ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ( Congress Party ) ಕೊಟ್ಟ ಮಾತು, ಬಿಜೆಪಿ (BJP ) ಕೊಟ್ಟ ಮಾತು ಏನು? ಯಾರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಪರಿಶೀಲಿಸಿ. ಸಿದ್ದರಾಮಯ್ಯ ( Siddaramaiah ) ಅವರ ಸರ್ಕಾರ 165 ಭರವಸೆ ನೀಡಿ 159 ಭರವಸೆ ಈಡೇರಿಸಲಾಗಿದೆ. ಬಿಜೆಪಿ 600 ಭರವಸೆಗಳಲ್ಲಿ ಕೇವಲ 50 ಮಾತ್ರ ಈಡೇರಿಸಿದ್ದು, 550 ಈಡೇರಿಸಲು ಆಗಿಲ್ಲ. ನಾವು ಬಸವಣ್ಣನ ತತ್ವದಂತೆ ನುಡಿದಂತೆ ನಡೆಯುತ್ತೇವೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದಂತ ಅವರು, ಕಳೆದ ಮೂರ್ನಾಲ್ಕು ತಿಂಗಳಲ್ಲಿ 3ನೇ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಮೊದಲು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಬಂದಾಗ ಕೇಂಪೇಗೌಡರ ವಂಶಸ್ಥ ಡಿ.ಕೆ.ಶಿವಕುಮಾರ್ ಅವರ ಜತೆ ನಿಲ್ಲುತ್ತೇವೆ ಎಂದು ಸಂಕಲ್ಪ ಮಾಡಿದ್ದಿರಿ. ನಂತರ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಬಂದಾಗ ಹಿರಿಯೂರಿನ ಜನ ಧಾರಾಕಾರ ಮಳೆಯ ನಡುವೆ ನೀಡಿದ ಬೆಂಬಲ ಇಡೀ ರಾಷ್ಟ್ರಕ್ಕೆ ಸಂದೇಶವಾಗಿತ್ತು. ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಕಾರ್ಯಕ್ರಮವನ್ನು ಇಲ್ಲಿ ಆಚರಣೆ ಮಾಡಲಾಗಿತ್ತು. ಈಗ ಜನರ ಧ್ವನಿ, ನೋವು ಕಷ್ಟಗಳಿಗೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಮೂಲಕ ಬಂದಿದ್ದೇವೆ ಎಂದರು.
ಕಳೆದ ಮೂರೂವರೆ ವರ್ಷಗಳಿಂದ ಈ ಬಿಜೆಪಿ ಸರ್ಕಾರ ಇದೆ. ಇಲ್ಲಿನ ಜನ ಬಿಜೆಪಿ ಶಾಸಕಿಯನ್ನು ಆಯ್ಕೆ ಮಾಡಿದ್ದೀರಿ. ಕೃಷ್ಣಪ್ಪ ಅವರ ಪುತ್ರಿ ನಮ್ಮ ಸೋದರಿಯನ್ನು ಗೆಲ್ಲಿಸಿದ್ದೀರಿ. ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಇದೆ. ಆದರೂ ಆಕೆ ಬಿಜೆಪಿ ಶಾಸಕಿಯಾಗಿದ್ದು, ಆಕೆಯನ್ನು ಮಂತ್ರಿ ಮಾಡುತ್ತೇವೆ ಎಂದು ಬಿಜೆಪಿಯವರು ಮೂಗಿಗೆ ತುಪ್ಪ ಸವರುತ್ತಲೇ ಇದ್ದಾರೆ. ಯಾವುದೇ ಕಾರಣಕ್ಕೂ ಅವರು ಮಂತ್ರಿ ಮಾಡುವುದಿಲ್ಲ. ಕಾರಣ ಆ ಸಮಾಜದ ಜನರ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ನಾವು ಈ ಸಮಾಜವರನ್ನು ಕಾರ್ಯಾಧ್ಯಕ್ಷರನ್ನಾಗಿ, ನಾಗರಾಜ್ ಯಾದವ್ ಅವರನ್ನು ಎಂಎಲ್ ಸಿ ಮಾಡಿದ್ದೇವೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಜಯಮ್ಮ ಅವರ ಕುಟುಂಬದವರಿಗೆ ಎಂಎಲ್ ಸಿ ಮಾಡಿದ್ದೆವು ಎಂದು ಹೇಳಿದರು.
