ನಿಮ್ಮಲ್ಲೇ ಇದ್ದು, ನಿಮ್ಮ ಇಷ್ಟಾನುಗುಣವಾಗಿ ಹೆಚ್ಚು ಕಮ್ಮಿಯಾಗುತ್ತಿರುತ್ತದೆ. ನೀವು ಯಾವುದೇ ಕೆಲಸ ಮಾಡುವುದಿದ್ದರೂ ಏಕಾಗ್ರಾತೆ ಅಗತ್ಯ, ತಿಂಡಿ ತಿನ್ನಲು ಒದಿಕೊಳ್ಳಲು, ಬಟ್ಟೆಬರೆ ಧರಿಸಲು, ಕೊನೆಗೆ ಕಳ್ಳತನ ಮಾಡಬೇಕೆಂದರೂ ಏಕಾಗ್ರತೆ ಬೇಕಾಗುತ್ತದೆ.
ಮನಸ್ಸಿನ ಅನೇಕಾನೇಕ ಚಟುವಟಿಕೆಗಳಲ್ಲಿ ಒಂದಾಗಿರುವ ಏಕಾಗ್ರತೆಗೆ ಅದರದೇ ಆದ ವೈಶಿಷ್ಯವಿದೆ, ಬೇಸರ, ಖಿನ್ನತೆಯಿಂದಿರುವ ವ್ಯಕ್ತಿಗೆ ಸಿನಿಮಾ ನಾಟಕಗಳ ಪ್ರಸ್ತಾಪ ಉಲ್ಲಾಸವನ್ನುಂಟು ಮಾಡಬಹುದು. ಸಿನಿಮಾ ನಾಟಕ ಎಂದರೆ ಅವನಿಗಿರುವ ಅಮಿತ ಆಸಕ್ತಿಯೇ ಅದಕ್ಕೆ ಕಾರಣ ಅಂದರೆ ಆ ಆಸಕ್ತಿ ಆ ವ್ಯಕ್ತಿಗೆ ಆ ಸಮಯದಲ್ಲಿ ಪ್ರೇರಣೆ ನೀಡಿತೆಂದಾಯ್ತು. ಅದರಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದಾದರೊಂದು ಪ್ರೇರಣೆ ಇದ್ದೇ ಇರುತ್ತದೆ. ಅಂಥ ಪ್ರೇರಣೆ ಆಸಕ್ತಿಯನ್ನು ಉದ್ದೀಪಿಸುತ್ತದೆ. ಆಸಕ್ತಿಯಿಂದ ಏಕಾಗ್ರತೆಯುಂಟಾಗುತ್ತದೆ.

ಅಂದರೆ, ಏಕಾಗ್ರತೆ ಅನ್ನುವುದು ಬೇರೆಲ್ಲೋ ಇರುವುಂಥದ್ದಲ್ಲ, ಅದಿರುವುದು ನಿಮ್ಮೊಳಗೆ ಅದನ್ನು ತಟ್ಟಿ ಎಬ್ಬಿಸಬೇಕಾದ ಅಗತ್ಯ ಹಾಗೂ ಜವಾಬ್ದಾರಿ ನಿಮ್ಮವೇ ಎನ್ನುವುದು ಸ್ವಷ್ಟವಾಯಿತ್ತಲ್ಲವೇ! ಪ್ರತಿಯೊಬ್ಬ ವಿದ್ಯಾರ್ಥಿಯೂ, ‘ನಾನು ಓದುತ್ತಿರುವುದು ನನಗೋಸ್ಕರವೇ ಹೊರತು ನನ್ನ ತಂದೆ-ತಾಯಿ ಗೋಸ್ಕರವಲ್ಲ’ ಎನ್ನುವ ಸತ್ಯವನ್ನು ಗ್ರಹಿಸಿದರೆ ಏಕಾಗ್ರತೆ ತಾನಾಗಿಯೇ ಮೂಡುತ್ತದೆ.

ಏಕಾಗ್ರತೆ ಹೆಚ್ಚಿಸಿಕೊಳ್ಳಲು ಜಾಸ್ತಿ ಶ್ರಮ ಪಡಬೇಕಿಲ್ಲ. ಅಗತ್ಯಾನು ಗುಣವಾಗಿ ಆಸಕ್ತಿಯನ್ನು ಬೆಳಸಿಕೊಳ್ಳುವುದೇ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಸರಳ ಸೂತ್ರ. ನಾಟಕೀಯ ರೀತಿಯಲ್ಲಿ ನಮ್ಮ ಏಕಾಗ್ರತೆಯನ್ನು, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನಗಳೆನ್ನುವವು ಯಾವುವೂ ಇಲ್ಲ. ಆದರೂ ಮನೋಪ್ರವೈತ್ತಿಯನ್ನವಲಂಬಿಸಿ ಕೆಲವೊಂದು ಪದ್ದತಿಗಳು ಇತ್ತೀಚೆಗೆ ಬಳಕೆಗೆ ಬಂದಿವೆ.

ಏಕಾಗ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂದರೆ ಯೋಗಭ್ಯಾಸ ಮಾಡಬಹುದು. ದೇಹ ಮನಸ್ಸುಗಳೆರಡಕ್ಕೂ ಅವಿನಾಭಾವ ಸಂಬAಧವಿದೆ. ಅವು ಒಂದನ್ನೊAದು ಅವಲಂಬಿಸಿರುತ್ತವೆ. ಒಂದರ ಮೇಲೆ ಮತ್ತೋಂದರ ಪ್ರಭಾವ ಸಾಕಷ್ಟಿರುತ್ತದೆ. ನಮ್ಮ ಮನಸ್ಸು ಸ್ಥಿರವಾಗಿಲ್ಲದಾಗ ದೇಹದ ಮೇಲೂ ಅದರ ಪ್ರಭಾವ ಕಂಡು ಬರುತ್ತದೆ. ಆದ್ದರಿಂದ ಮನಸ್ಸಿಗೆ ಸ್ಥಿರತೆ, ಏಕಾಗ್ರತೆ ರೂಢಿಸಬೇಕೆಂದರೆ ಶರೀರವನ್ನು ಕಾಪಾಡಬೇಕಿರುತ್ತದೆ.

ಲೇಖನ: ತನುಜಾ ಗೌಡ, ಚಿಕ್ಕಬಳ್ಳಾಪುರ

Share.
Exit mobile version