ಬೆಂಗಳೂರು: ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಉದ್ದೇಶದಿಂದ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದು 2024-25ರ ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿತ್ತು. ಇದೀಗ ಬಜೆಟ್‌ ಮಂಡಿಸಿ ತಿಂಗಳೊಳಗಾಗಿ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಉಪ ನೋಂದಣಾಧಿಕಾರಿ ಕಛೇರಿ ಎಂದರೆ ಜನದಟ್ಟಣೆ ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರನ್ನು ಸರ್ಕಾರಿ ಕಛೇರಿಗಳಲ್ಲಿ ಕಾಯಿಸುವುದೂ ಸಹ ಒಂದು ರೀತಿಯ ಶೋಷಣೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಈಗಾಗಲೇ “ಎನಿವೇರ್ ನೋಂದಣಿ ವ್ಯವಸ್ಥೆ”ಯನ್ನು ಜಾರಿಗೊಳಿಸಲಾಗಿದೆ. ದಸ್ತಾವೇಜುಗಳ ನೋಂದಣಿಗಳಲ್ಲಿನ ವಿಳಂಬ ತಡೆಗಟ್ಟಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಿ ಕಛೇರಿ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು ಎಂದಿದ್ದಾರೆ.

ಇದೇ ಕಾರಣಕ್ಕೆ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು 2011ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಉಪನೋಂದಣಿ ಕಛೇರಿಗಳಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಯ ಮೂಲಕ ಆಸ್ತಿ ನೋಂದಣಿ ಸಮಯದಲ್ಲಿ ಜನಸಾಮಾನ್ಯರು ಬೆಂಗಳೂರು ನಗರದ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಛೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ನೋಂದಣಿ ಕಾಯ್ದೆ-1908ರ ಕಲಂ (5) ಹಾಗೂ ಕಲಂ (6) ರಡಿಯಲ್ಲಿ ಅನುವುಮಾಡಿಕೊಡಲಾಗಿತ್ತು ಎಂದು ಹೇಳಿದ್ದಾರೆ.

ಎನಿವೇರ್ ನೋಂದಣಿ ವ್ಯವಸ್ಥೆಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜನ ಸಾಮಾನ್ಯರಿಗೆ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ನೀಡಲು ಈ ಯೋಜನೆ ಸಹಕಾರಿಯಾಗಿದೆ. ಜನರೂ ಸಹ ಇದರ ಉಪಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಬಜೆಟ್‌ನಲ್ಲಿ ನೀಡಿದ ಆಶ್ವಾಸನೆಯಂತೆ ಇಲಾಖೆ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಲ್ಲದೆ, ಪ್ರಾಯೋಗಿಕವಾಗಿ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ದಿನಾಂಕ:-14-03-2024ರಿಂದಲೇ ಜನರಿಗೆ “ಎನಿವೇರ್ ನೋಂದಣಿ” ವ್ಯವಸ್ಥೆಯನ್ನು ಪರಿಚಯಿಸಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರಾಯೋಗಿಕ ಯೋಜನೆಯ ಯಶಸ್ವಿಯನ್ನು ಪರಿಗಣಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಹೀಗಾಗಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಸೇವೆಯನ್ನು ಶೀಘ್ರದಲ್ಲೇ ರಾಜ್ಯಾದ್ಯಂತ ಚಾಲ್ತಿ ತರಲು ಉದ್ದೇಶಿಸಲಾಗಿದೆ. ಭವಿಷ್ಯದಲ್ಲಿ “ಎನಿವೇರ್ ನೋಂದಣಿ” ವ್ಯವಸ್ಥೆಯ ಅಡಿ ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜಿಲ್ಲೆಯ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಈ ನೂತನ ಯೋಜನೆಯು ಸಾರ್ವಜನಿಕರಿಗೆ ಉಪಯುಕ್ತ ವ್ಯವಸ್ಥೆಯಾಗಿರಲಿದೆ. ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆಗಟ್ಟಿ ಸಾರ್ವಜನಿಕರ ಸಮಯ ಉಳಿಸಿ ಕಚೇರಿಯ ಜನದಟ್ಟಣೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ, ಕಛೇರಿ ನೋಂದಣಿ ಕೆಲಸವನ್ನೂ ಜಿಲ್ಲೆಯಾದ್ಯಂತ ಎಲ್ಲಾ ಕಚೇರಿಗಳಿಗೂ ಸಮಾನವಾಗಿ ಹಂಚಿಕೆ ಮಾಡಲು ಈ ಯೋಜನೆ ಸಹಕಾರಿಯಾಗಿರಲಿದೆ ಎಂದು ತಿಳಿಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಛೇರಿಗಳನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಏ.01 ರಿಂದ ಭಾನುವಾರವೂ ಕಛೇರಿಗಳು ಕಾರ್ಯನಿರ್ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ನಗರ ಭಾಗದಲ್ಲಿ ಅನೇಕ ಜನರು ನೋಂದಣಿಗಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜಾ ಹಾಕಿ ಬರಬೇಕಾಗುತ್ತದೆ. ಇದರಿಂದ ಕೆಲವರಿಗೆ ಅನಾನುಕೂಲವೂ ಆಗುತ್ತಿದೆ. ಹೀಗಾಗಿ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಛೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಒಂದು ಕಂದಾಯ ಜಿಲ್ಲೆಯಲ್ಲಿ ಕನಿಷ್ಠ 6-7 ನೋಂದಣಾ ಕಚೇರಿಗಳು ( Registration Office ) ಇರುತ್ತವೆ. ರೋಸ್ಟರ್ ಆಧಾರದ ಮೇಲೆ ಒಂದೊಂದು ವಾರ ಒಂದೊಂದು ನೋಂದಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ತೆಗದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಇದೀಗ “ಎನಿವೇರ್ ನೋಂದಣಿ ವ್ಯವಸ್ಥೆ”ಯನ್ನು ಜಾರಿಗೊಳಿಸುತ್ತಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಮೂಲಕ ಜನರಿಗೆ ಜನರಿಗೆ ಸರಳ ಮತ್ತು ಸುಲಭ ಆಡಳಿತ ನೀಡುವುದೇ ನಮ್ಮ ಧ್ಯೇಯ ಎಂಬುದನ್ನು ಮತ್ತೊಮ್ಮೆ ತಿಳಿಸಲು ಇಚ್ಚಿಸುತ್ತೇನೆ ಎಂದಿದ್ದಾರೆ.

BREAKING: ರಾಜ್ಯ ಸರ್ಕಾರದಿಂದ ಏ.1ರಿಂದ ಭಾನುವಾರವೂ ‘ಸಬ್ ರಿಜಿಸ್ಟ್ರಾರ್ ಕಚೇರಿ’ ತೆರೆಯಲು ಅಧಿಕೃತ ಆದೇಶ

ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ

Share.
Exit mobile version