ಹೀಗೆ ಕಾಂಗ್ರೆಸ್ ಸದಾ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಮೇಲೆ ನಂಬಿಕೆ ಇಟ್ಟಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಸದಾ ಎಲ್ಲ ವರ್ಗದ ಜನರ ಬಗ್ಗೆ ಚಿಂತನೆ ಮಾಡುತ್ತದೆ. ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ವಿಚಾರವಾಗಿ ಡಬಲ್ ಇಂಜಿನ್ ಸರ್ಕಾರ ನಮ್ಮ ಒತ್ತಡದ ಮೇಲೆ ನಿರ್ಣಯ ಮಾಡಿದ್ದು, ಆದರೆ ಈ ಕುರಿತ ಪ್ರಸ್ತಾಪವನ್ನು ಸಂಸತ್ತಿಗೆ ಕಳುಹಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅದನ್ನು ಕಾನೂನು ರೂಪದಲ್ಲಿ ಜಾರಿ ಮಾಡಲು ಸಾಧ್ಯವಾಗಿಲ್ಲ ಯಾಕೆ? ಮಾನಮರ್ಯಾದೆ ಇದ್ದರೆ ನಾರಾಯಣಸ್ವಾಮಿ ಇಲ್ಲಿಗೆ ಮತ ಕೇಳಲು ಬರಬಾರದು. ಅವರಿಗೆ ನುಡಿದಂತೆ ನಡೆಯಲು ಸಾಧ್ಯವಾಗಲಿಲ್ಲ ಎಂದರು.
ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಗೆ ಶಕ್ತಿ ತಂದಿದೆ. ಇಂದು ಮತಕ್ಕಾಗಿ ಯುದ್ಧ ನಡೆಯುತ್ತಿದೆ. ಬಿಜೆಪಿ ಜಾತಿ ಧರ್ಮದ ಮೇಲೆ ಯುದ್ಧ ಮಾಡಿದರೆ, ನಾವು ಜನರ ಬದುಕು ಕಟ್ಟುವ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಕೇವಲ ಒಂದು ವರ್ಗ ಮುಂದು ಎಂದರೆ, ನಾವು ಎಲ್ಲ ವರ್ಗದವರೂ ಒಂದು ಎಂದು ಹೇಳುತ್ತೇವೆ. ಇಲ್ಲಿ ಸುಮಾರು 5-6 ಮಂದಿ ಟಿಕೆಟ್ ಗೆ ಅರ್ಜಿ ಹಾಕಿದ್ದು, ಅವರು ನೆಪಮಾತ್ರಕ್ಕೆ ಅಭ್ಯರ್ಥಿ. ನಿಜವಾದ ಅಬ್ಯರ್ಥಿ ಎಂದರೆ ನಾನು, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಲ್ಲರೂ ಅಭ್ಯರ್ಥಿಗಳೇ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಹಾಗೂ ಕುಮಾರಣ್ಣನಿಗೆ ಬೆಂಬಲ ನೀಡಿದೆವು. ಅದನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಕುಮಾರಣ್ಣ ಈ ಬಾರಿ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ದಳದ ಕಾರ್ಯಕರ್ತರು ಯಾಕೆ ಅಲ್ಲಿವರೆಗೂ ಕಾಯುತ್ತೀರಿ. ಈ ಶಿವಕುಮಾರಣ್ಣ ಕಾಯುತ್ತಿದ್ದಾನೆ. ಬಂದು ಬೆಂಬಲ ನೀಡಿ, ನಾವು ಜಾತ್ಯಾತೀತ ತತ್ವವನ್ನು ರಕ್ಷಿಸುತ್ತೇವೆ ಎಂದರು.
