ಚೆನ್ನೈ (ತಮಿಳುನಾಡು) : ಹಿರಿಯ ಬಹುಭಾಷಾ ನಟಿ ಮೀನಾ (Actress Meena) ಅವರ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ.
ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಇದು ಪಾರಿವಾಳದ ಹಿಕ್ಕೆಗಳಿಂದ ಸೋಂಕಿತ ಗಾಳಿಯನ್ನು ಉಸಿರಾಡುವ ಮೂಲಕ ಅಲರ್ಜಿಯನ್ನು ಉಂಟುಮಾಡಿತು. ಈ ವರ್ಷದ ಜನವರಿಯಲ್ಲಿ ಇಡೀ ಕುಟುಂಬವು ಕೋವಿಡ್ ಸೋಂಕಿಗೆ ತುತ್ತಾಗಿತ್ತು. ನಂತರ ಎಲ್ಲರೂ ಚೇತರಿಸಿಕೊಂಡಿದ್ದರು. ಆದ್ರೆ, ವಿದ್ಯಾಸಾಗರ್ ಅವರ ಆರೋಗ್ಯ ಸ್ಥಿತಿ ನಂತರದ ದಿನಗಳಲ್ಲಿ ಹದಗೆಟ್ಟಿತ್ತು ಎನ್ನಲಾಗಿದೆ.
ಕೆಲವು ವಾರಗಳ ಹಿಂದೆ ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದರು ಆದರೆ ದಾನಿಯನ್ನು ಪಡೆಯುವಲ್ಲಿ ತೊಂದರೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ, ಇದು ಮಿದುಳು ಸತ್ತ ರೋಗಿಗಳಿಂದ ಮಾತ್ರ ಸಾಧ್ಯ ಎನ್ನಲಾಗಿದೆ. ವೈದ್ಯರು ನಂತರ ಔಷಧಿಗಳ ಮೂಲಕವೇ ಅವರನ್ನು ಗುಣಪಡಿಸಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್ ಅದು ಫಲ ಕೊಡಲಿಲ್ಲ.
ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಾಯಕಿಯರಲ್ಲಿ ಮೀನಾ ಕೂಡ ಒಬ್ಬರು. ಅವರು 2009 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಮಗಳು ನೈನಿಕಾ ಎಂಬ ಮಗಳಿದ್ದಾಳೆ. ಈಕೆ ‘ತೇರಿ’ ಚಿತ್ರದಲ್ಲಿ ದಳಪತಿ ವಿಜಯ್ ಅವರ ಮಗಳಾಗಿ ನಟಿಸಿದ್ದಾರೆ.
ವಿದ್ಯಾಸಾಗರ್ ಅವರ ಸಾವಿನ ಸುದ್ದಿ ತಿಳಿದು ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಅಂತಿಮ ವಿಧಿವಿಧಾನಗಳು ಇಂದು ನಡೆಯಲಿದೆ ಎಂದು ವರದಿಯಾಗಿದೆ.