ಬೆಂಗಳೂರು ಗ್ರಾಮಾಂತರ ಜಿಲ್ಲೆ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಸುಗಮ ಹಾಗೂ ಸುಸೂತ್ರ ಚುನಾವಣಾ ಕಾರ್ಯ ನಿರ್ವಹಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಮಾದರಿ ನೀತಿ ಸಂಹಿತೆ ಮತ್ತು ಇನ್ನಿತರೆ ಚುನಾವಣಾ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ಹಾಗೂ ಸರ್ಕಾರಿ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಗೋಡೆಬರಹ, ಪೋಸ್ಟರ್ಸ್, ಬ್ಯಾನರ್ಸ್, ಫ್ಲೆಕ್ಸ್ ಇತ್ಯಾದಿಗಳು ಸಂಪೂರ್ಣವಾಗಿ ತೆರವುಗೊಂಡಿರುವುದರ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಸರ್ಕಾರಿ ಪ್ರವಾಸಿ ಮಂದಿರ, ಪರಿವೀಕ್ಷಣಾ ಮಂದಿರಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು ವಿರೂಪಗೊಳಿಸಿದ್ದಲ್ಲಿ ನವೀಕರಣಕ್ಕೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾದ್ಯಂತ ಇರುವ ಪ್ರತಿ ಮತಗಟ್ಟೆಯೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದ್ದು ಅಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿ ಮತ್ತೊಮ್ಮೆ ಖಚಿತ ಪಡಿಸಿಕೊಳ್ಳಬೇಕು ಎಂದರು.ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಹಿನ್ನೆಲೆಯಲ್ಲಿ ಸಭೆ, ಸಮಾರಂಭ ಗಳಿಗೆ ಕಡ್ಡಾಯ ಅನುಮತಿ ಹಾಗೂ ವೆಚ್ಚ ನಿರ್ವಹಣೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.
ಜಿಲ್ಲೆಯ ನಾಲ್ಕು ತಾಲೂಕು ಕಚೇರಿಯಲ್ಲಿ 24/7 ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದ್ದು, ಇವಿಎಂ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸ್ವೀಪ್ ಚಟುವಟಿಕೆಗಳ ಮೂಲಕ ಆಯೋಜಿಸಬೇಕು, ಪಿಡಬ್ಲ್ಯೂಡಿ ಮತದಾರರನ್ನು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಿ, 12ಡಿ ನಮೂನೆ ನೀಡುವುದು. ಸದರಿಯವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನಿರ್ದೇಶಿಸಿದರು.
80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆದಷ್ಟೂ ಮತಗಟ್ಟೆಗಳಿಗೇ ಬಂದು ಮತ ಚಲಾಯಿಸಲು ಅಧಿಕಾರಿಗಳು ಮನವೊಲಿಸಬೇಕು ಎಂದರು. ಚುನಾವಣಾ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆಗೆ ಸಂಬಂಧಿಸಿದಂತೆಯೂ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ನೇತೃತ್ವದಲ್ಲಿ ಚೆಕ್ಪೋಸ್ಟ್ಗಳಿಗೆ ಎಸ್ಎಸ್ಟಿ ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸಾಕಷ್ಟು ಜಾಗರೂಕರಾಗಿ ವಾಹನಗಳ ತಪಾಸಣೆ ಕಟ್ಟುನಿಟ್ಟಾಗಿ ನಡೆಸಲು ಸೂಚಿಸಿದರು.ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕೆಂದರು.
ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಸೆಕ್ಟರ್ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕೊಂಡು ಕಾರ್ಯ ನಿರ್ವಹಿಸಲು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ.ಎಂ.ತಿರ್ಲಾಪುರ ಅವರು ಮಾತನಾಡಿ ಸ್ವೀಪ್ ಚಟುವಟಿಕೆಗಳ ಮುಖಾಂತರ ಹೆಚ್ಚು ಹೆಚ್ಚು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ತರಬೇತುದಾರ ಡಾ. ಅಮೀರ್ ಪಾಷಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್ಗಳು, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಭಾಗವಹಿಸಿದ್ದರು.
BIGG NEWS : ಪಂಚರತ್ನ ಯಾತ್ರೆ ವೇಳೆ ʼ ಮಾಜಿ ಸಿಎಂ ಹೆಚ್ಡಿಕೆಗೆ ಮುತ್ತುಕೊಟ್ಟ ತೆನೆ ಕಾರ್ಯಕರ್ತೆʼ | Former CM HDK