ಬಿಜೆಪಿಯವರು ನಿಮ್ಮ ಖಾತೆಗಳಿಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಯಾರ ಖಾತೆಗಾದರೂ ಹಣ ಹೋಗಿದೆಯೇ? ಅಡುಗೆ ಅನಿಲ 400 ರಿಂದ 1100 ಆಗಿದೆ, ಅಡುಗೆ ಎಣ್ಣೆ 90 ರಿಂದ 250 ಆಗಿದೆ. ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಹೀಗೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ನಿಮಗೆ 200 ಯುನಿಟ್ ವಿದ್ಯುತ್ ಉಚಿತ, 2000 ರು ಪ್ರತಿ ಕುಟುಂಬದ ಯಜಮಾನಿಗೆ ಖಚಿತ ಅನ್ನೋದು ನಮ್ಮ ಘೋಷಣೆ. ಎರಡೂ ಸೇರಿ ವರ್ಷಕ್ಕೆ 42 ಸಾವಿರ ಪ್ರತಿ ಕುಟುಂಬಕ್ಕೆ ಬರುತ್ತದೆ. 5 ವರ್ಷಕ್ಕೆ 2 ಲಕ್ಷ ರೂಪಾಯಿ. ಇದು ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಸಹಿ ಹಾಕಿರುವ ಗ್ಯಾರಂಟಿ ಯೋಜನೆ. ಬಿಜೆಪಿಯವರು ಇಂತಹ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದಾರಾ? ನಮ್ಮ ಈ ಯೋಜನೆಗಳನ್ನು ನೀವು ಪ್ರತಿ ಮನೆ, ಮನೆಗೂ ತಲುಪಿಸಬೇಕು. ಈ ಯೋಜನೆಗಳನ್ನು ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ನವರು ನಿಮ್ಮ ಮುಂದೆ ಮತ್ತೆ ಮತ ಕೇಳಲು ಬರುವುದಿಲ್ಲ ಎಂದು ತಿಳಿಸಿದರು.
ನಾವು ಕಳೆದ ಸರ್ಕಾರದ ಅವಧಿಯಲ್ಲಿ ಉಚಿತವಾಗಿ 5 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದು ಅದರಂತೆ ಆರಂಭದಲ್ಲಿ 5 ಕೆ.ಜಿ ನೀಡಿ, ನಂತರ ಅದನ್ನು 7 ಕೆ.ಜಿಗೆ ಹೆಚ್ಚಿಸಿದೆವು. ಭಾರತ ಜೋಡೋ ಯಾತ್ರೆ ಸಮಾವೇಶದಲ್ಲಿ ಹೆಜ್ಜೆ ಹಾಕುವಾಗ ವಯಸ್ಸಾದ ಮಹಿಳೆ ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟರು. ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಈ ಸೌತೇಕಾಯಿ ಬೆಳೆದಿದ್ದೇನೆ ತಗೊಳ್ಳಿ ಎಂದರು. ಬಡವರಿಗೆ ಜಮೀನು, ನಿವೇಶನ, ಪಿಂಚಣಿ, ಅಂಗನವಾಡಿ ಕಾರ್ಯಕರ್ತರು, ಅಕ್ಕಿ, ಬಗರ್ ಹುಕುಂ ಸಾಗುವಳಿ, ಉದ್ಯೋಗ, ಮೀಸಲಾತಿ, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಾವು ಈ ಯೋಜನೆ ಕೊಟ್ಟಾಗ ಯಾವುದೇ ನಿರ್ದಿಷ್ಟ ಜಾತಿ, ಧರ್ಮದವರಿಗೆ ನೀಡಿಲ್ಲ. ಎಲ್ಲ ಧರ್ಮದವರಿಗೆ ನೀಡಿದ್ದೇವೆ ಎಂದು ಗುಡುಗಿದರು.