ಸುಭಾಷಿತ :

Monday, February 17 , 2020 5:10 AM

ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಗಳು ಚಿರಸ್ಮರಣೀಯರು – ಸಚಿವ ಮಾಧುಸ್ವಾಮಿ


Sunday, January 19th, 2020 4:21 pm

ತುಮಕೂರು : ಸಿದ್ಧಗಂಗಾ ಮಠ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳಿವಂತೆ ಮಾಡಿರುವ ಆಚಾರ-ವಿಚಾರದಲ್ಲಿ ಬಸವಣ್ಣನವರನ್ನು ಅನುಸರಿಸಿ, ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಗಳು ಚಿರಸ್ಮರಣೀಯರಾಗಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಇಂದು ಏರ್ಪಡಿಸಲಾಗಿದ್ದ ಶ್ರೀ ಶಿವಕುಮಾರ ಮಹಾಸ್ವಾಮೀಗಳ ಪ್ರಥಮ ಪುಣ್ಯಸಂಸ್ಮರಣೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶ್ರೀಗಳವರು ಕಷ್ಟ ಕಾರ್ಪಣ್ಯಗಳನ್ನು ಅರಿತು ಬಡವರ ಮತ್ತು ನಿರ್ಲಕ್ಷ್ಯಿತ ಸಮುದಾಯದ ಮಕ್ಕಳಿಗೆ ಅನ್ನ, ವಸತಿ ಹಾಗೂ ಜ್ಞಾನ ದಾಸೋಹವನ್ನು ನೀಡಿ ಎಲ್ಲರೂ ಕ್ಷೇಮವಾಗಿರಲಿ ಎಂದು ಬಯಸಿದವರು. ಅವರ ನಿತ್ಯ ಪ್ರವಚನ ಅಂತರಂಗಕ್ಕೆ ಅರಿವು ಮೂಡಿಸಿ ಜೀವನ ಪಾಠವನ್ನು ಕಲಿಸುವಂತಹದ್ದಾಗಿತ್ತು. ಜಾತಿ, ಮತ, ಕುಲ, ಎಂಬ ತಾರತಮ್ಯ ತಡೆಯುವಲ್ಲಿ ಮತ್ತು ಹಿಂಸೆ ನಿಗ್ರಹಿಸಲು ಅವರು ಹಾಕಿಕೊಟ್ಟ ಸತ್ ಸಂಪ್ರದಾಯ ನಿಜ ಜೀವನಕ್ಕೆ ದಾರಿದೀಪವಾಗಿದೆ ಎಂದು ಅವರು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ ರವಿ ಅವರು ಮಾತನಾಡಿ, ನಡೆ-ನುಡಿಯಲ್ಲಿ ಬದುಕಿನ ಕಾಲಘಟ್ಟದಲ್ಲಿಯೇ ನಡೆದಾಡುವ ದೇವರೆಂದೆ ಹೆಸರು ಮಾಡಿರುವ ಶ್ರೀ ಶಿವಕುಮಾರ ಸ್ವಾಮೀಗಳು ಪರೋಪಕಾರವೇ ಜೀವನದ ನಿಜ ಧರ್ಮವೆಂದು ಆಚರಿಸಿ ತೋರಿಸಿದವರು. ಸಮಾಜವನ್ನು ಸುಸ್ಥಿರ ಸಮಾಜವನ್ನಾಗಿ ನಿರ್ಮಾಣ ಮಾಡಲು ಬಸವಣ್ಣನವರ ಆಂದೋಲನದ ರೀತಿಯಲ್ಲಿ ಮತ್ತೊಂದು ಆಂದೋಲನ ಆಗಬೇಕಾಗಿದೆ. ಜಾತಿ-ಅಸ್ಪುಶ್ಯತೆ ನಿವಾರಣೆಯಾಗಲು ಮನುಷ್ಯ ಮತದ ಸಂಸ್ಕಾರ ಎಲ್ಲರಿಗೂ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಭೌತಿಕವಾಗಿ ಸ್ವಾಮೀಜಿಯವರು ನಮ್ಮೊಂದಿಗೆ ಇಂದು ಇಲ್ಲ ಎಂದು ಭಾವಿಸುವುದು ಬೇಡ ಅವರು ಅಂತರಂಗದ ಪ್ರಾಥ ಸ್ಮರಣೀಯರಾಗಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಅವರು ಮಾಡಿರುವ ಸೇವಾಕಾರ್ಯ ಪುಣ್ಯದ ಫಲದಂತೇ ನಮ್ಮೊಂದಿಗೆ ಇರುತ್ತದೆ ಎಂದು ಅವರು ನುಡಿದರು.

