ಮೈಸೂರು : ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು‌ ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಬಹು ಮಾಲೀಕತ್ವದ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.

ಇನ್ನು ರಾಜ್ಯದಾದ್ಯಂತ ಸುಮಾರು 4 ಕೋಟಿ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಮೈಸೂರು ವಿಭಾಗದಲ್ಲಿ 1.37 ಕೋಟಿ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 36 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 35 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಇದೇ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್‌, ಇನ್ಪುಟ್‌ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್‌ ಜೋಡಣೆ ಮಾಡಬೇಕು. ಸಾರ್ವಜನಿಕರೂ ಸಹ ತನಮ್ಮ ಜಮೀನಿನ ಮಾಲೀಕತ್ವಕ್ಕೆ ಭದ್ರತೆ ಅಗತ್ಯವಿದ್ದರೆ ಅಭಿಯಾನಕ್ಕೆ ರೈತರು ಮುಂದೆ ಬಂದು ಸಹಕಾರ ನೀಡಬೇಕು. ಇದರ ಮೂಲಕ ನಕಲಿ ವ್ಯವಹಾರ ಆಗುವುದನ್ನು ತಡೆಯಬಹುದು. ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ ನೀಡಬಹುದು ಎಂದು ಅವರು ಕರೆ ನೀಡಿದರು.

Share.
Exit mobile version