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಸಬ್ಸಿಡಿ, ಕೈಗಾರಿಕಾ ಪ್ರದೇಶ, ಅಲ್ಪಸಂಖ್ಯಾತರು, ಪರಿಶಿಷ್ಟರ ಕಲ್ಯಾಣ, ಗ್ರಾಮೀಣಾಭಿವೃದ್ಧಿಗೆ ನೀಡುತ್ತಿದ್ದ ಅನುದಾನ ಕಡಿತ ಮಾಡಿದ್ದಾರೆ. ನಾವು ಪರಿಶಿಷ್ಟರಿಗೆ ಎಸ್ ಸಿಪಿ-ಟಿಎಸ್ ಪಿ ಯೋಜನೆ ಮೂಲಕ ಜನಸಂಖ್ಯಾ ಆಧಾರದ ಮೇಲೆ ಬಜೆಟ್ ನಲ್ಲಿ ಅನುದಾನ ನೀಡಿದರೆ, ಈ ಸರ್ಕಾರ ಅದನ್ನು ನೀಡುತ್ತಿಲ್ಲ. ವಿದ್ಯಾರ್ಥಿ ವೇತನ, ಮಕ್ಕಳಿಗೆ ಸಮವಸ್ತ್ರ, ಶೂ ಕೂಡ ನೀಡುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಈ ಸರ್ಕಾರ ಎಂದರೆ 40% ಕಮಿಷನ್ ಸರ್ಕಾರ ಎಂಬ ಬಿರುದು ತಂದಿದ್ದಾರೆ. ಇದುವರೆಗೂ 1.50 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. ಈ ಲೂಟಿ ನಿಲ್ಲಿಸಿದರೆ ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡಬಹುದು. ಉಚಿತ ವಿದ್ಯುತ್ ನೀಡಲು ಹೇಗೆ ಸಾಧ್ಯ ಎಂದು ಬಿಜೆಪಿ ಮಂತ್ರಿಗಳು ಕೇಳುತ್ತಿದ್ದಾರೆ. ನಾವು ಜನರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಪ್ರಾಯ ಕೇಳಿ ಅಭ್ಯರ್ಥಿ ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರಿಗೆ ನೀವು ಶಕ್ತಿ ತುಂಬಬೇಕು. ನಮ್ಮ ಕಾರ್ಯಕ್ರಮಗಳಿಗೆ ಸಾಗರದಂತೆ ಜನ ಬೆಂಬಲ ಸಿಗುತ್ತಿದೆ. ಬಿಜೆಪಿಯವರಿಗೆ ಇಂತಹ ಒಂದು ಯೋಜನೆ ಮಾಡಲು ಸಾಧ್ಯವಾಯಿತೇ? ಎಂದು ಪ್ರಶ್ನಿಸಿದರು.
ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ನೀಡುವುದಾಗಿ ಹೇಳಿದ್ದೇವೆ. ಈ ಸರ್ಕಾರ ನೀರಾವರಿ ಯೋಜನೆಯಲ್ಲಿ 22 ಸಾವಿರ ಕೋಟಿ ರು. ಅಕ್ರಮ ಟೆಂಡರ್ ಕರೆಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿ ಹಟ್ಟಿಶೇಖರ್ ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಹೇಳಿದ್ದಾರೆ. ಬಿಜೆಪಿ ಎಂಎಲ್ ಸಿ ವಿಶ್ವನಾಥ್ ನೀರಾವರಿ ಟೆಂಡರ್ ನಲ್ಲಿ 20% ಕಮಿಷನ್ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಇವೆಲ್ಲವೂ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಹೀಗಾಗಿ ಇಲ್ಲಿ ಸೇರಿರುವ ನೀವೆಲ್ಲರೂ ಪ್ರತಿ ಮನೆ ಮನೆಗೂ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹೇಳಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು.
BIGG NEWS : ತುಮಕೂರು ದೇಶದ ಅತಿದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆಯಲಿದೆ : ಪ್ರಧಾನಿ ಮೋದಿ
BIGG NEWS : ಬೆಂಗಳೂರಲ್ಲಿ ಹೆಲ್ಮೆಟ್ ಧರಿಸದೆ ವೀಲಿಂಗ್ ಮಾಡ್ತಿದ್ದ ಬೈಕ್ ಸವಾರ ಅರೆಸ್ಟ್ : ದ್ವಿಚಕ್ರವಾಹನ ವಶಕ್ಕೆ