ಮುಂಬೈ: ಇ-ಮೇಲ್ ಮೂಲಕ ನಟ ಸಲ್ಮಾನ್ ಖಾನ್(Salman Khan) ಗೆ ಬಂದಿರುವ ಜೀವ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ ಬ್ರಿಟನ್ ಲಿಂಕ್ ಪತ್ತೆಯಾಗಿದೆ.
ಸಂದೇಶ ಕಳುಹಿಸಲಾದ ಇ-ಮೇಲ್ ಐಡಿಯ ಬಗ್ಗೆ ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ಮೇಲ್ ಯುಕೆ ಮೂಲದ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲ್ಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಖ್ಯೆ ಯಾರ ಹೆಸರಿನಲ್ಲಿ ದಾಖಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಈಗ ಪ್ರಯತ್ನಿಸುತ್ತಿದ್ದಾರೆ.
ಕಳೆದ ವಾರ, ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಜೈಲಿನಲ್ಲಿರುವ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗಾರ್ಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಂದ್ರಾ ಪೊಲೀಸರು ಐಪಿಸಿ ಸೆಕ್ಷನ್ 506(2),120(ಬಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಲ್ಮಾನ್ ಖಾನ್‌ಗೆ ಬೆದರಿಕೆ ಇದೆ ಎಂದು ಗ್ರಹಿಸಿದ ಮುಂಬೈ ಪೊಲೀಸರು Y+ ವರ್ಗದ ಭದ್ರತೆಯನ್ನು ಒದಗಿಸಿದ್ದಾರೆ. ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರ ಬಂದ ನಂತರ ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.