ಸ್ವಾಮೀಜಿ ಅವರ ಬೆಳ್ಳಿ ಪುತ್ಥಳಿಯನ್ನು ಮಾಡಿಸಿಕೊಟ್ಟಿರುವ ಕೈಗಾರಿಕಾದ್ಯೋಮಿ ಮುಖೇಶ್ ಗರ್ಗ್, ದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷರಾದ ಮಣೀಂದರ್ಜೀತ್ಸಿಂಗ್ ಬಿಟ್ಟ, ಅಂಗಾಂಗ ಕಸಿ ತಜ್ಞರಾದ ಡಾ|| ರವೀಂದ್ರನಾಥ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮಣೀಂದರ್ಜೀತ್ಸಿಂಗ್ ಬಿಟ್ಟ ಅವರು ಮಾತನಾಡಿ, ದೇವರನ್ನು ನಾನು ನೋಡಿರುವುದಿಲ್ಲ ಆದರೆ ದೇವರು ಇದ್ದಾನೆ ಎಂದು ಪ್ರತಿದಿವಸ ನಾವು ಪೂಜಿಸುತ್ತೇವೆ. ಆದರೆ ನನ್ನ ನಿಜ ಜೀವನದಲ್ಲಿ ಸ್ವಾಮೀಜಿಯವರಲ್ಲಿ ನಾನು ದೇವರನ್ನು ಕಂಡುಕೊಂಡಿದ್ದೇನೆ.

ಮಾತೃಭೂಮಿ ರಕ್ಷಣೆಗಾಗಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸ್ವಾಮೀಜಿಯವರು ನೀಡಿರುವ ಮಾರ್ಗದರ್ಶನ ಸದಾ ನನ್ನೊಂದಿಗೆ ಇರುತ್ತದೆ ಎಂದು ಅವರು ಹೇಳಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಶಕ್ತಿ ಶಾಲಿ ಪ್ರಧಾನ ಮಂತ್ರಿಯಾಗಲು ಸ್ವಾಮೀಜಿಯವರ ಆಶೀರ್ವಾದ ಮತ್ತು ಕೃಪೆ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಸುತ್ತೂರು ವೀರಾಸಿಂಹಾಸನ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಶಿವಕುಮಾರ ಮಹಾಸ್ವಾಮೀಗಳು ಶ್ರೀಗಂಧದ ಕೊರಡಿನಂತೆ ಶ್ರವಿಸಿ, ಗಂಧದ ಪರಿಮಳವನ್ನು ಅವರ ಸೇವೆಯ ಮೂಲಕ ಹರಡಿದ್ದಾರೆ. ನಿತ್ಯ ಲಿಂಗಪೂಜೆ ಸಮಾಜ ಸೇವೆ ಮಾಡುವುದರ ಜೊತೆಗೆ ಹಸಿದ ಹೊಟ್ಟೆಗೆ ಅನ್ನ, ಜ್ಞಾನತ್ರುಶೆಯನ್ನು ನಿಗಿಸಲು ಅಕ್ಷರ ದಾಸೋಹದ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ. ದೇಶದ ಬಗ್ಗೆ ಅವರಲ್ಲಿರುವ ಕಾಳಜಿ ಕಲ್ಯಾಣ ರಾಷ್ಟ್ರ ಮಾಡುವುದೇ ಆಗಿತ್ತು ಎಂದು ಅವರು ಸ್ಮರಿಸಿದರು. ಸ್ವಾತಂತ್ರಪೂರ್ವ ಮತ್ತು ಸ್ವಾತಂತ್ರ್ಯದ ನಂತರದ ದಿನಗಳನ್ನು ತಮ್ಮ ಕಾಲಘಟ್ಟದಲ್ಲಿ ಕಂಡು ಬಡವರ ಏಳಿಗೆಗೆ ಶ್ರಮಿಸಿದ ಅವರ ಕೀರ್ತಿ ಕಳಸಪ್ರಾಯವಾಗಿ ಅಜರಾಮರವಾಗಿದೆ ಎಂದು ನುಡಿದರು.

ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಬೆಂಗಳೂರು ಬೇಲಿಮಠದ ಅಧ್ಯಕ್ಷರಾದ ಶ್ರೀ ಶಿವರುದ್ರ ಮಹಾಸ್ವಾಮೀಗಳು, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಸೇರಿದಂತೆ ಮತ್ತಿತರ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಲೋಕಸಭಾ ಸದಸ್ಯರಾದ ಜಿ.ಎಸ್ ಬಸವರಾಜು, ಶಾಸಕರಾದ ಬಿ.ಜಿ.ಜ್ಯೋತಿಗಣೇಶ್, ಕೆ.ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಸೊಗಡು ಶಿವಣ್ಣ, ಮಹಾಪೌರರಾದ ಲಲಿತ ರವೀಶ್, ಕಾಂತರಾಜು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಸ್ವಾಮೀಜಿಯವರ ಕುರಿತು ಪ್ರಕಟಗೊಂಡಿರುವ ಪುಸ್ತಕಗಳ ಬಿಡುಗಡೆ ಮಾಡಲಾಯಿತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions